ದಿನದ ಸುದ್ದಿ

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಪ್ರಮುಖ ಯೋಜನೆಗಳು

Published

on

ಸುದ್ದಿದಿನ ಡೆಸ್ಕ್ : ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದಾವಣಗೆರೆ ನಗರವು 2016 ರಲ್ಲಿ ಮೊದಲನೇ ಹಂತದಲ್ಲಿ ಆಯ್ಕೆಯಾಗಿರುತ್ತದೆ, ಈ ಯೋಜನೆಯು 5 ವರ್ಷಗಳ ಅವಧಿಯದ್ದಾಗಿದ್ದು, ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದ ಪಾಲು 50-50ರ ಅನಾಪಾತದಲ್ಲಿರುತ್ತದೆ.

ದಾವಣಗೆರೆ ಸ್ಮಾರ್ಟ್ಸಿಟಿ ಯೋಜನೆಯಡಿ ಒಟ್ಟಾರೆ ರೂ.1,074 ಕೋಟಿಗಳ ಯೋಜನಾ ಮೊತ್ತದಲ್ಲಿ 115 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದುವರೆಗೂ ರೂ.807 ಕೋಟಿಗಳು ಬಿಡುಗಡೆಯಾಗಿರುತ್ತದೆ.

2022 ರ ಮೇ ಅಂತ್ಯಕ್ಕೆ ಒಟ್ಟು ಯೋಜನಾ ವೆಚ್ಚ ರೂ.620.51 ಕೋಟಿಗಳಾಗಿದ್ದು, 72 ಕಾಮಗಾರಿಗಳು ಪೂರ್ಣಗೊಂಡಿವೆ, ಉಳಿದ 43 ಕಾಮಗಾರಿಗಳು ವಿವಿಧ ನಿರ್ಮಾಣ ಹಂತದಲ್ಲಿರುತ್ತವೆ.

ಮಳೆಗಾಲದಲ್ಲಿ ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಸ್ಮಾರ್ಟ್ಸಿಟಿ ಯೋಜನೆಯಲ್ಲಿ ರೂ.118.90 ಕೋಟಿ ವೆಚ್ಚದಲ್ಲಿ 10 ಯೋಜನೆಗಳ ಮುಖಾಂತರ ಸುಮಾರು 51.31 ಕಿ.ಮೀ. ಉದ್ದದ ಮುಖ್ಯ ಚರಂಡಿಗಳನ್ನು ಅಭಿವೃದ್ಧಿಪಡಿಸಲು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ 42.29 ಕಿ.ಮೀ.ಗಳಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ದಾವಣಗೆರೆ ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವರ್ತುಲ ರಸ್ತೆ, ಸ್ಮಾರ್ಟ್ ರಸ್ತೆಗಳು, ಪುಟ್‌ಪಾತ್ ಅಭಿವೃದ್ಧಿ, ಜಂಕ್ಷನ್ ಅಭಿವೃದ್ಧಿ, ರಸ್ತೆಯ ಮಾರ್ಕಿಂಗ್, ಸೈನ್ ಬೋರ್ಡ್ ಅಳವಡಿಕೆ ಸೇರಿದಂತೆ ಒಟ್ಟಾರೆ 17 ಕಾಮಗಾರಿಗಳ ಮುಖಾಂತರ ರೂ.231.69 ಕೋಟಿಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತವೆ.

ಸ್ಮಾರ್ಟ್ಸಿಟಿ ಯೋಜನೆಯಡಿ ನಗರಕ್ಕೆ ಎ.ಡಿ.ಬಿ. ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ನಿರಂತರ (24/7) ಕುಡಿಯುವ ನೀರು ಸರಬರಾಜು ಯೋಜನೆಯ ಯಶಸ್ಸಿಗೆ ಅವಶ್ಯವಿರುವ ನೀರಿನ ಮೂಲವನ್ನು ಶಾಶ್ವತವಾಗಿ ಬಲಪಡಿಸಲು ತುಂಗಭದ್ರಾ ನದಿಗೆ ಅಡ್ಡಲಾಗಿ ರೂ.91.86 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.

ನಗರದಲ್ಲಿ 3 ಬಸ್ ನಿಲ್ದಾಣಗಳ ಪುನರ್ ನಿರ್ಮಾಣ ಹಾಗೂ 1 ಹೊಸ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗಳನ್ನು ರೂ.162.00 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಕೆ.ಆರ್.ರಸ್ತೆಯಲ್ಲಿನ ಬಸ್ ನಿಲ್ದಾಣದ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಮಂಡಕ್ಕಿ ಭಟ್ಟಿ ಮತ್ತು 4 ಆಶ್ರಯ ಬಡಾವಣೆಗಳ ಸಂಪೂರ್ಣ ಅಭಿವೃದ್ಧಿಯನ್ನು ರೂ.55.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಸರ್ಕಾರಿ ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ ಮತ್ತು ಡಿ ಸೆಂಟರ್ ಕಾಮಗಾರಿಯನ್ನು ರೂ. 4.50 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಇವುಗಳಲ್ಲದೇ ವಿದ್ಯುತ್ ಚಿತಾಗಾರ ಕಾಮಗಾರಿ, ಕುಂದುವಾಡ ಕೆರೆಯ ಅಭಿವೃದ್ಧಿ, ಪಾರ್ಕ್ಗಳಲ್ಲಿ ಜಿಮ್ ಸಾಮಗ್ರಿಗಳ ಅಳವಡಿಕೆ, ಗ್ಲಾಸ್‌ಹೌಸ್‌ನಲ್ಲಿ ಲೇಸರ್ ಶೋ ಕಾಮಗಾರಿ, ಪುಷ್ಕರಣಿ ಕಾಮಗಾರಿ, ಕಲಾ ಕಾಲೇಜಿನಲ್ಲಿ ಬಯಲು ರಂಗ ಮಂದಿರ ಮತ್ತು ಥೀಮ್‌ಪಾರ್ಕ್ ನಿರ್ಮಾಣ ಸೇರಿದಂತೆ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಗರದ ಸರ್ವತೋಮುಖ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version