ಬಹಿರಂಗ
ದೇವರಿಗೊಂದು ಮಂದಿರ ಕಟ್ಟಿ , ಸ್ವರ್ಗಕ್ಕೊಂದು ರೈಲು ಹಾಕಿದಾಗ..?
ಎಡ್ಮಂಡ್ ಬ್ರೂಕ್ ಎಂಬ ವ್ಯಕ್ತಿಯಿದ್ದನು. ಆತನಿಗೆ ದೇವರ ಮೇಲೆ ನಂಬಿಕೆಯೇ ಇರಲಿಲ್ಲ. ಆದರೂ ಪ್ರತಿ ಭಾನಿವಾರ ಆತ ಚರ್ಚ್ ಗೆ ಹೋಗಿ ಅಲ್ಲಿನ ಫಾದರ್ ಬೋಧನೆಗಳನ್ನು ಕೇಳುತ್ತಿದ್ದನು. ಇದನ್ನು ಕಂಡ ಒಬ್ಬ ವ್ಯಕ್ತಿ ” ನಿನಗೆ ದೇವರ ಮೇಲೆ ನಂಬಿಕೆಯೇ ಇಲ್ಲ. ಹಾಗಿರುವಾಗ ಚರ್ಚಿಗೆ ಬರುವುದಾದರೂ ಏತಕ್ಕೆ ?” ಎಂದು ಕೇಳುತ್ತಾನೆ. ಅದಕ್ಕೆ ಎಡ್ಮಂಡ್ ಬ್ರೂಕ್ ” ನನಗೆ ನಂಬಿಕೆಯಿಲ್ಲ. ಆದರೆ ಈ ಫಾದರ್ ತುಂಬಾ ಅದ್ಬುತವಾದ ವ್ಯಕ್ತಿ.
ಏಕೆಂದರೆ ಈತನು ದೇವರ ಮೇಲೆ ಇಟ್ಟ ನಂಬಿಕೆಯಲ್ಲೂ ಈತ ತುಂಬಾ ಒಳ್ಳೆಯ ಮಾತುಗಳಿಂದ ಒಳ್ಳೆಯದನ್ನು ಪ್ರೇರೇಪಿಸುತ್ತಾನೆ. ನಾನು ನಾಸ್ತಿಕ , ಈತ ಆಸ್ತಿಕ. ಈತನ ನಂಬಿಕೆ ಮೌಡ್ಯವಾಗಿರಬಹುದು, ತಪ್ಪಾಗಿರಬಹುದು. ಅದು ನನಗೆ ಮುಖ್ಯವಲ್ಲ ಬದಲಿಗೆ ಆತ ಮಾಡುತ್ತಿರುವ ಕೆಲಸ ತುಂಬಾ ಸುಂದರವಾಗಿದೆ. ಮೌಡ್ಯವಿದ್ದರೂ ಆತ ಒಳ್ಳೆಯದನ್ನು ಒಲಿಸಿಕೊಂಡಿದ್ದಾನೆ. ಅದೇ ನನಗೆ ಮುಖ್ಯ. ಆದ್ದರಿಂದಲೇ ನಾನು ಪ್ರತಿ ಭಾನುವಾರ ಆತನ ಮಾತುಗಳನ್ನು ಕೇಳಲು ಬರುತ್ತೇನೆ” ಎಂದನು.
ಹೀಗೆ ಕೆಲವು ದಿನಗಳ ನಂತರ ಫಾದರ್ ತನ್ನ ಬೋಧನೆಯಲ್ಲಿ ” ಯಾರು ಒಳ್ಳೆಯ ಗುಣ, ನಡತೆ ಮತ್ತು ದೇವರ ಮೇಲೆ ನಂಬಿಕೆ ಹೊಂದಿರುತ್ತಾರೋ , ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ” ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಎಡ್ಮಂಡ್ ಬ್ರೂಕ್ ಬೋಧನೆ ಮುಗಿದ ನಂತರ ಫಾದರ್ ಅನ್ನು ಭೇಟಿ ಮಾಡಿ ” ನೀವು ಬೋಧಿಸುತ್ತಾ ಒಂದು ಮಾತು ಹೇಳಿದ್ದೀರಿ.
ಯಾರು ಒಳ್ಳೆಯ ಗುಣ, ನಡತೆ ಮತ್ತು ದೇವರ ಮೇಲೆ ನಂಬಿಕೆ ಹೊಂದಿರುತ್ತಾರೋ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು. ಹಾಗಾದರೆ ಒಳ್ಳೆಯ ಗುಣ, ನಡತೆ ಇದ್ದು ದೇವರ ಮೇಲೆ ನಂಬಿಕೆ ಇಲ್ಲದಿದ್ದವರು ಎಲ್ಲಿಗೆ ಹೋಗುತ್ತಾರೆ?.
