ಬಹಿರಂಗ

ಅಧಿಕಾರದ ಉನ್ನತ ಸ್ಥಾನದಲ್ಲಿರುವವರಿಂದ ಈ ತೆರನಾದ ಮತಧಾರ್ಮಿಕ ಪಕ್ಷಪಾತದ ನಡವಳಿಕೆ ಸರಿಯೇ..?

Published

on

  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪವಿರುವ ಕಳಂಜ ಗ್ರಾಮದಲ್ಲಿ ಜುಲೈ 20, 2022ರಂದು ಬಿ. ಮಸೂದ್‌ ಎಂಬ 18 ವರ್ಷದ ಯುವಕನ ಮೇಲೆ ಗುಂಪು ಹಲ್ಲೆ ಮಾಡಲಾಯಿತು.  ಆತ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಜುಲೈ 21 ರಂದು ಅಸುನೀಗಿದ.

ಆ ಸಮಯದಲ್ಲಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದ ದೊಡ್ಡ ಗುಂಪು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಪರಿಹಾರ ಹಣವನ್ನು ನೀಡುವ ಭರವಸೆಯನ್ನು ಕೊಟ್ಟರೆ ಮಾತ್ರ ಹೆಣವನ್ನು ಸಾಗಿಸಲಾಗುವುದು ಎಂದು ಪಟ್ಟು ಹಿಡಿದರು.  ತಹಶೀಲದಾರರು ಭರವಸೆ ನೀಡಿದ ತರುವಾಯ ಅಂತ್ಯ ಕ್ರಿಯೆಗಳನ್ನು ಜರುಗಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಯಿತು. ಈ ಕೇಸಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಯಿತು.

ಇದೇ ತಿಂಗಳ 26ರಂದು ಸುಳ್ಯ ಸಮೀಪದ ಬೆಳ್ಳಾರೆ ಗ್ರಾಮದಲ್ಲಿ 32 ವರ್ಷದ, ಬಿಜೆಪಿ ಯುವಮೋರ್ಚಾದ ನಾಯಕ ಪ್ರವೀಣ್ ನನ್ನು ಬೈಕ್‌ ಸವಾರರು ಹತ್ಯೆ ಮಾಡಿದರು. ಈ ವಿಚಾರದಲ್ಲಿ ಮೂರು ಮಂದಿಯನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಬಿಜೆಪಿ ಯುವಮೋರ್ಚಾದ ಅನೇಕ ನಾಯಕರು ಮತ್ತು ಕಾರ್ಯಕರ್ತರು ರಾಜೀನಾಮೆಯನ್ನು ನೀಡಿದರು. ದೊಡ್ಡಬಳ್ಳಾಪುರದಲ್ಲಿ ಒಂದು ವರ್ಷದ ಬೊಮ್ಮಾಯಿ ಆಡಳಿತದ ಜನೋತ್ಸವ ಕಾರ್ಯಕ್ರಮವನ್ನು ಸಹ ರದ್ದು ಮಾಡಲಾಯಿತು.*

ಮುಖ್ಯ ಮಂತ್ರಿ ಬೊಮ್ಮಾಯಿ ಜುಲೈ 28ರಂದು ಕೆಲವು ಬಿಜೆಪಿ ರೊಡನೆ ಬೆಳ್ಳಾರೆಯಲ್ಲಿರುವ ಮೃತ ಪ್ರವೀಣನ ಕುಟಂಬದ ನಿವಾಸಕ್ಕೆ ಭೇಟಿ ನೀಡಿದರು. ಸರ್ಕಾರದ ವತಿಯಿಂದ ರೂ 25 ಲಕ್ಷ ಪರಿಹಾರದ ಚೆಕ್ ನ್ನು , ಬಿಜೆಪಿ ಪಕ್ಷದಿಂದ ಇದೇ ಮೊತ್ತವನ್ನು ನೀಡಲಾಯಿತು. ಸಚಿವರಾಗಿರುವ ಅಶ್ವತ್ಥನಾರಾಯಣ ರೂ10 ಲಕ್ಷ ಮತ್ತು ಅಂಗಾರ ಕೂಡ*ಆರ್ಥಿಕವಾಗಿ ಸ್ಪಂದಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬೊಮ್ಮಾಯಿ ಪ್ರವೀಣನ ಕೊಲೆಯನ್ನು ಒಂದು ಭಯೋತ್ಪಾದನೆಯ ಕೃತ್ಯವೆಂದು ಬಣ್ಣಿಸಿ, ಅವಶ್ಯವಿದ್ದರೇ ಉತ್ತರ ಪ್ರದೇಶದ ಯೋಗಿ ಆಡಳಿತದ ಮಾದರಿಯನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದರು.

