ಲೈಫ್ ಸ್ಟೈಲ್
ಮಲೇರಿಯಾ: ಮುಂಜಾಗೃತೆ ಅನಿವಾರ್ಯ
ಮಲೇರಿಯಾ ಎಂದ ಕೂಡಲೇ ನೆನಪಾಗುವುದು ಸೊಳ್ಳೆಗಳಿಂದ ಹರಡುವ ರೋಗ. ಹೀಗಂತ ಬಹುತೇಕ ಯಾವ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ಇದು ಅರಿವಿದೆ ಎಂದುಕೊಳ್ಳುತ್ತೇನೆ. ಈ ಬೇಸಿಗೆಯಲ್ಲಿ ಇದ್ಯಾವ ಮಲೇರಿಯಾ ಬಗ್ಗೆ ಹೇಳಹೊರಟಿದ್ದೀರಲ್ಲ ಎಂದುಕೊಳ್ಳಬೇಡಿ. ಇಂದು ಮಲೇರಿಯಾಕ್ಕಾಗಿ ಒಂದು ಮುಂಜಾಗೃತಿಯ ಹೆಜ್ಜೆ ಇಡುವ ದಿನ, ‘ವಿಶ್ವ ಮಲೇರಿಯಾ ದಿನ’.
ಪ್ರತಿವರ್ಷ ಏಪ್ರಿಲ್ 25ರಂದು ‘ವಿಶ್ವ ಮಲೇರಿಯಾ ದಿನ’ ಎಂದು ಆಚರಿಸಲಾಗುತ್ತದೆ.
ಇದಲ್ಲದೇ ಮೇ 1 -7 ನ್ನು ‘ಮಲೇರಿಯಾ ವಿರೋಧಿ ವಾರ’ ಹಾಗೂ ಜೂನ್ 1-30 ನ್ನು ‘ಮಲೇರಿಯಾ ವಿರೋಧಿ ತಿಂಗಳು’ ಎಂಬುದೂ ಆರೋಗ್ಯ ಇಲಾಖೆಯಲ್ಲಿ ಆಚರಣೆಯಲ್ಲಿ ಇದೆ. ಇದಕ್ಕೆಲ್ಲಾ ಕಾರಣ ಇಷ್ಟೆ, ಈ ರೋಗವು ಮಳೆಗಾಲದಲ್ಲಿ ನೀರು ಎಲ್ಲಿಬೇಕಲ್ಲಿ ನಿಂತುಕೊಂಡು ಜುಲೈ ನಿಂದ ನವೆಂಬರ್ ತಿಂಗಳವರೆಗೆ ಮಲೇರಿಯಾಕ್ಕೆ ಬೇಕಿರುವ ಸೊಳ್ಳೆಗಳ ಅತಿ ಹೆಚ್ಚು ಉತ್ಪತ್ತಿಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿ ಮಲೇರಿಯಾಕ್ಕೆ ತುತ್ತಾದರೆ, ಕ್ರಮೇಣ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾದಂತೆ ಮಲೇರಿಯಾ ಹರಡುವಿಕೆಯೂ ಜಾಸ್ತಿಯಾಗುತ್ತದೆ. ಆದರೆ ಅವೆಲ್ಲದಕ್ಕೂ ಮೊದಲೇ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಮಲೇರಿಯಾ ದಿಂದ ನರಳುವಿಕೆಯ ಪ್ರಮಾಣ ಕಡಿಮೆಯಾಗುವುದೆಂಬ ಉದ್ದೇಶವಿದೆ.
ಮಲೇರಿಯಾ ರೋಗವು ಪ್ಲಾಸ್ಮೋಡಿಯಮ್ ಎಂಬ ಪರಾವಲಂಬಿ ಸೂಕ್ಷ್ಮಾಣುಜೀವಿಯಿಂದ ಸೋಂಕಿತವಾದ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯ ಮೂಲಕ ಬರುತ್ತದೆ. ಸೋಂಕಿತ ಸೊಳ್ಳೆಯು ತನ್ನ ದೇಹದಲ್ಲಿ ಮಲೇರಿಯಾಕ್ಕೆ ಕಾರಣವಾಗಿರುವ ಸೂಕ್ಷ್ಮಾಣುಜೀವಿಯನ್ನು ಮನುಷ್ಯನ ದೇಹದೊಳಕ್ಕೆ ಸೇರಿಸುತ್ತದೆ.
