ಬಹಿರಂಗ
ಬಣ್ಣ, ರುಚಿ ಮತ್ತು ಶಕ್ತಿ
- ಡಾ.ಎನ್.ಕೆ.ಪದ್ಮನಾಭ,ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರ,ಉಜಿರೆ
ಈ ಬರಹದ ಶೀರ್ಷಿಕೆಯ ಮೂರೂ ಪದಗಳು ಹಲವರ ನೆನಪಿನ ಪುಟಗಳಲ್ಲಿ ದಾಖಲಾಗಿರಬಹುದು. ಚಹಾಪುಡಿಯನ್ನು ಜನಜನಿತವಾಗಿಸಲು ಟಿ.ವಿ ಮೂಲಕ ತಲುಪಿಕೊಳ್ಳುತ್ತಿದ್ದ ಜಾಹಿರಾತು ಈ ಪದಗಳನ್ನು ನಮ್ಮ ನೆನಪಿನ ಕೋಶದೊಂದಿಗೆ ಬೆರೆಸುವಲ್ಲಿ ಯಶಸ್ವಿಯಾಗಿತ್ತು. ಅದಷ್ಟೇ ಆಗಿದ್ದಿದ್ದರೆ ಈ ಪದಗಳನ್ನು ಪ್ರಸ್ತಾಪಿಸುವುದರ ಮೂಲಕ ಈ ಲೇಖನವನ್ನು ಪ್ರಾರಂಭಿಸುವ ಪ್ರಮೇಯವೇ ಬರುತ್ತಿರಲಿಲ್ಲ.
ವರ್ತಮಾನದ ಸುದ್ದಿಯ ಟ್ರೆಂಡ್ ಮತ್ತು ಆ ಮೂಲಕ ವಿಜೃಂಭಿಸುತ್ತಿರುವ ವಿಕೃತಿಗಳ ಸ್ವರೂಪ ಅರಿತುಕೊಳ್ಳುವುದಕ್ಕೆ ಸಹಾಯಕ ಪದಗಳಾಗಿ ಇವು ನನಗೆ ಮುಖ್ಯವೆನ್ನಿಸುತ್ತಿವೆ. ಸುದ್ದಿ ಮಾಧ್ಯಮದವರು ತಾವು ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯ ಕಟ್ಟಾ ವಾರಸುದಾರರು ಎಂದು ಬೀಗಿಕೊಂಡು ಅಹಂಕಾರದ ಬೃಹತ್ ರೂಪ ತಾಳಿರುವಾಗ ಈ ಮೂರೂ ಪದಗಳ ಒಳಗೇ ಅಣಕವಾಡುವ ಬಹುದೊಡ್ಡ ಅರ್ಥವಿನ್ಯಾಸ ಅಡಗಿದೆಯೇನೋ ಎಂದೆನ್ನಿಸುತ್ತದೆ.
ಈಗಾಗಲೇ ಅಗಿಹೋದ ದಶಕಗಳಲ್ಲಿನ ಜನಬದುಕಿನಲ್ಲಿ ಆದ್ಯತೆ ಪಡೆದುಕೊಂಡ ಉತ್ಪನ್ನವೊಂದು ಅನಿವಾರ್ಯ ಅವಿಭಾಜ್ಯ ಅಂಶವಾಗಿ ಮಾರ್ಪಟ್ಟಿದ್ದಷ್ಟೇ ಅಲ್ಲದೇ ಪ್ರತಿಷ್ಠೆಯ ಮಾಪಕವಾಗಿಯೂ ಬಳಕೆಯಾದ ಕ್ರಮಾನುಗತ ಇತಿಹಾಸದ ವಿವರಗಳನ್ನೂ ಈ ಮೂರೂ ಪದಗಳು ಅನಾವರಣಗೊಳಿಸುತ್ತವೆ. ಮನೆಗೆ ಬಂದವರಿಗೆ ನೀರು, ನಿಂಬೆಹಣ್ಣಿನ ಪಾನಕ ಅಥವಾ ಮಜ್ಜಿಗೆಯನ್ನು ನೀಡುತ್ತಿದ್ದ ಆತಿಥ್ಯದ ಪರಿಕಲ್ಪನೆಗೆ ಈ ಮೂರು ಪದಗಳೊಂದಿಗೆ ಬಿಂಬಿತವಾದ ಚಹಾಪುಡಿ ಉತ್ಪನ್ನದ ಜಾಹಿರಾತು ಸವಾಲೆಸೆದಿತ್ತು. ಇದರೊಂದಿಗೆ ಇದೇ ತೆರನಾದ ಪಾನೀಯ ಉತ್ಪನ್ನದ ಜಾಹಿರಾತುಗಳು ದೇಶೀ ಆತಿಥ್ಯದಲ್ಲಿ ಪ್ರಾಮುಖ್ಯತೆ ವಹಿಸಿದ್ದ ಪಾನೀಯಗಳನ್ನು ಹಿನ್ನೆಲೆಗೆ ಸರಿಸಿದ್ದವು.