ಆದರೆ ಬೊಮ್ಮಾಯಿಯವರು  ಅದೇ ಸ್ಥಳದಲ್ಲಿರುವ, ಹತನಾದ ಮಸೂದನ ಮನೆಗೆ ಭೇಟಿ ನೀಡಲಿಲ್ಲ(ಆತನ ಮನೆಗೆ ಆಡಳಿತರೂಢ ಪಕ್ಷದ ಯಾವ ನಾಯಕರು, ಶಾಸಕರು, ಮಂತ್ರಿಗಳು ಭೇಟಿ ನೀಡಿಲ್ಲ ಎನ್ನುತ್ತದೆ ಮಾಧ್ಯಮದ ಮಾಹಿತಿ) ; ಚಕಾರವೂ ಎತ್ತಲಿಲ್ಲ. ಮುಖ್ಯಮಂತ್ರಿ ಅಲ್ಲಿದ್ದಾಗಲೇ ಸುರತ್ಕಲ್ ನಲ್ಲಿ ಫಾಸಿಲ್ ಎಂಬ ಯುವಕನ ಹತ್ಯೆಯಾಗಿದೆ. ಮಂಗಳೂರಿನಲ್ಲಿದ್ದರೂ ಫಾಸಿಲ್ ಸೇಪರ್ಡೆಗೊಂಡಿದ್ದ ಆಸ್ಪತ್ರೆಗೆ ನಮ್ಮ ಸಿಎಂ ಭೇಟಿ ಮಾಡಲಿಲ್ಲ.

ಮುಖ್ಯಮಂತ್ರಿಯವರು ಸುಳ್ಯಕ್ಕೆ ಭೇಟಿ ನೀಡಿದಾಗ ಮಸೂದನ ಕುಟುಂಬಕ್ಕೆ ನೇರವಾಗಿ ಪರಿಹಾರವನ್ನು ನೀಡಬಹುದಿತ್ತಲ್ಲವೇ? ಸರ್ಕಾರದ ಹಣವೆಂದರೇ ಅದು ಜನತೆಯ ಹಣವಲ್ಲವೇ? ತಮಗೆ ಇಷ್ಟ ಬಂದಂತೆ ಸರ್ಕಾರದ ಹಣವನ್ನು ದಯಪಾಲಿಸುವ ಹಕ್ಕಿದೆಯೇ? ಇಂತಹ ನಡೆಗಳು ಅಮಾನವೀಯವಲ್ಲವೇ? ಅವರು ಅಲಂಕರಿಸಿರುವ ಘನಸ್ಥಾನಕ್ಕೆ ತಕ್ಕುದಾಗಿದವೆಯೇ? ಅವರಿಗೆ ಮಸೂದನ ಸಂಸಾರದ ಆರ್ತನಾದ ಕೇಳಿಸಲಿಲ್ಲವೇ? ಆತನ ಕೊಲೆಯೂ ಕೊಲೆಯಲ್ಲವೇ?  ಮಸೂದನ ಹತ್ಯೆ ಭಯೋತ್ಪಾದನಾ ಕ್ರಿಯೆಯಡಿ ಬರುವುದಿಲ್ಲವೇ? ನಮ್ಮ ಇಡೀ ರಾಜ್ಯದ ಮುಖ್ಯ ಮಂತ್ರಿಯಾಗಿರುವ ಬೊಮ್ಮಾಯಿಯವರ ಇಂತಹ ನಡೆಗಳಲ್ಲಿ ಮತಧಾರ್ಮಿಕ ಪಕ್ಷಪಾತವಿಲ್ಲವೇ?

ಅವರು ಬಿಜೆಪಿ ಪಕ್ಷದವರಿಗೆ, ಅದರ ಹಿಂಬಾಲಕರಿಗೆ ಮಾತ್ರ ಮುಖ್ಯಮಂತ್ರಿಯಾಗಿರುವರೇ? ಮತಧರ್ಮ ನಿರಪೇಕ್ಷತೆಯನ್ನು ಸಾರುವ ನಮ್ಮ ಸಂವಿಧಾನದಡಿ ಪದಗ್ರಹಣವನ್ನು ಮಾಡಿರುವ ಶ್ರೀಯುತರ ಇಂತಹ ನಿರ್ಧಾರಗಳು ಅಸಂವಿಧಾನಿಕವಲ್ಲವೇ? ಮುಂಬರುವ ಆಡಳಿತಗಾರರಿಗೆ ಅವರು ಯಾವ ಮಾದರಿಯನ್ನು ಬಿಡುತ್ತಿದ್ದಾರೆ? ಇದು ನಮ್ಮ ರಾಜ್ಯದಲ್ಲಿ ಆತಂಕಕಾರಿಯಾಗುತ್ತಿರುವ ಮತಧಾರ್ಮಿಕ ವೈಷಮ್ಯ ಹಾಗೂ ಅಸಹಿಷ್ಣುತೆಗೆ ಇಂಬು ನೀಡುವುದಿಲ್ಲವೇ?  ಈ ತೆರನಾದ ನಡವಳಿಕೆ ಜನತೆಗೆ ಯಾವ ಸಂದೇಶವನ್ನು ರವಾನಿಸುತ್ತದೆ?

ಇಂತಹ ಅನೇಕ ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರಲ್ಲಿ ಜನ್ಮತಳೆದರೇ, ಅವು ಸಹಜವೇ ಸರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version