ದಿನದ ಸುದ್ದಿ

ಮಂಗಳೂರು ಗೋಲಿಬಾರ್ | ಹೈಕೋರ್ಟ್‌ನ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆ ಆಗಬೇಕು : ಸಿದ್ದರಾಮಯ್ಯ

Published

on

ಸುದ್ದಿದಿನ,ಮಂಗಳೂರು : ನಗರದಲ್ಲಿ ಅಹಿತಕರ ಘಟನೆಗಳು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡೆ. ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜನತೆ ಶಾಂತರೀತಿಯಿಂದ ವರ್ತಿಸಿ ಎಂದು ಮನವಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಹೇಳಿದರು.

ಮಂಗಳೂರಿನ ವಿವಿಧ ಅಸ್ಪತ್ರೆಗಳಿಗೆ ಭೇಟಿ ನೀಡಿ ಗಲಭೆಯಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಅವರು, ಸಿಐಡಿ ತನಿಖೆಯಿಂದ ಗೋಲಿಬಾರ್ ಪ್ರಕರಣದ ಹಿಂದಿರುವ ನಿಜವಾದ ಅಪರಾಧಿಗಳು ಹೊರಬರುತ್ತಾರೆ ಎಂಬ ನಂಬಿಕೆ ನನಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಪೊಲೀಸರ ತಪ್ಪಿಲ್ಲ ಎಂದು ತನಿಖೆಗೆ ಮೊದಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಮುಖ್ಯಮಂತ್ರಿಗಳೇನು ಘಟನೆಯ ಪ್ರತ್ಯಕ್ಷದರ್ಶಿಯೇ? ಎಂದು ಕಿಡಿಕಾರಿದರು.

ಸಿಐಡಿ ತನಿಖೆಗೆ ಒಪ್ಪಿಸಿ ಪ್ರಕರಣ ಮುಚ್ಚಿಹಾಕಲು ಮುಖ್ಯಮಂತ್ರಿಗಳು ಅವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆ. ಗೋಲಿಬಾರ್‌ನಲ್ಲಿ ಸಾವಿಗೀಡಾದ ಇಬ್ಬರು ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗಬೇಕು ಎಂದಾದರೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.

ಗಲಭೆಗೆ ಪ್ರಚೋದನೆ ನೀಡಿದ ಅಪರಾಧದ ಮೇಲೆ ಕಲ್ಲಡ್ಕ ಪ್ರಭಾಕರ್ ಅವರ ಮೇಲೂ ಕೇಸ್ ದಾಖಲಿಸಬೇಕು. ಯಾವುದೋ ಒಂದು ವರ್ಗವನ್ನು ಮಾತ್ರ ಗುರಿಯಾಗಿಸಿಕೊಂಡು ಕ್ರಮ‌ ಜರುಗಿಸುವುದು ನ್ಯಾಯಸಮ್ಮತವಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version