ತದನಂತರದ ತರಹೇವಾರಿ ಜಾಹಿರಾತುಗಳು ನಮ್ಮದಲ್ಲದ ಜೀವನಶೈಲಿಯ ಉತ್ಪನ್ನಗಳ ಬಗೆಗಿನ ವ್ಯಾಮೋಹವನ್ನು ಹಂತಹಂತವಾಗಿ ಹೆಚ್ಚಿಸುತ್ತಲೇ ಬಂದವು. ದೇಶೀಯ ಪಾನೀಯಗಳಿಗೆ ಬಣ್ಣವೂ ಇತ್ತು. ರುಚಿಯೂ ಇತ್ತು. ಶಕ್ತಿಯೂ ಇತ್ತು. ಅವೆಲ್ಲವನ್ನೂ ಅಲ್ಲಗಳೆದು ಹೊಸ ಉತ್ಪನ್ನದ ಕಡೆಗೆ ಆಕರ್ಷಣೆಯಾದದ್ದಕ್ಕೆ ಟೆಲಿವಿಷನ್ ಮಾಧ್ಯಮದ ಪ್ರಭಾವ ಕಾರಣವಾಗಿತ್ತು.
ಇದೇ ಬಗೆಯ ಮಾಧ್ಯಮ ಪ್ರಭಾವವೇ ಈಗ ಜನಜೀವನದ ಕ್ರಮಗಳನ್ನು, ಆಲೋಚನೆಯ ಧಾಟಿಯನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆದುನಿಂತಿದೆ. ಈಗಿನ ನವಮಾಧ್ಯಮಗಳ ಪ್ರಭಾವಳಿಯಂತೂ ಜನರಿಂದ ವಿವೇಚನೆಯನ್ನು ಕಸಿದುಕೊಂಡು ಬಣ್ಣ, ರುಚಿ ಮತ್ತು ಶಕ್ತಿಯ ಕುರಿತ ಅಪವ್ಯಾಖ್ಯಾನಗಳನ್ನು ಮುನ್ನೆಲೆಗೆ ತಂದಿದ್ದಲ್ಲದೇ ಅವೇ ಅಂತಿಮ ಎಂಬ ಭ್ರಮೆಯನ್ನೂ ಬಿತ್ತಿದೆ.
ಬಣ್ಣ, ರುಚಿ ಮತ್ತು ಶಕ್ತಿ ಎಂಬ ಪದಗಳು ಸ್ವತಃ ತಾವೇ ಮುಜುಗರಕ್ಕೊಳಗಾಗುವಂತೆ ಅವುಗಳನ್ನು ಸತ್ವಹೀನ ಸರಕುಗಳಿಗೆ ಅನ್ವಯಿಸುವ ಜಾಯಮಾನ ವ್ಯಾಪಕವಾಗಿದೆ. ಈ ವ್ಯಾಪ್ತಿಯಲ್ಲಿಯೇ ನಾವು ‘ಸುದ್ದಿ’ಯನ್ನಿಟ್ಟು ನೋಡಬೇಕು. ಸುದ್ದಿ ಮಾಧ್ಯಮಗಳನ್ನು ಗ್ರಹಿಸಬೇಕು.
