ಕ್ರೀಡೆ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಬೆಳಗಿನ ಪ್ರಮುಖ ಸುದ್ದಿಗಳು

  1. ಇದೇ 18ರಂದು ಮುಕ್ತಾಯಗೊಂಡಿರುವ2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜೂನ್ ೩ನೇ ವಾರದಲ್ಲಿ ಪ್ರಕಟಿಸಲಾಗುವುದು; ಇದೇ 24ರಿಂದ ಮೌಲ್ಯಮಾಪನ ಕಾರ್ಯ ಆರಂಭಗೊಂಡು, ಜೂನ್ 15ರಂದು ಮುಕ್ತಾಯಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
  2. ಪ್ರಧಾನಮಂತ್ರಿಗಳ ಆಶಯದಂತೆ ಆತ್ಮನಿರ್ಭರ ಕೃಷಿಗೆ, ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಬಹಳ ಉಪಕಾರಿಯಾಗಿದ್ದು, ಇದರಿಂದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ರಸಗೊಬ್ಬರ ಮತ್ತು ನೀರಿನ ಬಳಕೆ ಕಡಿಮೆ ಮಾಡಿ ಅಧಿಕ ಉತ್ಪಾದನೆಯನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಡ್ರೋನ್ ಪೈಲಟ್‌ಗಳ ತರಬೇತಿ ಕಾರ್ಯಕ್ರಮವನ್ನು ಇಂದಿನಿಂದ ಮುಂದಿನ ತಿಂಗಳ 6ರ ವರೆಗೆ ಆಯೋಜಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನ ಗೌಡ ತಿಳಿಸಿದ್ದಾರೆ.
  3. ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವತಿಯಿಂದ ಇದೇ 27 ರಂದು ’ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದಲ್ಲಿ ನಡೆಯಲಿದೆ. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಕುಂದು-ಕೊರತೆ ಆಲಿಸಲಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
  4. ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರಾಧಾನ್ಯತೆ ನೀಡುತ್ತಿದೆ ಹಾಗೂ ಅದನ್ನು ಒಂದು ಉದ್ಯಮವೆಂದು ಪರಿಗಣಿಸುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
  5. ಸುಪ್ರೀಂಕೋರ್ಟ್ ಆದೇಶದಂತೆ 8 ವಾರದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ವಾರ್ಡ್ ಪುನರ್ ವಿಂಗಡಣೆ ಮತ್ತು ಒಬಿಸಿ ಮೀಸಲು ನಿಗದಿಪಡಿಸಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
  6. ಕೋವಿಡ್ ಸೊಂಕಿನಿಂದ ರಕ್ಷಿಸಿಕೊಳ್ಳಲು ಲಸಿಕೆಯ ಸಂಪೂರ್ಣ ಡೋಸ್‌ಗಳನ್ನು ಪಡೆಯುವುದು ಅತೀ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಉತ್ತರಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ಉಪಕೇಂದ್ರ ಮಟ್ಟದಲ್ಲಿ ಕೋವಿಡ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  7. ಚಾಮರಾಜನಗರ ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿರುವ ಪಡಿತರದಾರರು, ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ವಿವರಗಳನ್ನು ಇ-ಕೆವೈಸಿ ಮಾಡಿಸಲು ಈ ತಿಂಗಳ ಅಂತ್ಯದವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
  8. ದೇಶದ ರೈತರ ಅನುಕೂಲಕ್ಕಾಗಿ ರಸಗೊಬ್ಬರಗಳಿಗೆ 2 ಲಕ್ಷದ 39ಸಾವಿರ ಕೋಟಿ ರೂಪಾಯಿ ಸಹಾಯಧನವನ್ನು ಕೇಂದ್ರ ಸರಕಾರ ನೀಡುತ್ತಿದೆ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಚೀಲ ಡಿಎಪಿ ಬೆಲೆ 3 ಸಾವಿರದ 851ರೂಪಾಯಿ ಇದ್ದು, ರೈತರಿಗೆ ಕೇವಲ 1 ಸಾವಿರದ 361ರೂಪಾಯಿಗೆ ಮಾರಾಟ ಮಾಡುವ ಮೂಲಕ 2 ಸಾವಿರದ 501 ರೂಪಾಯಿ ಸಹಾಯಧನ ನೀಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version