ದಿನದ ಸುದ್ದಿ
ಮನೀಷಾಳ ಸಾವು ಸರ್ಕಾರಿ ಕೊಲೆ
- ದೇವನೂರ ಮಹಾದೇವ
ನೆನಿಸಿಕೊಳ್ಳಲೂ ಭೀಭತ್ಸ- ಉತ್ತರ ಪ್ರದೇಶದ ಹಾಥರಸ್‌ನ ಮನೀಷಾಳ ಸಾವು, ಇದು ಸಾವಲ್ಲ. ಸಾಕ್ಷ್ಯ ನಾಶಕ್ಕಾಗಿ ಉತ್ತರಪ್ರದೇಶ ಸರ್ಕಾರದ ಒಳೇಚ್ಛೆಗೆ ತಕ್ಕಂತೆ ಅಲ್ಲಿನ ಪೊಲೀಸ್ ವ್ಯವಸ್ಥೆ ನಡೆಸಿದ ಕೊಲೆ ಇದು, ಸಾವಲ್ಲ.
ನೋಡಿ ಮನೀಷಾಳು ಅತ್ಯಾಚಾರಕ್ಕೆ ಒಳಗಾಗಿ ಅವಳ ಮನಸ್ಸು ದೇಹ ಜರ್ಝರಿತವಾಗಿ ಅರೆಪ್ರಜ್ಞಾವ್ಯವಸ್ಥೆಯಲ್ಲಿದ್ದವಳನ್ನು ಪೊಲೀಸ್ ಸ್ಟೇಷನ್‌ಗೆ ಕರೆ ತಂದರೆ, ಅಲ್ಲಿ ಏಳೆಂಟು ಗಂಟೆಕಾಲ ಹೊರಗೆ ಕೂರಿಸುತ್ತಾರೆ. ಕಾನೂನುರೀತ್ಯಾ ಅವಳನ್ನು ಕೇರ್ ಕ್ರೈಸಿಸ್ ಸೆಂಟರ್‌ಗೆ ಕರೆದುಕೊಂಡು ಹೋಗುವುದಿಲ್ಲ. ಕಾನೂನುರೀತ್ಯಾ 24 ಗಂಟೆ ಒಳಗೆ ವೀರ್ಯಾಣು (ಸ್ಪರ್ಮ್) ಪತ್ತೆ ಪರೀಕ್ಷೆ ಮಾಡಿಸುವುದಿಲ್ಲ.
ಬದಲಾಗಿ ವಿಳಂಬಿಸಿ, ಇದ್ದಿರಲೂಬಹುದಾದ ವೀರ್ಯಾಣು ಸಾಕ್ಷ್ಯ ನಾಶವಾದ ಮೇಲೆ ವೀರ್ಯಾಣು ಪತ್ತೆ ಪರೀಕ್ಷೆ ಮಾಡಿಸುತ್ತಾರೆ. ಮನೀಷಾ ಸಾಯುವ ಮೊದಲು (ವಿಕ್ಟಿಮ್ಸ್ ಡಿಫೈನಿಂಗ್ ಡಿಕ್ಲೇರೇಷನ್) ‘‘ತನ್ನ ಮೇಲೆ ಅತ್ಯಾಚಾರವಾಯ್ತು’’ ಎಂದು ಹೇಳಿದ್ದರೂ ಕಾನೂನುರೀತ್ಯಾ ಇದೇ ಪ್ರಬಲ ಸಾಕ್ಷಿಯಾಗಿದ್ದರೂ ಇದನ್ನು ಪರಿಗಣಿಸದೆ ಪೊಲೀಸ್ ವರಿಷ್ಠಾಧಿಕಾರಿ ‘ಅತ್ಯಾಚಾರವಾಗಿಲ್ಲ, ಯಾಕೆಂದರೆ ಪರೀಕ್ಷೆಯಲ್ಲಿ ವೀರ್ಯಾಣು ಪತ್ತೆ ಆಗಿಲ್ಲ’ ಅನ್ನುತ್ತಾನೆ.
ಜೊತೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿಸುತ್ತಾರೆ. ಮನೀಷಾಳ ಕುಟುಂಬಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಧಮಕಿ ಹಾಕುತ್ತಾನೆ. ಇದನ್ನೆಲ್ಲಾ ನೋಡಿದರೆ ಮನೀಷಾಳು ಬದುಕಿಬಿಟ್ಟರೆ ಅವಳೇ ಸಾಕ್ಷಿಯಾಗಿ ಬಿಡುತ್ತಾಳೆ ಎಂಬ ಕಾರಣಕ್ಕೆ ಅವಳು ಸಾಯಲಿ ಅಂತ ಏನೇನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಉತ್ತರಪ್ರದೇಶದ ಪೊಲೀಸರು ಹಾಗೂ ಆಡಳಿತ ನಿರ್ವಹಣೆ ಮಾಡಿದೆ ಅನ್ನಿಸಿಬಿಡುತ್ತೆ.
ಮನೀಷಾಳ ಸಾವು ಸರ್ಕಾರಿ ಕೊಲೆ ಮತ್ತು ಅಮಾನುಷ. ಅಂದರೆ, ಹೀಗೆ ಮನೀಷಾಳನ್ನು ಸಾಯಿಸಿದ ಮೇಲೂ ಅವಳ ದೇಹದ ಸಾಕ್ಷ್ಯ ಮರು ಮರಣೋತ್ತರ ಪರೀಕ್ಷೆ ಸಿಗದಂತೆ ಮಾಡಲು ಪೊಲೀಸರು ಮನೀಷಾಳ ದೇಹವನ್ನು ರಾತ್ರಿ 1.30ಕ್ಕೆ ಅವಳ ಹುಟ್ಟೂರಿಗೆ ತಂದು, ಹೆತ್ತವರಿಗೆ ಅಂತ್ಯ ಸಂಸ್ಕಾರಕ್ಕೆ ದೇಹವನ್ನು ಒಪ್ಪಿಸದೆ, ಅಷ್ಟೇ ಅಲ್ಲ ತಮ್ಮ ಮಗಳ ಮುಖವನ್ನು ನೋಡಲೂ ಹೆತ್ತವರಿಗೆ ಅವಕಾಶ ನೀಡದೆ ‘ಮಗಳ ಮುಖಕ್ಕೆ ಪದ್ಧತಿಯಂತೆ ಅರಿಶಿನ ಹಚ್ಚಲಾದರೂ ಅವಕಾಶ ಕೊಡಿ’ ಎಂದು ಬೇಡಿದರೂ ಲೆಕ್ಕಿಸದೆ ಪೊಲೀಸರು ರಾತ್ರಿ 2.30ಕ್ಕೆಲ್ಲ ಮನೀಷಾಳ ದೇಹವನ್ನು ಸುಟ್ಟು ಬೂದಿ ಮಾಡುತ್ತಾರೆ. ಹೀಗಿರುವಾಗ ನ್ಯಾಯ ಸಿಗಬಹುದೇ? ನ್ಯಾಯ ಸಿಕ್ಕ ಮನೀಷಾಳ ಹೆತ್ತವರಿಗೆ ಸಾಂತ್ವನ ಸಿಗಬಹುದೆ? ಹೇಳುವುದು ಕಷ್ಟ, ಕಷ್ಟ.
ಯಾಕೆಂದರೆ ನಮ್ಮ ನ್ಯಾಯ ವಿತರಣಾ ಪದ್ಧತಿಯನ್ನು ನೋಡಿದರೆ ಆತಂಕ ಆಗುತ್ತದೆ. ಇತ್ತೀಚಿನ ಬಾಬ್ರಿ ಮಸೀದಿ ತೀರ್ಪನ್ನು ನೋಡಿದರೆ, ಧ್ವಂಸದ ಸಂದರ್ಭದಲ್ಲಿ ಆರೋಪಿಗಳು ಧ್ವಂಸದ ಸ್ಥಳದಲ್ಲೇ ಇದ್ದರೂ ಅವರು ಖುಲಾಸೆಯಾಗಿದ್ದಾರೆ. ಇನ್ನೊಂದು ಕಡೆ ಎಲ್ಗಾರ್ ಪರಿಷತ್ ಸಭೆಯಲ್ಲಿ ಯಾವುದೇ ಹಿಂಸೆ ನಡೆಯದಿದ್ದರೂ ಜೊತೆಗೆ ಆ ಸಭೆಯಲ್ಲಿ ಆನಂದ್ ತೇಲ್ತುಂಬ್ಡೆ ಮತ್ತಿತರರು ಆ ಸ್ಥಳದಲ್ಲಿ ಇಲ್ಲದಿದ್ದರೂ ಅವರನ್ನು ಆರೋಪಿಗಳನ್ನಾಗಿಸಿ ವಿಚಾರಣೆ ಮಾಡದೆ ಬಂಧಿಸಿ ಇಡಲಾಗಿದೆ.