ಈಗ ಸುದ್ದಿಯು ಬರೀ ಸುದ್ದಿಯಾಗಷ್ಟೇ ಉಳಿದಿಲ್ಲ. ಇದಕ್ಕೀಗ ಬಣ್ಣಗಳ ಹಂಗು ಹೆಚ್ಚಾಗಿದೆ. ಸದಭಿರುಚಿಯ ಮನಸ್ಥಿತಿಯನ್ನು ಹಿಂಸೆ, ಸಂಕುಚಿತತೆ ಮತ್ತು ದ್ವೇಷದ ವಿಕೃತಿಗಳ ಕಡೆಗೆ ತಿರುಗಿಸುವ ಅಪಾಯಕಾರಿ ರುಚಿಯ ವ್ಯಾಮೋಹವನ್ನು ಮೂಡಿಸುತ್ತಿದೆ. ಇವೆರಡರೊಂದಿಗೇ ಗುರುತಿಸಿಕೊಳ್ಳುವ ಹಾಗೆಯೇ ನೋಡಿಕೊಂಡು ಅದೇ ವ್ಯಕ್ತಿಯ ನಿಜವಾದ ಶಕ್ತಿ ಎಂಬುದನ್ನು ಭಾವುಕ ವಿಜೃಂಭಣೆಯಲ್ಲಿ ಮಿನುಗಿಸುತ್ತಿದೆ.
ಮಾಹಿತಿ ನೀಡುವ ಮೂಲಕ ಸುಶಿಕ್ಷಿತ ಪರಂಪರೆಗೆ ಕೊಡುಗೆ ನೀಡಿ ರಂಜನೆಗೆ ವಿವೇಚನಾತ್ಮಕ ಆಯಾಮ ನೀಡುತ್ತಿದ್ದ ಸುದ್ದಿಯ ಪಾತ್ರವು ಇದೀಗ ವಿಷದ ಸೋಂಕಿಗೀಡಾಗಿದೆ. ಕೋವಿಡ್-19 ಸೃಷ್ಟಿಸಿದ ಬಿಕ್ಕಟ್ಟಿನ ಅವಧಿಯಲ್ಲಿ ಚರ್ಚಿತವಾದ ಅಮೆರಿಕ ಪೊಲೀಸರ ದ್ವೇಷಕ್ಕೆ ಬಲಿಯಾದ ಜಾರ್ಜ್ ಫ್ಲಾಯ್ಡ್‍ನ ಕುರಿತ ಸುದ್ದಿ ವ್ಯಕ್ತವಾದಾಗ ಖಂಡನೆಯ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಡಿತ್ತು.
ಬಣ್ಣದ ಕಾರಣಕ್ಕಾಗಿಯೇ ನಿರ್ಲಕ್ಷಿತರಾಗುಳಿದು ಆಗಾಗ ಶೋಷಣೆಗೆ ಒಳಗಾಗುತ್ತಲೇ ದುಃಖದುಮ್ಮಾನಗಳನ್ನೆಲ್ಲಾ ಒಡಲೊಳಗಿರಿಸಿಕೊಂಡೇ ಬದುಕು ದೂಡುವ ಜನರ ನಿತ್ಯ ಯಾತನೆಯ ಸುದ್ದಿಬಿಂಬಗಳು ತಾರ್ಕಿಕ ಪರಿಹಾರದ ನಿರೀಕ್ಷೆಯ ಬದ್ಧತೆಯ ಬೆಂಬಲದ ಸ್ಪರ್ಶದೊಂದಿಗೆ ಕಾಣಿಸಿಕೊಳ್ಳುವುದೇ ಇಲ್ಲ. ಬಿಂಬಿತವಾದರೂ ಅನುಕಂಪ ಹುಟ್ಟಿಸುವ ಮತ್ತು ಬದಲಾವಣೆ ಆಗಬೇಕು ಎಂಬ ನಿಲುವುಗಳನ್ನು ಕೃತಕವಾಗಿ ದಾಖಲಿಸಿಬಿಡುವ ಭಾವಗಳನ್ನಷ್ಟೇ ಬಿತ್ತುವುದಕ್ಕಷ್ಟೇ ಸೀಮಿತವಾಗುತ್ತವೆ.
