ರಾಜಕೀಯ

ಮೀಡಿಯಾಗಳು ಮೋದಿ ಪರವಾಗಿಲ್ಲ; ಪರವಾಗಿ ಇರಲೇಬೇಕಿದೆ’: ಎಬಿಪಿ ನ್ಯೂಸ್‌ ವೃತ್ತಾಂತದ ಸುತ್ತ…

Published

on

ಸುದ್ದಿದಿನ ಡೆಸ್ಕ್ | ಎಬಿಪಿ ನ್ಯೂಸ್‌ ನೆಟ್‌ವರ್ಕ್‌ನ ಮ್ಯಾನೇಜಿಂಗ್‌ ಎಡಿಟರ್‌ ಮಿಲಿಂದ್‌ ಖಂಡೇಕರ್‌ ಆಗಸ್ಟ್‌ 1ರಂದು ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಬೆನ್ನಿಗೆ ಹಲವು ಹಿರಿತಲೆಗಳೂ ಚಾನಲ್‌ ತೊರೆದಿದ್ದಾರೆ.

ಕೆಲವು ತಿಂಗಳ ಕೆಳಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ‘ದೇಶದ ಮಾಧ್ಯಮ ವಲಯದಲ್ಲಿ ಭಯ ಸೃಷ್ಟಿಯಾಗಿದೆ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಒತ್ತಡದಲ್ಲಿವೆ’ ಎಂಬರ್ಥದ ಹೇಳಿಕೆ ನೀಡಿದ್ದರು.

ಈ ಆರೋಪಗಳ ನಡುವೆ ಎಬಿಪಿ ನ್ಯೂಸ್‌ ನೆಟ್‌ವರ್ಕ್‌ನ ಮ್ಯಾನೇಜಿಂಗ್‌ ಎಡಿಟರ್‌ ಮಿಲಿಂದ್‌ ಖಂಡೇಕರ್‌ ಆಗಸ್ಟ್‌ 1ರಂದು ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಬೆನ್ನಿಗೆ ಹಲವು ಹಿರಿತಲೆಗಳೂ ಚಾನಲ್‌ ತೊರೆದಿದ್ದಾರೆ. ವಾಹಿನಿಯಲ್ಲಿ ಪ್ರೈಮ್‌ಟೈಮ್‌ ಕಾರ್ಯಕ್ರಮ ಮಾಸ್ಟರ್‌ಸ್ಟ್ರೋಕ್‌ ನಡೆಸಿಕೊಡುತ್ತಿದ್ದ ಹಿರಿಯ ಪತ್ರಕರ್ತ ಪುನ್ಯ ಪ್ರಸೂನ್‌ ಬಾಜಪೇಯಿ ಗುರುವಾರ ಚಾನಲ್ ತೊರೆದಿದ್ದರೆ, ಅಭಿಸಾರ್‌ ಶರ್ಮಾ ರಜೆಯ ಮೇಲೆ ಕಚೇರಿಯಿಂದ ಹೊರ ಹೋಗಿದ್ದಾರೆ.

ಸಾಮಾನ್ಯವಾಗಿ ಪತ್ರಕರ್ತರು ಮಾಧ್ಯಮ ಸಂಸ್ಥೆಯೊಂದನ್ನು ತೊರೆದಾಗ ಮಾಧ್ಯಮ ವಲಯದಿಂದಾಚೆ ಚರ್ಚೆಗಳಾಗುವುದು ಅಪರೂಪ. ಆದರೆ ಬಾಜಪೇಯಿ ಮತ್ತು ಖಂಡೇಕರ್‌ ನಿರ್ಗಮನ ಪತ್ರಕರ್ತರ ವರ್ತುಲ ದಾಟಿ ಸುದ್ದಿಯಾಗಿದೆ.