ಇಂದಿನ ಕಾನೂನು ವ್ಯವಸ್ಥೆ, ನ್ಯಾಯಾಂಗ ವಿತರಣೆ ವ್ಯವಸ್ಥೆ ಹೆಚ್ಚೂ ಕಮ್ಮಿ ಪುರಾತನ ಕಾಲದ ಅನ್ಯಾಯದ ‘ಮನುಧರ್ಮ ಶಾಸ್ತ್ರ’ದ ಜಾತಿ ಅಂತಸ್ತಿಗೆ ತಕ್ಕಂತೆ ಶಿಕ್ಷೆ ಎಂಬಂತಿದೆ. ಭಾರತ ಯಾವ ಕಡೆಗೆ ಚಲಿಸುತ್ತಿದೆ? ಹಿಂದಕ್ಕೊ? ಮುಂದಕ್ಕೊ? ಇಂದು ನಮ್ಮ ಕಾನೂನು ವ್ಯವಸ್ಥೆ ಹಾಗೂ ನಮ್ಮ ನ್ಯಾಯ ವಿತರಣಾ ವ್ಯವಸ್ಥೆಗಳು- ನ್ಯಾಯದ ಮುಂದೆ ಅಪರಾಧಿಗಳಾಗಿ ಕಟಕಟೆಯಲ್ಲಿ ನಿಂತಿವೆ. ಭಾರತ ದಿಕ್ಕು ತಪ್ಪುತ್ತಿದೆ.
ಕೊನೆಯದಾಗಿ ನನ್ನದೊಂದು ಮನವಿ
ಕಂದ ಮನೀಷಾಳನ್ನು ಎಲ್ಲಿ ಸುಟ್ಟರೋ ಅಲ್ಲಿಂದ ಅಥವಾ ಅವಳು ನಡೆದಾಡಿದ ಭೂಮಿಯಿಂದ ಒಂದು ಹಿಡಿ ಮಣ್ಣನ್ನು ತಂದು ಒಂದು ಸ್ಮಾರಕ ಸ್ಥಳವನ್ನಾಗಿಸಿ ಅಲ್ಲೊಂದು ಅವಳ ಪ್ರತಿಮೆ ರೂಪಿಸಿ ಅವಳ ಕೆನ್ನೆಗಳಿಗೆ ನಾವೆಲ್ಲರೂ ಅರಿಶಿನ ಹಚ್ಚುವಂತಾದರೆ ನಾವೂನು ಮನೀಷಾಳಿಗೆ ಮರಣೋತ್ತರ ಗೌರವ ಸಲ್ಲಿಸಿದಂತಾಗಬಹುದೆ? ಇದರಿಂದ ಮನೀಷಾಳ ಹೆತ್ತವರಿಗೆ ಹಾಗೂ ತಾಯಿ ಭಾರತ ಮಾತೆಗೆ ಕಿಂಚಿತ್ತಾದರೂ ಸಮಾಧಾನವಾಗಬಹುದೆ? ಈ ಪ್ರಶ್ನೆಯನ್ನು ಭಾರತದ ಪ್ರಜೆಗಳ ಮುಂದಿಡುತ್ತಿರುವೆ.
ಇಂದು (ಸೆಪ್ಟಂಬರ್ -05-ಸೋಮವಾರ) ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243