ನನ್ನದೇ ಮನೆಯ ಪಕ್ಕದ ಅಥವಾ ಸಮೀಪದ ಗುಡಿಸಿಲಿನವರನ್ನು ಇನ್ನುಮೇಲೆಯಾದರೂ ಮನುಷ್ಯರನ್ನಾಗಿ ನೋಡಬೇಕು ಎಂಬ ದೃಷ್ಟಿಕೋನವನ್ನು ಬಿತ್ತುವಲ್ಲಿ ಇವು ಸೋಲುತ್ತವೆ. ಅಲ್ಲಿಗೇ ಬಣ್ಣದ ನೆಲೆಯಲ್ಲಿಯೇ ರೂಪುಗೊಳ್ಳುವ ಅಸಮಾನತೆಯ ಜಗತ್ತಿನ ವಿಕೃತ ಸ್ವರೂಪದ ಬೇರು ಇನ್ನಷ್ಟು ಗಟ್ಟಿಯಾಗಿಯೇ ಉಳಿದುಕೊಂಡುಬಿಡುವ ಲಕ್ಷಣಗಳು ದಟ್ಟವಾಗಿಬಿಡುತ್ತವೆ.
ರೈತನ ಆತ್ಮಹತ್ಯೆಗೆ ಸುದ್ದಿ ಮಾಧ್ಯಮಗಳು ಬಳಿಯುವ ಬಣ್ಣ ಕೃತಕವಾದುದು. ಮುದ್ರಿತ ದಿನಪತ್ರಿಕೆಗಳ ಪುಟಗಳ ಬ್ಲಾಕ್ ಆ್ಯಂಡ್ ವೈಟ್ ಬಣ್ಣದಲ್ಲಿ ಕಾಣಿಸಿಕೊಳ್ಳುವ ಸುದ್ದಿ ಓದುಗನಲ್ಲಿ ಆ ಕ್ಷಣಕ್ಕೆ ಅಯ್ಯೋ ಎಂಬ ಭಾವವನ್ನು ಮೂಡಿಸುತ್ತದೆ. ಇತ್ತೀಚೆಗೆ ಕೆಲವು ಪತ್ರಿಕೆಗಳು ಇದೇ ತರಹದ ಸುದ್ದಿಯನ್ನು ವರ್ಣಮುದ್ರಣದೊಂದಿಗೆ ಕಟ್ಟಿಕೊಟ್ಟಾಗ ಅಯ್ಯೋ ಎನ್ನುವ ಆಂತರಿಕ ಭಾವ ಇನ್ನಷ್ಟು ತೀವ್ರಗೊಳಿಸಬಹುದು ಎಂಬ ನಿರೀಕ್ಷೆಯಿರಿಸಿಕೊಂಡಿರುತ್ತವೆ. ‘ದಿ ಹಿಂದೂ’ ಸೇರಿದಂತೆ ಕೆಲವೇ ಕೆಲವು ಪತ್ರಿಕೆಗಳು ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಾಸ್ತವಿಕವಾದ ಯಥಾವತ್ ವಿವರಗಳನ್ನು ಯಾವುದೇ ಬಗೆಯ ವರ್ಣರಂಜಿತ ನಿರೂಪಣೆ ಇಲ್ಲದೇ ನಮ್ಮ ವಿವೇಚನೆಯ ಅಂತರಿಕ ಶಕ್ತಿಯನ್ನು ವಿಸ್ತರಿಸುವ ರೀತಿಯಲ್ಲಿ ಪ್ರಸ್ತಾಪಿಸುತ್ತವೆ. ಇದೇ ಸುದ್ದಿ ಟೆಲಿವಿಷನ್ ಮಾಧ್ಯಮದ ಮೂಲಕ ಬಂದರೆ ಮಣಭಾರದ ಮೇಕಪ್ ಹೊರೆ ಹೊತ್ತುಕೊಂಡ ಆ್ಯಂಕರ್‍ಗಳ ಧ್ವನಿಯಲ್ಲಿ ಕೃತಕತೆಯನ್ನು ಪಡೆದುಕೊಂಡುಬಿಡುತ್ತದೆ.