ಪ್ಲಾಸ್ಮೋಡಿಯಮ್ ವಿಧಗಳು
- ಪ್ಲಾಸ್ಮೋಡಿಯಮ್ ಫಾಲ್ಸಿಪಾರಮ್
- ಪ್ಲಾಸ್ಮೋಡಿಯಮ್ ವೈವ್ಯಾಕ್ಸ್
- ಪ್ಲಾಸ್ಮೋಡಿಯಮ್ ಮಲೇರಿಯೇ
- ಪ್ಲಾಸ್ಮೋಡಿಯಮ್ ಓವಲೆ
- ಪ್ಲಾಸ್ಮೋಡಿಯಮ್ ನೊಲೆಸಿ
ರೋಗೋತ್ಪತ್ತಿ
ಮಲೇರಿಯಾ ರೋಗಪೀಡಿತ ವ್ಯಕ್ತಿಗೆ ಕಚ್ಚಿದ ಅನಾಫಿಲಿಸ್ ಸೊಳ್ಳೆ ರಕ್ತವನ್ನು ಹೀರಿಕೊಳ್ಳುವಾಗ ರೋಗಿಯ ರಕ್ತದಲ್ಲಿರುವ ಪ್ಲಾಸ್ಮೋಡಿಯಮ್ ಸೂಕ್ಷ್ಮಾಣುಜೀವಿಯ ಒಂದು ಲೈಂಗಿಕ ಪ್ರಕಾರದ ಜೀವಿಯೂ ಸೊಳ್ಳೆಯನ್ನು ಸೇರಿಕೊಳ್ಳುತ್ತದೆ. ನಂತರ ಅದು ಸೊಳ್ಳೆಯ ದೇಹದಲ್ಲೇ ವಿವಿಧ ಪ್ರಕಾರಗಳಾಗಿ ಮಾರ್ಪಾಡುಗೊಂಡು, ನಂತರ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಅದು ಮತ್ತೆ ಆ ವ್ಯಕ್ತಿಯ ರಕ್ತವನ್ನು ಸೇರಿಕೊಂಡು, ನಂತರ ಯಕೃತ್ತು, ಮತ್ತೆ ಪುನಃ ರಕ್ತವನ್ನು ಪ್ರವೇಶಿಸಿ ಕಣಗಳನ್ನು ಹಾನಿಗೊಳಿಸುತ್ತವೆ.
ಗುಣಲಕ್ಷಣಗಳು
- ಚಳಿ-ಜ್ವರ
- ಬೆವರುವಿಕೆ
- ಒಣ ಕೆಮ್ಮು
- ಹೊಟ್ಟೆಯಲ್ಲಿ ಸಂಕಟ, ವಾಂತಿ
- ತಲೆನೋವು
- ಕೈ ಕಾಲುಗಳಲ್ಲಿ ಸೆಳೆತ, ನೋವು
- ಬೆನ್ನು ನೋವು
ರೋಗ ಪರಿಣಾಮಗಳು
- ಸೆರೆಬ್ರಲ್ ಮಲೇರಿಯಾ ಮತ್ತು ಕೋಮಾ
- ಆಮ್ಲದ ಶೇಖರಣೆ
- ಕಿಡ್ನಿಗಳ ವಿಫಲ
- ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳುವುದು
- ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗುವುದು
- ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞಾಹೀನ ಸ್ಥಿತಿ ತಲುಪುವುದು
- ರಕ್ತ ಸೋರುವಿಕೆ ಮತ್ತು ರಕ್ತನಾಳಗಳೊಳಗೆ ವಿಪರೀತ ರಕ್ತ ಹೆಪ್ಪುಗಟ್ಟುವಿಕೆ
- ಸ್ನಾಯು ಸೆಳೆತಗಳು
ರೋಗನಿರ್ಣಯ ಮತ್ತು ಚಿಕಿತ್ಸೆ