ಸ್ವರ್ಗಕ್ಕಾ ಅಥವಾ ನರಕಕ್ಕಾ?. ಒಂದು ವೇಳೆ ಒಳ್ಳೆಯ ಗುಣ,ನಡೆತೆಯೇ ಮುಖ್ಯವಾದರೆ ದೇವರ ಮೇಲೆ ನಂಬಿಕೆ ಏಕೆ ಬೇಕು? ಅಥವಾ ದೇವರ ಮೇಲೆ ನಂಬಿಕೆ ಮಾತ್ರ ಇದ್ದರೆ ಸಾಕು ಎನ್ನುವುದಾದರೆ ಒಳ್ಳೆಯ ಗುಣ, ನಡತೆಗಳ ಅಗತ್ಯವಾದರೂ ಏನು?. ಈ ಗೊಂದಲವನ್ನು ನೀವು ಬಿಡಿಸಿ ಹೇಳಿ” ಎಂದು ಕೇಳುತ್ತಾರೆ.
ಇಂತಹಾ ಪ್ರಶ್ನೆ ನಿರೀಕ್ಷಿಸದ ಫಾದರ್ ಸ್ವಲ್ಪ ಗೊಂದಲಕ್ಕೆ ಒಳಗಾಗಿ ” ನನಗೆ ಒಂದು ವಾರ ಸಮಯ ಕೊಡಿ. ನಾನು ಈ ಕುರಿತು ಪರಿಶೀಲಿಸಿ ಹೇಳುತ್ತೇನೆ” ಎಂದರು. ಸರಿ ಎಂದು ಎಡ್ಮಂಡ್ ಕೂಡಾ ಅಲ್ಲಿಂದ ಹೊರಡುತ್ತಾರೆ. ಈ ಒಂದು ವಾರದ ಕಾಲ ಫಾದರ್ ಗೆ ಹೆಚ್ಚು ಒತ್ತಡವನ್ನು ತರುತ್ತದೆ.
ಬೈಬಲಿನ ಎಲ್ಲಾ ಪುಟ ಪುಟವೂ ಓದುತ್ತಾರೆ. ಪುನಃ ಪುನಃ ಮರುಪರೀಕ್ಷಿಸುತ್ತಾರೆ. ಕೊನೆಗೂ ಸಮಾಧಾನಕರವಾದ ಉತ್ತರ ದೊರೆಯುವುದಿಲ್ಲ. ಕೊನೆಗೆ ಉತ್ತರಿಸಲೇಬೇಕಾದ ದಿನವೂ ಬರುತ್ತದೆ. ಅದೇ ಸಮಯದಲ್ಲಿ ಬೋಧನೆಗೂ ಮೊದಲು ಸ್ವಲ್ಪ ವಿಶ್ರಾಂತಿಯಲ್ಲಿ ಕುಳಿತಿದ್ದ ಫಾದರ್ ಉತ್ತರದ ಗುಂಗಿನಲ್ಲೇ ಹಾಗೇ ನಿದ್ದೆಗೆ ಜಾರುತ್ತಾರೆ. ನಿದ್ದೆಯಲ್ಲಿ ಒಂದು ಕನಸು ಕೂಡಾ ಬರುತ್ತದೆ.
ಕನಸಿನಲ್ಲಿ ಫಾದರ್ ಒಂದು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಕೂಡಲೇ ಅಲ್ಲಿದ್ದವರನ್ನು ಕುರಿತು ” ಈ ರೈಲು ಎಲ್ಲಿಗೆ ಹೋಗುತ್ತಿದೆ?” ಎಂದು ಕೇಳುತ್ತಾನೆ. ಅಲ್ಲಿದ್ದವರು ” ಸ್ವರ್ಗಕ್ಕೆ” ಎಂದು ಹೇಳುತ್ತಾರೆ. ಫಾದರ್ ” ತುಂಬಾ ಸಂತೋಷ, ಒಳ್ಳೆಯದಾಯ್ತು” ಎಂದು ಸಂತೋಷಗೊಳ್ಳುತ್ತಾನೆ. ಕೂಡಲೇ ಅಲ್ಲಿದ್ದವರನ್ನು ” ಇಷ್ಟಕ್ಕೂ ಇವರೆಲ್ಲಿ?. ಅದೇ ಸಾಕ್ರೆಟಿಸ್ ನಂತಹವರು. ಒಳ್ಳೆಯ ಗುಣ, ನಡತೆ ಹೊಂದಿರುತ್ತಾರೆ.