ಹಿಂಸೆ, ಸೆಕ್ಸ್, ರಾಜಕೀಯ ವೈಚಿತ್ರ್ಯಗಳನ್ನು ಬಿಂಬಿಸುವಾಗ ಬಳಸುವ ಧ್ವನಿಶೈಲಿಯನ್ನೇ ರೈತನ ಆತ್ಮಹತ್ಯೆ, ನೈಸರ್ಗಿಕ ವಿಕೋಪ ಸಂದರ್ಭದ ಸಾವು-ನೋವುಗಳನ್ನು ಬಿಂಬಿಸುವಾಗ ಬಳಸುತ್ತಾರೆ. ಅನೇಕ ಅತಿಥಿ ಉಪನ್ಯಾಸಕರು ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೊಂದರೆಗೀಡಾಗಿದ್ದಾರೆ. ಕೆಲವರು ಆತ್ಮಹತ್ಯೆಯನ್ನೇ ಪರಿಹಾರವಾಗಿಸಿಕೊಂಡರು.
ಈ ಬಿಂಬಗಳು ರೋಚಕ ರೀತಿಯಲ್ಲಿಯೇ ಇರುತ್ತವೆ. ಪತ್ರಿಕೆಗಳಲ್ಲಿ ಕಂಡುಬರುವ ವೈಚಾರಿಕ ನೋಟಗಳೊಂದಿಗಿನ ವಿಶ್ಲೇಷಣೆಯ ಮಾದರಿ ದೃಶ್ಯಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಕಾಣಿಸುವ ಇರಾದೆಯೂ ಸುದ್ದಿ ಚಾನಲ್‍ಗಳವರಿಗೆ ಇರುವುದಿಲ್ಲ. ಆತ್ಮಹತ್ಯೆ ಮತ್ತು ಸಾವು ಕೂಡಾ ಅವರಿಗೆ ಉತ್ಪನ್ನಗಳ ಹಾಗೆಯೇ ಮಾರಾಟ ಮಾಡಬಹುದಾದ ಅಂಶಗಳು. ಹಾಗಾಗಿಯೇ ಸುದ್ದಿಬಿಂಬಿಸುವಿಕೆಯ ವೇಳೆ ಕೃತಕತೆಯ ಬಣ್ಣ ಆವರಿಸಿಕೊಂಡುಬಿಡುತ್ತದೆ. ಈ ರೀತಿಯ ವರ್ಣರಂಜಿತ ಸುದ್ದಿಬಿಂಬಗಳು ಪ್ರಭುತ್ವವನ್ನು ಎಚ್ಚರಿಸುವುದು ಒತ್ತಟ್ಟಿಗಿರಲಿ, ಜನರೊಳಗೆ ಪ್ರತಿರೋಧದ ಯಾವ ಆಲೋಚನೆಯನ್ನೂ ನೆಲೆಗೊಳಿಸುವುದಿಲ್ಲ.
ಒಬ್ಬರು ಮತ್ತೊಬ್ಬರನ್ನು ಟೀಕಿಸುತ್ತಾರೆ, ಅಮಾಯಕರೊಬ್ಬರು ಅತ್ಯಾಚಾರಕ್ಕೀಡಾಗುತ್ತಾರೆ, ಯಾರದೋ ಮನೆಯ ಕೋಟಿಗಟ್ಟಲೆ ಹಣ ದೋಚಲ್ಪಡುತ್ತದೆ, ವಿಕೃತನೊಬ್ಬ ಹಲವರನ್ನು ಕೊಲೆಗೈದು ಅಟ್ಟಹಾಸಗೈಯ್ಯುತ್ತಾನೆ, ಯಾರೋ ಮತ್ತಿನ್ಯಾರಿಗೂ ಕಿರುಕುಳವನ್ನು ನೀಡುತ್ತಾರೆ, ಒಬ್ಬರು ಮತ್ತೊಬ್ಬರಿಗೆ ಕೊಲೆಗೈಯ್ಯುವ ಧಮ್ಕಿ ಹಾಕುತ್ತಾರೆ, ಇನ್ನೂ ಅದ್ಭುತ ಭವಿಷ್ಯವಿರುವ ಖ್ಯಾತ ನಟ ಅಕಾಲಿಕ ಮರಣಕ್ಕೀಡಾಗುತ್ತಾನೆ, ಕೊರೊನಾ ವೈರಸ್ ಜಗತ್ತನ್ನು ಸ್ತಬ್ದಗೊಳಿಸಿ ಜನಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತದೆ – ಇವೆಲ್ಲ ಸಂದರ್ಭಗಳಲ್ಲಿ ಅತ್ಯಂತ ಸಂಯಮದ ಧಾಟಿಯಲ್ಲಿ ಸುದ್ದಿ ನಿರೂಪಣೆ ಇರಬೇಕಾಗುತ್ತದೆ. ಆದರೆ, ಸುದ್ದಿ ಮಾಧ್ಯಮಗಳು ಅದರ ಬದಲು ಸುದ್ದಿಗಿರುವ ಸದಭಿರುಚಿಯ ಸ್ವರೂಪಕ್ಕೆ ಕೊಡಲಿಪೆಟ್ಟು ನೀಡುವ ಹಾಗೆ ನಡೆದುಕೊಳ್ಳುತ್ತವೆ.
