ದಿನದ ಸುದ್ದಿ

ಮಂಡ್ಯದ ‘ಐದು ರೂಪಾಯಿ ಡಾಕ್ಟ್ರು’ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು ಗೊತ್ತಾ..?

Published

on

  • ಸುಮಲತಾ ಅಂಬರೀಶ್, ಲೋಕ ಸಭಾ ಸದಸ್ಯೆ, ಮಂಡ್ಯ

ನನ್ನ ಮಂಡ್ಯ ನನ್ನ ಹೆಮ್ಮೆ

ಲ್ಲರಿಗೂ ಮಣ್ಣಿನ ಗುಣ ಇರುತ್ತಂತೆ. ಅಂತ ಮಂಡ್ಯದ ಮಣ್ಣಿನ ಗುಣ ಇರೋ ಒಬ್ಬ ವ್ಯಕ್ತಿ ಇವರು. ಇವರ ಬಗ್ಗೆ ನೀವು ಕೇಳಿರಬಹುದು.

ಥಟ್ಟಂತೆ ನೋಡಿದರೆ ಅವರು ಸಾಮಾನ್ಯರಲ್ಲಿ ಸಾಮಾನ್ಯ. ಆದರೆ, ಅವರ ಮುಂದೆ ಸಾಲುಗಟ್ಟಿ ನಿಲ್ಲುವ ಜನ, ಇವರು ತಪಾಸಣೆ ಮಾಡಿ ಬರೆದು ಕೊಡುವ ಔಷದಿ ಚೀಟಿ, ಇವೆಲ್ಲ ಕಣ್ಣಿಗೆ ಕಟ್ಟಿದಂತೆ ಬರುತ್ತೆ, ಇವರ ಹೆಸರು ಕೇಳಿದರೆ. ಅವರೇ ನಮ್ಮ ಡಾ. ಶಂಕರೇಗೌಡರು. ಇಂಗ್ಲಿಷ್ ಪತ್ರಿಕೆಗಳಲ್ಲಿ, ನ್ಯಾಷನಲ್ ಮೀಡಿಯಾದಲ್ಲಿ ಕೂಡ ಇವರ ಬಗ್ಗೆ ವರದಿಗಳು ಬಂದಿವೆ. ಅವೆಲಕ್ಕೂ ಮೀರಿದ ಸಹಜ ಪ್ರಾಮಾಣಿಕ ಸಂಬಂಧ ಇವರಿಗೆ ನಮ್ಮ ಮಂಡ್ಯ ಜನರ ಜೊತೆ ಇದೆ.

ನಮ್ಮ ಮಂಡ್ಯ ಕ್ಷೇತ್ರದ ರಿಯಲ್ ಹೀರೋಗಳಲ್ಲಿ ಒಬ್ಬರು ಇವರು. ವೈದ್ಯಕೀಯ ಕ್ಷೇತ್ರದಲ್ಲಿ ದುಡ್ಡೇ ಮಾಡಬೇಕು ಅಂತಿದ್ದರೆ, ಬಂಗಲೆಯಲ್ಲಿ ವಾಸ, ದುಬಾರಿ ಕಾರು, ದೊಡ್ಡದೊಂದು ಆಸ್ಪತ್ರೆ ಕಟ್ಟಬಹುದಿತ್ತು. ಆದರೆ, ವೈದ್ಯ ವೃತ್ತಿಯನ್ನು ಅವರು ಬಳಕೆ ಮಾಡಿಕೊಂಡಿದ್ದು ಕೇವಲ ಕಾಯಿಲೆಯನ್ನು ಗುಣಪಡಿಸುವುದಕ್ಕಾಗಿ. ಅದರಲ್ಲೂ ಬಡವರ, ನಿರ್ಗತಿಕರ ಸೇವೆಗಾಗಿ.