ಆದರೆ ದೇವರ ಮೇಲೆ ನಂಬಿಕೆ ಇಲ್ಲದಂತವರು?” ಕೇಳುತ್ತಾನೆ. ಅವರು ” ಗೊತ್ತಿಲ್ಲ. ಈ ರೈಲಿನಲ್ಲಂತೂ ಇಲ್ಲ” ಎಂದು ಹೇಳುತ್ತಾರೆ. ಅಷ್ಟರಲ್ಲಿ ಸ್ವರ್ಗ ತಲುಪುತ್ತಾರೆ. ಆದರೆ ಚರ್ಚಿನ ಫಾದರ್ ಗೆ ಸ್ವರ್ಗ ಅಷ್ಟಾಗಿ ಹಿಡಿಸಲಿಲ್ಲ. ಸ್ವರ್ಗ ತುಂಬಾ ನೀರಸವಾಗಿದೆ, ಹಾಳಾದಂತಿದೆ, ಅಷ್ಟು ಆಕರ್ಷಕವಾಗಿರಲಿಲ್ಲ. ಹಾಗಾಗಿ ಫಾದರ್ ಪುನಃ ನರಕಕ್ಕೆ ಹೋಗುವ ರೈಲು ಬರುವುದನ್ನು ನೋಡಿ ಹತ್ತುತ್ತಾರೆ. ನರಕಕ್ಕೆ ಹೋದ ತಕ್ಷಣ ಫಾದರ್ ಗೆ ತುಂಬಾ ಆಶ್ಚರ್ಯವಾಗುತ್ತದೆ.
ಎಲ್ಲಿ ನೋಡಿದರೂ ದೊಡ್ಡ ಮರಗಳು, ಹಸಿರಿನಿಂದ ಕಂಗೊಳಿಸುತ್ತಾ ತುಂಬಾ ಸಂತೋಷದಿಂದ ತುಂಬಿರುತ್ತದೆ. ಅನುಮಾನಗೊಂಡ ಫಾದರ್ ಅಲ್ಲಿದ್ದ ಕೆಲವರನ್ನು “ಇದು ನಿಜವಾಗಿಯೂ ನರಕವೇ? ” ಎಂದು ಕೇಳುತ್ತಾರೆ. ” ಹೌದು” ಎಂದು ಉತ್ತರ ಸಿಗುತ್ತದೆ. ಹಾಗೇ ” ಇಲ್ಲಿ ಸಾಕ್ರೆಟಿಸ್ ಇದ್ದಾನಾ?” ಎಂದು ಅನುಮಾನದಿಂದ ಪ್ರಶ್ನಿಸುತ್ತಾನೆ. ಅದಕ್ಕೆ ಅವರು ” ಅಗೋ ಅಲ್ಲಿ ಹೊಲದಲ್ಲಿ ಕೆಲಸ ಮಾಡ್ತಾ ಇದ್ದಾನೆ” ಎಂದು ತೋರಿಸುತ್ತಾರೆ.
ಫಾದರ್ ಕಾತುರದಿಂದ ಸಾಕ್ರೆಟಿಸ್ ಬಳಿ ಓಡುತ್ತಾನೆ. ಹತ್ತಿರ ಹೋಗಿ ” ನೀನು ಇಲ್ಲಿದ್ದೀಯ. ನಿನಗೆ ಒಳ್ಳೆಯ ಗುಣ, ನಡತೆ ಇದೆ. ಆದರೆ ದೇವರ ಮೇಲೆ ನಂಬಿಕೆ ಇಲ್ಲ ಹಾಗಾಗಿ ನಿನ್ನನ್ನ ನರಕದಲ್ಲಿ ಬಿಟ್ಟಿದ್ದಾರೆಯೇ? ” ಎಂದು ಕೇಳುತ್ತಾನೆ. ಅದಕ್ಕೆ ಕೆಲಸ ಮಾಡುತ್ತಲೇ ಸಾಕ್ರೆಟಿಸ್ ” ನನಗೆ ನರಕದ ಬಗ್ಗೆ ಏನೂ ಗೊತ್ತಿಲ್ಲ, ನಂಬಿಕೆಯೂ ಇಲ್ಲ. ಹೇಗೂ ಇಲ್ಲಗೆ ಬಂದನಲ್ಲ ಹಾಗಾಗಿ ಇದನ್ನು ಸ್ವರ್ಗವಾಗಿ ಮಾಡಿದೆ ಅಷ್ಟೇ” ಎಂದನು.
ಕೂಡಲೇ ತಟ್ ಎಂದು ಕಣ್ಣು ಬಿಟ್ಟು ಕನಸಿನಿಂದ ಹೊರಬರುತ್ತಾರೆ ಫಾದರ್. ಉತ್ತರಕ್ಕಾಗಿ ಕಾಯುತ್ತಿದ್ದ ಎಡ್ಮಂಡ್ ಬ್ರೂಕ್ ನನ್ನ ಉದ್ದೇಶಿಸುತ್ತಾ ” ನಾನು ಉತ್ತರಿಸುವುದಕ್ಕೂ ಮೊದಲು ನನಗೆ ಬಂದ ಕನಸಿನ ಬಗ್ಗೆ ಹೇಳಬೇಕು. ಈ ಕನಸಿನಿಂದ ನನಗೆ ಒಂದು ಅರಿವಾಯಿತು.