ಇದನ್ನು ದೃಢಪಡಿಸುವಂತೆಯೇ ಸುದ್ದಿ ಚಾನಲ್‍ಗಳು ಕೋವಿಡ್-19 ಬಿಕ್ಕಟ್ಟು ತೀವ್ರವಾಗಿದ್ದ ದಿನಗಳಲ್ಲಿ ನಡೆದುಕೊಂಡಿವೆ. ಈಗಲೂ ಅವುಗಳದ್ದು ಅದೇ ಧಾಟಿ. ಹೀಗಾಗಿಯೇ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಚಾನಲ್‍ಗಳ ವಿಚಿತ್ರ ನಡಾವಳಿಗಳನ್ನು ವ್ಯಂಗ್ಯಕ್ಕೀಡು ಮಾಡುವ ಮಾತು, ಚರ್ಚೆಗಳು ವ್ಯಕ್ತವಾಗುತ್ತಲೇ ಇವೆ. ವೈರಸ್‍ವೊಂದು ಜಗತ್ತನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲಿ ಮನುಷ್ಯಸಹಜ ವಿಕೃತಿಗಳು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ನಾವಿರುವ ದೇಶ, ಇಲ್ಲಿಯ ಧರ್ಮ, ಧರ್ಮವನ್ನು ಅಪಭ್ರಂಶಗೊಳಿಸಿದ ಶಕ್ತಿಗಳು, ಅವುಗಳ ನೆರವಿನೊಂದಿಗೇ ಪ್ರಭುತ್ವವನ್ನು ಪ್ರತಿನಿಧಿಸುವ ವರ್ಗ, ಸಮಾನತೆಯ ಸದಾಶಯಗಳನ್ನೇ ನೆಚ್ಚಿಕೊಂಡು ಅಧಿಕಾರಕ್ಕೆ ಬಂದವರ ವಲಯ – ಎಲ್ಲರೂ ಅವರವರ ಮೂಗಿನ ನೇರಕ್ಕೆ ಯೋಚಿಸುತ್ತಾ ವಿತಂಡವಾದಗಳನ್ನು ಮಂಡಿಸುವ ಉತ್ಸಾಹ ವ್ಯಕ್ತಪಡಿಸುತ್ತಾರೆ.
ಅವರ ಈ ವಿಚಿತ್ರ ಉತ್ಸಾಹವನ್ನು ಹೆಚ್ಚಿಸುವ ಹಾಗೆ ಸುದ್ದಿಯ ಕಂಟೆಂಟ್ ಪ್ರಸ್ತುತಪಡಿಸಲ್ಪಟ್ಟರೆ ಪ್ರಯೋಜನವಿಲ್ಲ ಎಂದು ಸುದ್ದಿಮಾಧ್ಯಮಗಳು ಯೋಚಿಸುವ ಆಶಾದಾಯಕ ವಾತಾವರಣ ಈಗಿಲ್ಲ ಎಂಬುದೇ ಆತಂಕಕಾರಿ ಸಂಗತಿ. ಇದರ ಮಧ್ಯೆ ಕೆಲವರಾದರೂ ಅಗತ್ಯವಿದ್ದವರಿಗೆ ಚಾನಲ್‍ನ ವೇದಿಕೆಯ ಮೂಲಕ ನೆರವಾದರು ಎಂಬ ಸಮಾಧಾನವಿದ್ದರೂ ಅದೇ ತೆರನಾದ ಸಹಾಯಕ ಪಾತ್ರ ಬಹುಸಂಖ್ಯಾತ ಸುದ್ದಿಮಾಧ್ಯಮಗಳಿಂದ ಏಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಮತ್ತದೇ ಬಣ್ಣ-ರುಚಿಯ ಕುರಿತದ ಅಪವ್ಯಾಖ್ಯಾನದ ವ್ಯಾಮೋಹದ ಕಾರಣವೇ ಉತ್ತರವಾಗುತ್ತದೆ.