ಈಗಲೂ ಅವರು ಎರಡು ಕೋಣೆಯ ಚಿಕ್ಕ ಮನೆಯಲ್ಲಿ ವಾಸ. ಸಣ್ಣದೊಂದು ಆಸ್ಪತ್ರೆ ಕಟ್ಟಲು ಕೋಟ್ಯಾಂತರ ರೂಪಾಯಿ ಬೇಕು. ಚಿಕ್ಕದೊಂದು ಕೋಣೆ ನಿರ್ಮಿಸಲೂ ಲಕ್ಷಾಂತರ ರೂಪಾಯಿ ಬೇಕು. ಅದನ್ನು ತರಲು ರೋಗಿಯನ್ನೇ ಅವಲಂಬಿಸಬೇಕು. ಈ ಹೊರೆಯನ್ನು ರೋಗಿಗಳ ಮೇಲೆ ಹಾಕದೇ, ಒಂದು ಅಂಗಡಿ ಮುಂದಿನ ಕಟ್ಟೆಯಲ್ಲೇ ಕೂತು ರೋಗಿಯನ್ನು ನೋಡುತ್ತಾರೆ. ಅಗ್ಗದ ಔಷಧಿ ಚೀಟಿಗಳನ್ನು ಬರೆದು ಕೊಡುತ್ತಾರೆ.

ಬೆಳಗ್ಗೆ 8 ಗಂಟೆಯಿಂದ ಶುರುವಾಗುವ ಈ ಕಾಯಕ ಮಧ್ಯಾಹ್ನದವರೆಗೆ ಮತ್ತು ಸಾಯಂಕಾಲ ಕೂಡ ನಿರಂತರವಾಗಿ ಇರುತ್ತದೆ. ನಿತ್ಯವೂ ನೂರಾರು ರೋಗಿಗಳಿಗೆ ಇವರು ಚಿಕಿತ್ಸೆ ನೀಡುತ್ತಾರೆ. ಹೆಚ್ಚಾಗಿ ಚರ್ಮರೋಗಕ್ಕೆ ಸಂಬಂಧಿಸಿದಂತೆ ಔಷಧಿ ನೀಡುತ್ತಾರೆ. ಕೇವಲ ಮಂಡ್ಯದ ಜನರು ಮಾತ್ರವಲ್ಲ, ರಾಜ್ಯದ ನಾನಾ ಭಾಗಗಳಿಂದಲೂ ಜನರು ಬರುತ್ತಾರೆ. ಹಲವು ರಾಜ್ಯಗಳಿಂದಲೂ ಬಂದಿದ್ದು ಉಂಟು. ಆಚೆ ದುಬಾರಿ ಅನಿಸುವ ಈ ಚಿಕಿತ್ಸೆಗೆ ಶಂಕರೇಗೌಡರು ಪಡೆಯುವ ಹಣವೆಷ್ಟು ಗೊತ್ತಾ? ಕೇವಲ ಐದು ರೂಪಾಯಿ ಮಾತ್ರ! ಹಾಗಾಗಿ ಇವರನ್ನು ಪ್ರೀತಿಯಿಂದ ಜನರು “ಐದು ರೂಪಾಯಿ ಡಾಕ್ಟ್ರು” ಅಂತ ಕರೀತಾರೆ.

ಎಂಡಿ ಮಾಡಿರುವ ವೈದ್ಯರೊಬ್ಬರು ಕೇವಲ ಐದು ರೂಪಾಯಿಗೆ ಚಿಕಿತ್ಸೆ ಕೊಡುತ್ತಾರೆ ಎಂದರೆ ಅಚ್ಚರಿ ಆಗೋದು ನಿಜ. ಇಂಥದ್ದೊಂದು ಅಚ್ಚರಿಯ ಕೆಲಸವನ್ನು ನಿತ್ಯ ಮಾಡುವ ಶಂಕರೇಗೌಡರಿಗೆ ನನ್ನದೊಂದು ನಮಸ್ಕಾರ. ಇಂತಹ ಮಹನೀಯರ ಸಂಖ್ಯೆ ಇನ್ನೂ ಹೆಚ್ಚಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version