ಈ ಕುರಿತು ಟ್ಟೀಟ್‌ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲ, ‘ಅಧಿಕಾರದಲ್ಲಿರುವವರ ಬಗೆಗಿನ ಸತ್ಯದ ಧ್ವನಿಯನ್ನು ನಿಗ್ರಹಿಸುವ ಯತ್ನ ಇದು’ ಎಂದು ಕಿಡಿಕಾರಿದ್ದಾರೆ. ಇನ್ನೊಂದು ಕಡೆ ಸಂಸತ್‌ನಲ್ಲಿ ಮಾತನಾಡಿರುವ ಟಿಎಂಸಿ ಸಂಸದ ಡೆರೇಕ್‌ ಓಬ್ರಿಯಾನ್, ಪತ್ರಕರ್ತರ ಮೇಲೆ ಒತ್ತಡಗಳಿವೆ ಎಂದು ಹೇಳಿದ್ದಾರೆ.

ಆಗಿದ್ದೇನು?

ಅಷ್ಟಕ್ಕೂ ಈ ಪತ್ರಕರ್ತರ ನಿರ್ಗಮನಕ್ಕೆ ಕಾರಣವಾಗಿದ್ದು ಏನು ಎಂದು ಹುಡುಕುತ್ತಾ ಹೊರಟರೆ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಮತ್ತು ಅದರ ಸುತ್ತಾ ನಡೆದ ಘಟನಾವಳಿಗಳು ಕಾಣಿಸಿಕೊಳ್ಳುತ್ತವೆ.

ತಮ್ಮ ಅವಧಿ ಮುಗಿಯುತ್ತಾ ಬಂದಿರುವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ಸಮುದಾಯಗಳ ಜತೆ ಸಂವಾದ ನಡೆಸುತ್ತಿದ್ದಾರೆ. ಹೀಗೆ ಛತ್ತೀಸ್‌ಗಢದ ಚಂದ್ರಮನಿ ಕೌಶಿಕ್‌ ಎಂಬ ಮಹಿಳೆ ಜತೆ ಅವರು ಮಾತುಕತೆ ನಡೆಸುತ್ತಿದ್ದಾಗ, ಆಕೆ ‘ನಾನು ಭತ್ತ ಬೆಳೆಯುವ ಬದಲು ಸೀತಾಪಲ ಬೆಳೆಯಲು ಆರಂಭಿಸಿ ದುಪ್ಪಟ್ಟು ಲಾಭ ಗಳಿಸುತ್ತಿದ್ದೇನೆ’ ಎಂದು ಹೇಳಿದ್ದರು.

ಈ ಬಗ್ಗೆ ‘ಮಾಸ್ಟರ್‌ಸ್ಟ್ರೋಕ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದ ಬಾಜಪೇಯಿ, ಮಹಿಳೆಗೆ ಸುಳ್ಳು ಹೇಳಲು ತರಬೇತಿ ನೀಡಲಾಗಿದೆ ಎಂದು ಆರೋಪಿಸಿದ್ದರು. ದೆಹಲಿಯಿಂದ ಕಂಕೇರ್‌ ಜಿಲ್ಲೆಗೆ ತೆರಳಿದ್ದ ಅಧಿಕಾರಿಯೊಬ್ಬರು ಈ ರೀತಿ ತಪ್ಪು ಮಾಹಿತಿ ಹೇಳುವಂತೆ ಮಹಿಳೆಗೆ ಸೂಚಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ವಿಡಿಯೋ ಕ್ಲಿಪ್‌ನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಟ್ಟೀಟ್‌ ಮಾಡುವ ಮೂಲಕ ಇದು ಎಬಿಪಿಯ ಸಾಂಪ್ರದಾಯಿಕ ವೀಕ್ಷಕರನ್ನು ದಾಟಿ ಜನರನ್ನು ತಲುಪಿತ್ತು.