ಮಾಹಿತಿ ಮತ್ತು ಶಿಕ್ಷಣ ಇವೆರಡೂ ಜನಬದುಕಿಗೆ ಹೊಸ ಹೊಳಪು ನೀಡುವ, ಹೊಸ ಬಗೆಯ ಅಭಿರುಚಿಯನ್ನು ನೆಲೆಗೊಳಿಸುವಂಥವು. ಬದಲಾವಣೆಗೆ ಕಾರಣವಾಗುವಂಥವು. ಹೀಗೆಯೇ ಅವುಗಳು ಸುದ್ದಿಯಲ್ಲಿ ಪ್ರತಿಫಲನಗೊಳ್ಳಬೇಕಿತ್ತು. ಅದೇ ಆಧಾರದಲ್ಲಿಯೇ ಸುದ್ದಿಯು ಜೀವಪರವಾಗಿ ಯೋಚಿಸುವ ಶಕ್ತಿಯಾಗಿ ಪರಿವರ್ತಿತವಾಗಬೇಕಿತ್ತು.
ಆದರೆ, ಭ್ರಮೆಗಳನ್ನು ಬಿತ್ತುವ ಕೃತಕತೆಯ ಬಣ್ಣ, ದೇಹ-ಮನಸ್ಸನ್ನು ಕಲುಷಿತಗೊಳಿಸಿ ಅಪಾಯಕಾರಿಯಾಗುವ ರುಚಿ ಮತ್ತು ಬಲವೇ ಇಲ್ಲದ ನಿಶ್ಯಕ್ತ ತಾತ್ಪೂರ್ತಿಕ ಶಕ್ತಿಯನ್ನೇ ಮುಖ್ಯ ಎಂದು ಬಿಂಬಿಸುವ ಸರಕು ವಿಕೃತಿಯ ಜಾಡ್ಯ ಸುದ್ದಿಗೂ ಅಂಟಿಕೊಂಡಿರುವುದು ಅಪಾಯಕಾರಿ ಎಂದೆನ್ನಿಸುತ್ತದೆ.
ಓದುಗ, ನೋಡುಗ ಮತ್ತು ಕೇಳುಗ ಸಮೂಹಕ್ಕೆ ಇರುವ ಒಂದೇ ಒಂದು ದಾರಿ ಎಂದರೆ ಬಣ್ಣ, ರುಚಿ ಮತ್ತು ಶಕ್ತಿಯಲ್ಲದ ಶಕ್ತಿಯ ಹುಸಿಬಿಂಬಗಳಿಗೆ ಮಾರುಹೋಗದೇ ಇರುವುದು. ಹಾಗೆ ಮಾರುಹೋಗದೇ ನಮ್ಮನ್ನು ದಾರಿತಪ್ಪಿಸುವ ಹುನ್ನಾರಗಳನ್ನು ಬಹುಬೇಗ ಅರ್ಥೈಸಿಕೊಳ್ಳುವುದು. ಸದ್ಯಕ್ಕೆ ಮತ್ತು ಭವಿಷ್ಯಕ್ಕೆ ಬೇಕಾಗುವ ಬದಲಾವಣೆಯನ್ನು ತಂದುಕೊಳ್ಳುವುದು ಹೇಗೆ ಎಂದು ರಚನಾತ್ಮಕವಾಗಿ ಯೋಚಿಸುವುದು.