ರಕ್ತಪರೀಕ್ಷೆ: ರಕ್ತದಲ್ಲಿ ಪ್ಲಾಸ್ಮೋಡಿಯಮ್ ಪರಾವಲಂಬಿ ಜೀವಿ ಇರುವುದನ್ನು ವಿವಿಧ ತಂತ್ರಜ್ಞಾನದ ಪರೀಕ್ಷೆಗಳ ಮೂಲಕ ಮಲೇರಿಯಾ ರೋಗನಿರ್ಣಯ ಮಾಡಲಾಗುವುದು
ರೋಗ ನಿರ್ಣಯವಾದ ನಂತರ ಅದಕ್ಕೆ ಕ್ಲೋರೊಕ್ವಿನ್, ಪ್ರೈಮಕ್ವಿನ್, ಅರ್ಟೆಮಿಸಿನಿನ್, ಮುಂತಾದ ಧಾತುಗಳನ್ನೊಳಗೊಂಡ ಸೂಕ್ತ ಚಿಕಿತ್ಸಾ ಪ್ರಕಾರವನ್ನು ಆಯ್ಕೆ ಮಾಡಿ ಸಲಹೆ ನೀಡಲಾಗುತ್ತದೆ.
ರೋಗ ತಡೆಯುವಿಕೆ
ಈ ರೋಗವನ್ನು ತಡೆಯಲು ಯಾವುದೇ ಲಸಿಕೆಗಳಿಲ್ಲ. ಆದರೆ ರೋಗ ಹರಡುವುದನ್ನು ತಡೆಗಟ್ಟಲು ಹಲವು ಮಾರ್ಗಗಳಿವೆ. ಸೊಳ್ಳೆಗಳನ್ನು ನಿರ್ಮೂಲನೆ ಮಾಡುವುದು
ಸೊಳ್ಳೆಗಳು ಕಡಿಯದಂತೆ ಅಥವಾ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಂತೆ ಸ್ಪ್ರೇ, ಚರ್ಮ ಪೂರ್ತಿ ಮುಚ್ಚಿಕೊಳ್ಳುವಂತೆ ಬಟ್ಟೆಗಳನ್ನು ಧರಿಸುವಂತೆ ಎಚ್ಚರ ವಹಿಸುವುದು
ಮನೆಯೊಳಗೆ ಅಥವಾ ಮನೆಯ ಸುತ್ತ ನೀರು ನಿಲ್ಲುವ ಸ್ಥಳಗಳಿದ್ದಲ್ಲಿ ಅವುಗಳನ್ನು ತೆರವುಗಳಿಸುವುದು. ಕೀಟನಾಶಕ ಡಿಡಿಟಿ ಬಳಕೆ ಮಾಡುವುದು. ಮರಿಸೊಳ್ಳೆಗಳು ಅಥವಾ ಲಾರ್ವಾಗಳು ಉತ್ಪತ್ತಿಯಾಗುವ ಸ್ಥಳಗಳನ್ನು ಸ್ವಚ್ಛಗೊಳಿಸುವುದು. ಮನೆಯಲ್ಲಿ ರಾತ್ರಿ ಮಲಗುವಾಗ ಸೊಳ್ಳೆಪರದೆಗಳನ್ನು ಬಳಸುವುದು. ಕುಡಿಯುವ ನೀರು ಮತ್ತು ಬಳಸುವ ನೀರಿನ ಕಂಟೇನರ್‍ಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು
ಶಾಲಾ ಕಾಲೇಜುಗಳಲ್ಲಿ ಮಲೇರಿಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಬೇಕು. ಈ ಮೊದಲು ತಿಳಿಸಿರುವ ಮಲೇರಿಯಾದ ಯಾವುದೇ ಗುಣಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಮಾಲೋಚನೆ ಪಡೆಯಬೇಕು.