ಮುಗಿಬಿದ್ದ ಬಿಜೆಪಿ

ಇಷ್ಟಾಗಿದ್ದೇ ತಡ ಬಿಜೆಪಿಗರು ಎಬಿಪಿ ನ್ಯೂಸ್‌ ವಿರುದ್ಧ ಮುಗಿಬಿದ್ದಿದ್ದರು. ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ನರೇಂದ್ರ ಮೋದಿಯನ್ನು ವಿರೋಧಿಸುವ ಅಜೆಂಡಾವನ್ನು ಎಬಿಪಿ ಪತ್ರಕರ್ತರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ವಾಹಿನಿಯ ವರದಿ ಸುಳ್ಳು ಎಂದು ಅವರು ಕಿಡಿಕಾರಿದರು. ರಕ್ಷಣಾ ಸಚಿವೆ, ಮಾಜಿ ಪತ್ರಕರ್ತೆ ನಿರ್ಮಲಾ ಸೀತರಾಮನ್‌ ಬಾಯಿಯಿಂದಲೂ ಇದೇ ಮಾತು ಹೊರ ಬಂತು.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ ‘ಎಬಿಪಿ ನ್ಯೂಸ್‌’ ತನ್ನ ವರದಿಗಾರನನ್ನು ಮಹಿಳೆಯಿದ್ದ ಗ್ರಾಮಕ್ಕೆ ಕಳುಹಿಸಿ ವಾಸ್ತವ ವರದಿಯನ್ನು ಬಿತ್ತರಿಸಿತು. ಮತ್ತು ಇದು ನಿಮ್ಮ ‘ಫೇಕ್ ನ್ಯೂಸ್‌’ ಆರೋಪಕ್ಕೆ ಪ್ರತಿಕ್ರಿಯೆ ಎಂಬುದಾಗಿ ನಿರ್ಮಾಲಾ ಸೀತಾರಾಮನ್‌ ಮತ್ತು ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ರನ್ನು ಟ್ಯಾಗ್‌ ಮಾಡಿ ಟ್ಟೀಟ್‌ ಮಾಡಿತು.

ಈ ಬೆಳವಣಿಗೆಯಿಂದ ಉರಿದು ಹೋದ ಬಿಜೆಪಿ ನಾಯಕರು ಚಾನಲ್‌ಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದರು ಎಂದು ಚಾನಲ್‌ ಮೂಲಗಳು ಹೇಳಿದ್ದಾಗಿ ‘ಸ್ಕ್ರಾಲ್‌’ ವರದಿ ಮಾಡಿದೆ.

ಹೀಗೊಂದು ಹೊಸ ಒತ್ತಡ ತಂತ್ರ

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಾಹಿನಿಗೆ ಹೊಸತೊಂದು ತಲೆನೋವು ಆರಂಭವಾಯಿತು. ‘ಮಾಸ್ಟರ್‌ಸ್ಟ್ರೋಕ್‌’ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ಪ್ರೈಮ್‌ಟೈಮ್‌ ಅವಧಿಯಲ್ಲೇ ವಾಹಿನಿಯ ಸಿಗ್ನಲ್‌ನಲ್ಲಿ ತೊಂದರೆ ಕಾಣಿಸಿಕೊಳ್ಳಲು ಆರಂಭವಾಯಿತು. ಜುಲೈ 13ರಿಂದ ತಾಂತ್ರಿಕ ಸಮಸ್ಯೆಯೊಂದು ತೆರೆದುಕೊಂಡಿತು.