ಏನೆಂದರೆ ಒಳ್ಳೆಯ ಗುಣ, ನಡತೆ ಇದ್ದವರು ಯಾವ ಪ್ರದೇಶಕ್ಕೆ ಹೋದರೂ ಅದನ್ನು ಸ್ವರ್ಗವಾಗಿ ಮಾರ್ಪಡಿಸುತ್ತಾರೆ. ಆದರೆ ಒಳ್ಳೆಯ ಗುಣ, ನಡತೆ ಇಲ್ಲದೆ ದೇವರ ಮೇಲೆ ನಂಬಿಕೆ ಇದ್ದವರು ಯಾವ ಪ್ರದೇಶಕ್ಕೆ ಹೋದರೂ ಅದು ನರಕವಾಗಿ ಮಾರ್ಪಡುತ್ತದೆ ಎಂದು ಒಂದು ಕನಸಿನ ಮೂಲಕ ನನಗೆ ಅರಿವಾಯಿತು” ಎಂದು ಹೇಳುತ್ತಾರೆ.
ಸ್ನೇಹಿತರೆ ನಾವು ಸ್ವತಃ ನಾಸ್ತಿಕರಾಗಿರಬಹುದು ಅಥವಾ ಆಸ್ತಿಕರಾಗಿರಬಹುದು. ಆದರೆ ಒಬ್ಬ ವ್ಯಕ್ತಿಯು ದೇವರ ಮೇಲೆ ನಂಬಿಕೆ ಇಟ್ಟದ್ದಾನೋ ಇಲ್ಲವೋ ಎಂಬ ಕಾರಣದಿಂದ ಆತನನ್ನು ನಾವು ನಿರ್ಧರಿಸುವುದು ಅಥವಾ ನಿಂಧಿಸುವುದು ತಪ್ಪಾಗುತ್ತದೆ. ಬದಲಿಗೆ ಆತ ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ ಒಳ್ಳೆಯ ಗುಣ ನಡತೆ ಇದ್ದರೆ ಮಾತ್ರ ಆತನ ವ್ಯಕ್ತಿತ್ವ ಸರಿಯೆಂದು ಒಪ್ಪಬೇಕು.
ದೇವರ ಮೇಲಿನ ನಂಬಿಕೆಯೇ ಮೌಡ್ಯವಾಗಿರಬಹುದು ಆದರೆ ಆ ನಂಬಿಕೆ ಹೊಂದಿರುವ ವ್ಯಕ್ತಿಯ ನಡತೆ ಮುಖ್ಯವಾಗುತ್ತದೆ. ನಾಸ್ತಿಕತೆಯೇ ಸರಿ ಅಥವಾ ವಾಸ್ತವ ಆಗಿರಬಹುದು ಆದರೆ ನಡೆತೆಯಿಲ್ಲದಿದ್ದರೆ ತಪ್ಪಾಗುತ್ತದೆ.
ಇನ್ನು ಮಂದಿರ ನಿರ್ಮಾಣವೇ ದೊಡ್ಡ ಸಾಧನೆ ಎಂದು ಹೇಳುವವರಿಗೆ ನನ್ನ ಮನವಿ ಇಷ್ಟೆ. ಗುಣ, ನಡತೆ, ಸಾಮರಸ್ಯ,ಸಮಾನತೆ, ಸಹೋದರತೆ ಇಂತಹಾ ಗುಣಗಳನ್ನು ಬೆಳಸದ ಎಷ್ಟು ದೊಡ್ಡ ಮಂದಿರ ಕಟ್ಟಿದರೂ, ಮಸೀದಿ, ಚರ್ಚು ಕಟ್ಟಿದರೂ ಅದು ನರಕವನ್ನಷ್ಟೇ ಸೃಷ್ಟಿಸುತ್ತದೆ. ನೀವು ನಂಬಿಕೆ ಇಡುವ ದೇವರು ಕೂಡಾ ಮೆಚ್ಚುವುದಿಲ್ಲ. ಕೊನೆಗೆ ಇಂತಹಾ ನರಕವನ್ನು ಕೂಡಾ ಒಳ್ಳೆಯ ಗುಣ, ನಡತೆಗಳಿರುವವರು ಮಾತ್ರವೇ ಸ್ವರ್ಗವಾಗಿಸಬಲ್ಲರು. ಅವರು ಆಸ್ತಿಕರಾಗಿರಲಿ , ನಾಸ್ತಿಕರಾಗಿರಲಿ.
–ಜನಾ ನಾಗಪ್ಪ
ಸುದ್ದಿದಿನ.ಕಾಂ|ವಾಟ್ಸಾಪ್|9980346243