ಈ ದಾರಿಯಲ್ಲಿ ಇಡೀ ಜನಸಮೂಹ ನಡೆದರೆ ಸುದ್ದಿ ಮಾಧ್ಯಮಗಳ ಮೇಲೆ ಸಕಾರಾತ್ಮಕ ಒತ್ತಡ ಬೀಳುತ್ತದೆ. ಅಂತರಂಗದ ವಿವೇಚನಾತ್ಮಕ ಹೊಂಬಣ್ಣವನ್ನು ಹೆಚ್ಚಿಸಿಕೊಳ್ಳುವ, ಬೌದ್ಧಿಕ ಸದಭಿರುಚಿಯನ್ನು ನೆಲೆಗೊಳಿಸಿಕೊಳ್ಳುವ ಮತ್ತು ಆ ಕಾರಣಕ್ಕಾಗಿಯೇ ನಮ್ಮ ಕಾಲವನ್ನು ಎಲ್ಲ ತಲ್ಲಣಗಳಿಂದ ವಿಮುಕ್ತಗೊಳಿಸುವ ಸ್ವಯಂಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವ ಮನೆಮದ್ದಾಗಿ ಸುದ್ದಿ ರೂಪುಗೊಳ್ಳುತ್ತದೆ ಎಂದು ನಿರೀಕ್ಷಿಸುವ ಆಶಾಭಾವ ಚಿಗುರೊಡೆಯುತ್ತದೆ. ಬಣ್ಣ, ರುಚಿ ಮತ್ತು ಶಕ್ತಿಯ ಅಪವ್ಯಾಖ್ಯಾನ ತಪ್ಪುತ್ತದೆ. ಪ್ರತಿವರ್ಷವೂ ಆಚರಿಸಲ್ಪಡುವ ‘ಪತ್ರಿಕಾ ದಿನಾಚರಣೆ’ಯು ಹಳೆಯದ್ದರ ಆರಾಧನಾ ಮಹೋತ್ಸವವಾಗದೇ ಅರ್ಥಪೂರ್ಣತೆ ದಕ್ಕಿಸಿಕೊಳ್ಳುತ್ತದೆ.
ತಂತ್ರಜ್ಞಾನವೊಂದು ಆವಿಷ್ಕøತವಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರಯೋಗಶೀಲರೊಬ್ಬರು ಹೊಸದೊಂದನ್ನು ಪ್ರತಿಷ್ಠಾಪಿಸುತ್ತಾರೆ. ಆ ಪ್ರತಿಷ್ಠಾಪನೆಯ ಸುಸಂದರ್ಭವನ್ನು ಸ್ಮರಣೀಯವಾಗಿಸಿಕೊಳ್ಳುವ ಮತ್ತು ಆಯಾ ಕಾಲದಲ್ಲಿ ಹೊಸ ಆಯಾಮ ಪಡೆದುಕೊಳ್ಳುವ ಸಾಧ್ಯತೆಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಮುದ್ರಣ ತಂತ್ರಜ್ಞಾನ ಭಾರತಕ್ಕೆ ಕಾಲಿಟ್ಟ ನಂತರ ಕನ್ನಡದ್ದೇ ಆದ ಸುದ್ದಿ ಪರಂಪರೆ ಶುರುವಾದ ಐತಿಹಾಸಿಕತೆಯ ಮೆಲುಕಿನ ಸಂದರ್ಭವಾಗಿ ಮಾತ್ರ ಪತ್ರಿಕಾ ದಿನಾಚರಣೆ ಗ್ರಹಿಸಲ್ಪಡಬಾರದು.
ಬದಲಾಗಿ ಸದ್ಯದ ಬಿಕ್ಕಟ್ಟು, ಭವಿಷ್ಯದ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯವನ್ನು ಕನ್ನಡದ ಸುದ್ದಿ ಮಾಧ್ಯಮಗಳು ರೂಢಿಸಿಕೊಳ್ಳಬಹುದಾದ ಸದಭಿರುಚಿಯ ಸಾಧ್ಯತೆಗಳ ಅನ್ವೇಷಣೆಯೊಂದಿಗೆ ಸ್ವಯಂಮೌಲ್ಯಮಾಪನದ ಮಹತ್ವದ ಅವಕಾಶವಾಗಿ ಪ್ರೇರಣೆಯಾಗಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243