ಇವೆಲ್ಲಾ ವಾಹಿನಿಯ ಗಮನಕ್ಕೂ ಬಂದಿತ್ತು. ಇದನ್ನು ಉದ್ದೇಶಿಸಿಯೇ ‘ಎಲ್ಲಾ ಅಡ್ಡಿ ಆತಂಕಗಳ ನಡುವೆಯೂ ವಾಹಿನಿ ಸತ್ಯವನ್ನೇ ಹೇಳುತ್ತಾ ಬಂದಿದೆ’ ಎಂದು ಬಾಜಪೇಯಿ ಕಾರವಾಗಿ ಟ್ಟೀಟ್‌ ಮಾಡಿದ್ದರು. ತಮ್ಮ ಮಾಸ್ಟ್ರರ್‌ಸ್ಟ್ರೋಕ್‌ ಪ್ರೋಗ್ರಾಂಗೆ ಆಗುತ್ತಿರುವ ಈ ಸಿಗ್ನಲ್‌ ಸಮಸ್ಯೆಯಿಂದ ಬೇಸತ್ತಿದ್ದ ಬಾಜಪೇಯಿ, ಹಸಿವಿನಿಂದ ಸಾಯುತ್ತಿರುವರುವವರು, ನಿರುದ್ಯೋಗ, ರೈತರ ಆತ್ಮಹತ್ಯೆ, ಶುದ್ಧಗಾಳಿ, ನೀರು ಇದ್ಯಾವುದರ ಕಡೆಯಗೂ ಗಮನ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದಾದ ನಂತರ ಅವರು ತಮ್ಮ ಶೋನ ವಿಡಿಯೋಗಳನ್ನು ಅನಿವಾರ್ಯವಾಗಿ ಟ್ಟೀಟ್‌ ಮಾಡಲು ಆರಂಭಿಸಿದ್ದರು.

ಅಂದ ಹಾಗೆ ಟಿವಿ ವಾಹಿನಿಗಳ ಪ್ರಸಾರಕ್ಕೆ ಬೇಕಾದ ಈ ಸಿಗ್ನಲ್‌ಗಳು ಕೇಂದ್ರ ಸರಕಾರದ ಸುಪರ್ದಿಯಲ್ಲಿವೆ. ಮತ್ತು ಹೀಗೆ ಇದ್ದಕ್ಕಿದ್ದ ಹಾಗೆ ವಾಹಿನಿಯೊಂದು ತಾಂತ್ರಿಕ ಸಮಸ್ಯೆಗೆ ಒಳಗಾಗಿದ್ದರ ಹಿಂದೆ ಏನು ನಡೆದಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ.

ಈ ಎಲ್ಲಾ ಬೆಳವಣಿಗೆಗಳ ನಂತರ ಬುಧವಾರ ಖಂಡೇಕರ್‌, ಗುರುವಾರ ಬಾಜೊಪೇಯಿ ರಾಜೀನಾಮೆ ನೀಡಿ ವಾಹಿನಿಯಿಂದ ಹೊರ ನಡೆದಿದ್ದಾರೆ. ಇನ್ನೋರ್ವ ಪತ್ರಕರ್ತ ಅಭಿಸಾರ್‌ ಶರ್ಮಾ ರಜೆಯ ಮೇಲೆ ತೆರಳಿದ್ದಾರೆ. ಬಹುಶಃ ‘ದೆಹಲಿ ದರ್ಬಾರ್‌’ನಲ್ಲಿ ಕುಳಿತವರೀಗ ಅಟ್ಟಹಾಸದ ನಗು ಬೀರುತ್ತಿರಬಹುದು. ನೀವು ನಮ್ಮ ಪರವಾಗಿರಿ ಇಲ್ಲವಾದಲ್ಲಿ ವೃತ್ತಿ ತೊರೆಯಲು ಸಿದ್ಧರಾಗಿ ಎಂಬ ಸಂದೇಶವೊಂದು ಮತ್ತೊಮ್ಮೆ ಎದುರಾಗಿದೆ. ಯಾಕೆ ದೇಶದ ಬಹುತೇಕ ಸುದ್ದಿವಾಹಿನಿಗಳು ಕೇಂದ್ರ ಸರಕಾರ ತುತ್ತೂರಿಗಳಾಗಿವೆ ಮತ್ತು ಪತ್ರಕರ್ತರು ಯಾಕೆ ಸ್ವಂತಿಕೆ ಕಳೆದುಕೊಂಡು ಬೆತ್ತಲಾಗಿದ್ದಾರೆ ಎಂಬುದಕ್ಕೆ ಉತ್ತರ ಈ ವೃತ್ತಾಂತದಲ್ಲಿ ಸಿಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version