ದಿನದ ಸುದ್ದಿ
ರಿಯಲ್ ‘ಮಾಲ್ಗುಡಿ ಡೇಸ್ ‘ರೇಲ್ವೆ ಸ್ಟೇಷನ್ ..!
ನೀವು 90s kid ಆಗಿದ್ರೆ ಮಾಲ್ಗುಡಿ ಡೇಸ್ ಸೀರಿಯಲ್ ನೋಡಿರ್ತೀರ. ಸ್ವಾಮಿ ಮತ್ತು ಆತನ ಗೆಳೆಯರ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಹಾಗೇ ಇದ್ರಲ್ಲಿ ಬರೋ ಮಾಲ್ಗುಡಿ ರೇಲ್ವೆ ಸ್ಟೇಷನ್ ಮೆರಯೋಕಾಗಲ್ಲ. ಆರ್.ಕೆ ನಾರಾಯಣ್ ಅವರ ಸಣ್ಣ ಕಥೆಗಳನ್ನ ಆಧರಿಸಿ ಮಾಲ್ಗುಡಿ ಡೇಸ್ ಚಿತ್ರಿಸಲಾಗಿತ್ತು. ನಾರಾಯಣ್ ಅವರ ಕಥೆಯಲ್ಲಿ ಮಾಲ್ಗುಡಿ ಅನ್ನೋದು ಕಾಲ್ಪನಿಕ ಸ್ಥಳವಾದ್ರೂ, ನಿಜವಾದ ಊರಿನಂತೆಯೇ ಅನ್ನಿಸುತ್ತದೆ. ಮಾಲ್ಗುಡಿ ರೇಲ್ವೆ ನಿಲ್ದಾಣಕ್ಕೆ ಒಮ್ಮೆ ಭೇಟಿ ಕೊಡಬೇಕು ಅಂತ ಅನ್ನಿಸದೇ ಇರದು. ಆ ಆಸೆ ನಿಜವಾಗೋ ಟೈಂ ಬಂದಿದೆ.
ಶಿವಮೊಗ್ಗದಿಂದ 34 ಕಿ.ಮೀ ದೂರದಲ್ಲಿರೋ ಅರಸಾಳು ರೇಲ್ವೆ ನಿಲ್ದಾಣಕ್ಕೆ ಮಾಲ್ಗುಡಿ ಅಂತ ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಹೊಸನಗರ ತಾಲೂಕಿನಲ್ಲಿರೋ ಈ ರೇಲ್ವೆ ನಿಲ್ದಾಣಕ್ಕೆ ಮಾಲ್ಗುಡಿ ಅಂತ ಹೆಸರಿಡಲು ಸರ್ಕಾರದಿಂದ ಅನುಮತಿ ಸಿಕ್ಕಿದೆ.
ಅರಸಾಳು ಯಾವುದೋ ಹತ್ತರಲ್ಲಿ ಒಂದು ರೇಲ್ವೆ ನಿಲ್ದಾಣವಲ್ಲ. ಇದಕ್ಕೆ ವಿಶೇಷ ಮಹತ್ವವೂ ಇದೆ. ನಟ, ನಿರ್ದೇಶಕ ಶಂಕರ್ ನಾಗ್ ಮಾಲ್ಗುಡಿ ಡೇಸ್ ಚಿತ್ರೀಕರಣ ಮಾಡಿದ್ದು ಇದೇ ಸ್ಥಳದಲ್ಲಿ. ಹೀಗಾಗಿ ಈ ರೇಲ್ವೆ ಸ್ಟೇಷನ್ಗೆ ಮಾಲ್ಗುಡಿ ಅಂತ ಮರುನಾಮಕರಣ ಮಾಡುವುದರ ಜೊತೆಗೆ ₹1.3 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲು ನೈಋತ್ಯ ರೇಲ್ವೆ ಮುಂದಾಗಿದೆ.
ಮಾಲ್ಗುಡಿ ಡೇಸ್ ಚಿತ್ರೀಕರಣ ನಡೆದ ಅರಸಾಳುವಿನ ಹಳೇ ರೇಲ್ವೆ ನಿಲ್ದಾಣದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಇದನ್ನ ರೇಲ್ವೆ ಮ್ಯೂಸಿಯಂ ಮಾಡೋ ಪ್ಲಾನ್ ಕೂಡ ಇದೆ. ಮಾಲ್ಗುಡಿ ಡೇಸ್ನಲ್ಲಿ ಸ್ವಾಮಿ ಪಾತ್ರ ನಿರ್ವಹಿಸಿದ್ದ ಮಾಸ್ಟರ್ ಮಂಜುನಾಥ್ ರೇಲ್ವೆ ನಿಲ್ದಾಣ ಮರುನಾಮಕರಣ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷ್ ಕಾಲದ ಸೀನ್ಗಳನ್ನ ಚಿತ್ರೀಕರಿಸೋಕೆ ಅರಸಾಳು ರೇಲ್ವೆ ನಿಲ್ದಾಣ ಅತ್ಯಂತ ಸೂಕ್ತವಾಗಿತ್ತು. ಮೊದಲನೇ ಶಾಟ್ ಬಲ ಭಾಗದ ಪ್ಲಾಟ್ಫಾರ್ಮ್ನಲ್ಲಿ ತೆಗೆಯಲಾಗಿತ್ತು. 20 ನಿಮಿಷಗಳ ನಂತರ ರೈಲು ಮರಳಿ ಬಂದಾಗ ಮತ್ತೊಂದು ಭಾಗದಲ್ಲಿದ್ದ ಪ್ಲಾಟ್ಫಾರ್ಮ್ನಲ್ಲಿ ಎರಡನೇ ಶಾಟ್ ತೆಗೆಯಲಾಯಿತು ಎಂದು ಅವರು ಆ ದಿನಗಳನ್ನ ಮೆಲುಕು ಹಾಕಿದ್ರು. ಸದ್ಯ ಈ ರೇಲ್ವೆ ನಿಲ್ದಾಣದಲ್ಲಿ 5 ರೈಲುಗಳು ಸಾಗುತ್ತವೆ. ಒಂದು ರೈಲು ಮಾತ್ರ ನಿಲುಗಡೆ ಆಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401