ದಿನದ ಸುದ್ದಿ
ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿ : ಡಿ.ಆರ್.ಕೃಷ್ಣಮೂರ್ತಿ
ಸುದ್ದಿದಿನ,ಚಿತ್ರದುರ್ಗ: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಬೇಕು ಎಂದು ಡಯಟ್ ಪ್ರಭಾರಿ ಪ್ರಾಚಾರ್ಯ ಡಿ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ಡಯಟ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಯಟ್ ಹಾಗೂ ಯೂಥ್ ಫಾರ್ ಸೇವಾ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಎನ್.ಎಂ.ಎಂ.ಎಸ್ ಪರೀಕ್ಷಾ ಪೂರ್ವ ತಯಾರಿಕೆ ಕುರಿತು ಜಿಲ್ಲೆಯ ಸರ್ಕಾರಿ/ಅನುದಾನಿತ ಪ್ರೌಢಶಾಲೆಗಳ ಮತ್ತು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಿ-ಮ್ಯಾಟ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಶ್ರದ್ಧೆ ಮತ್ತು ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಡೆದ ಅನುಭವಗಳನ್ನು ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ಮಾರ್ಗದರ್ಶನ ಮಾಡುವುದರ ಮೂಲಕ ನಮ್ಮ ಜಿಲ್ಲೆಯಿಂದ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿ ವಿದ್ಯಾರ್ಥಿ ವೇತನ ಪಡೆಯಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್ ಮಾತನಾಡಿ, ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ತರಬೇತಿಗಳು ನೆರವಾಗುತ್ತವೆ. ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನ ಮಾಡುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮುಖ್ಯವಾದುದು. ಪ್ರತಿ ವರ್ಷ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸುವಂತೆ ಶಾಲಾ ಮುಖ್ಯ ಶಿಕ್ಷಕರು ಕ್ರಮವಹಿಸಬೇಕು. ಕಳೆದ ವರ್ಷ 173 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದು ಈ ವರ್ಷದಲ್ಲಿ ಜಿಲ್ಲೆಯಿಂದ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.
ನೂತನ್ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ, ಡಯಟ್ ಉಪನ್ಯಾಸಕ ಎಸ್.ಬಸವರಾಜು, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್, ಬಾಲಕರ ಸರ್ಕಾರಿ ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರುದ್ರಮುನಿ, ಸಂಪನ್ಮೂಲ ವ್ಯಕ್ತಿಗಳಾದ ವರಲಕ್ಷಿö್ಮ, ಯಶವಂತ್, ರವೀನಾ, ಶಿಕ್ಷಣ ಸಂಯೋಜಕ ನಾಗರಾಜು, ಜಿಲ್ಲೆಯ ಶಿಕ್ಷಕರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243