ದಿನದ ಸುದ್ದಿ

ವಿಶ್ವಪ್ರಸಿದ್ಧ ಮೇಲುಕೋಟೆ ‘ವೈರಮುಡಿ ಉತ್ಸವ’ಕ್ಕೆ ಭಾರೀ‌ ಸಿದ್ಧತೆ

Published

on

ಸುದ್ದಿದಿನ, ಮಂಡ್ಯ : ಮಾರ್ಚ್ 17 ರಂದು ನಡೆಯುವ ವಿಶ್ವಪ್ರಸಿದ್ಧ ಶ್ರೀವೈರಮುಡಿ ಕಿರೀಟಧಾರಣ ಮಹೋತ್ಸವವನ್ನು ವ್ಯವಸ್ಥಿತವಾಗಿ ಆಚರಣೆ ಮಾಡಲು ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಶ್ರೀವೈರಮುಡಿ ಕಿರೀಟಧಾರಣ ಮಹೋತ್ಸವದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್ 12 ರಿಂದ 24 ರವರೆಗೆ ನಡೆಯುವ ಶ್ರೀವೈರಮುಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಕುಡಿಯುವ ನೀರು, ಸಾರಿಗೆ ಬಸ್ ಸೌಕರ್ಯ, ವೈದ್ಯ ಸೇವೆ, ಆಂಬುಲೆನ್ಸ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ವೈರಮುಡಿ ಉತ್ಸವ ನಡೆಯುವ ಎಲ್ಲಾ ದಿನಗಳಂದೂ ನಿರಂತರ ವಿದ್ಯುತ್ ನೀಡಲು ಚೆಸ್ಕಾಂ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಹಾಗೂ ದೇವಸ್ಥಾನ ಹಾಗೂ ಕಲ್ಯಾಣಿಗಳ ಸುತ್ತಾ ವಿಶೇಷವಾಗಿ ವಿದ್ಯುತ್ ಅಲಂಕಾರ ಮಾಡಲು ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ವ್ಯವಸ್ಥಿತ ಸಂಚಾರ ಮತ್ತು ವಾಹನ ನಿಲುಗಡೆ ವ್ಯವಸ್ಥೆ, ಮುಖ್ಯ ರಸ್ತೆಗಳ ದುರಸ್ತಿ ಮಾಡಲು ಹಾಗೂ ದೇವಾಲಯದ ಸ್ವಚ್ಛತೆಯ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಎಲ್ಲಾ ರಸ್ತೆ, ಚರಂಡಿ ಶುಚಿಗೊಳಿಸುವುದು, ವಾಹನ ಪಾರ್ಕಿಂಗ್ ಸ್ಥಳದಲ್ಲಿ ಸ್ವಚ್ಚತೆ ಕಾಪಾಡುವುದು, ಕಲ್ಯಾಣಿಗಳು ಹಾಗೂ ರಸ್ತೆಗಳು ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಯ್ದುಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಶ್ರೀವೈರಮುಡಿ ಉತ್ಸವಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿರುವುದರಿಂದ ಭದ್ರತಾ ದೃಷ್ಠಿಯಿಂದ ಅಗತ್ಯವಿರುವ ಕಡೆ ತಾತ್ಕಾಲಿಕ ಸಿಸಿ ಕ್ಯಾಮರಾ ಅಳವಡಿಸಲು ಹಾಗೂ ಶ್ರೀಕ್ಷೇತ್ರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಎಂ.ಜೆ.ರೂಪ, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಲರಾಮೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಡಿ.ಪ್ರಕಾಶ್, ಪಾಂಡವಪುರ ಉಪವಿಭಾಗಧಿಕಾರಿಗಳಾದ ಶೈಲಜಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version