ದಿನದ ಸುದ್ದಿ
ಜನ್ಮದಿನದ ಹೊತ್ತಲಿ ಮಹಾತ್ಮನನ್ನು ನೆನೆಯುತ್ತಾ, ನಮಿಸುತ್ತಾ..!
- ಕವಿರಾಜ್, ಗೀತರಚನೆಕಾರ, ಬೆಂಗಳೂರು
ನಮ್ಮೆಲ್ಲರ ಹಾಗೂ ಇಂದು ಬಲಪಂಥೀಯರೆಂದು ಹೇಳಿಕೊಳ್ಳುವ ಬಹುತೇಕರ ತಾತ ಮುತ್ತಾತಂದಿರು / ಅಜ್ಜ ಅಜ್ಜಿಯಂದಿರು ಗಾಂಧೀಜಿ, ನೆಹರೂ, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬದುಕಿದ್ದವರು. ಎಲ್ಲವನ್ನು ಪ್ರತ್ಯಕ್ಷ ಅನುಭವಿಸಿದ್ದವರು. ಯಾವುದು ಮತ್ತು ಯಾರು ಸರಿ ಯಾವುದು ತಪ್ಪು ಅಂತ ಅವರು ಕಂಡಿದ್ದರು , ಅವರಿಗೆ ಸ್ಪಷ್ಟತೆಯಿತ್ತು .
ಹಾಗಾಗಿ ಅವರೆಲ್ಲಾ ಯಾರ್ಯಾರನ್ನು ಯಾವ್ಯಾವ ಸ್ಥಾನದಲ್ಲಿಡಬೇಕೋ ಅಲ್ಲೇ ಇಟ್ಟಿದ್ದರು.
ಆದರೆ ಕಾಲಕ್ರಮೇಣ ಅವರ ವಿರುದ್ಧ ಸಿದ್ದಾಂತದ ಶಕ್ತಿಗಳು ನಿಧಾನವಾಗಿ ಹೆಡೆಯೆತ್ತಿ ವ್ಯವಸ್ಥಿತ ಅಪಪ್ರಚಾರ ಮಾಡುತ್ತಾ, ಇತಿಹಾಸ ತಿರುಚುತ್ತಾ ಅಂದಿನ ಮಹನೀಯರ ತೇಜೋವಧೆ ಮಾಡುತ್ತಲೇ ಬಂದಿದ್ದಾರೆ. ಸೂಕ್ತ ಅನುಭವ , ಅಧ್ಯಯನ ಎರಡೂ ಇಲ್ಲದ ಇಂದಿನ ಯುವ ಪೀಳಿಗೆ ಆ ಪುಂಖಾನುಪುಂಖ ಸುಳ್ಳುಗಳನ್ನೇ ನಂಬಿ ಉಘೇ ಉಘೇ ಎಂದು ತಮ್ಮ ಗುಂಡಿ ತಾವೇ ತೋಡಿಕೊಳ್ಳುತ್ತಾ ದೇಶವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ.
ಗಾಂಧೀಜಿ ಅವರ ಜನ್ಮದಿನವಾದ ಇಂದು ನನಗೆ ವಿಶ್ವದ ಅತೀ ಬುದ್ದಿವಂತ ಮೆದುಳು ಎಂದು ಪರಿಗಣಿಸಲಾಗಿರುವ ‘ಆಲ್ಬರ್ಟ್ ಐನ್ ಸ್ಟೈನ್ ‘ ಅವರ ಅಂದಿನ ನಿಖರ ಪ್ರೆಡಿಕ್ಷನ್ ಪದೇ ಪದೇ ಕಾಡುತ್ತಿದೆ. ” ರಕ್ತ ಮಾಂಸಗಳಿಂದ ತುಂಬಿದ್ದ ಇಂತಹ ಉದಾತ್ತ ವ್ಯಕ್ತಿತ್ವವೊಂದು ಈ ಭೂಮಿಯ ಮೇಲೆ ನಡೆದಾಡಿತ್ತು ಎಂದರೆ ಮುಂದಿನ ಪೀಳಿಗೆಗೆ ನಂಬುವುದು ಕಷ್ಟವಾಗಬಹುದು” ಎಂದು ಗಾಂಧೀಜಿ ಅವರ ಕುರಿತಾಗಿ ಅಂದು ಐನ್ ಸ್ಟೈನ್ ಹೇಳಿದ ಮಾತು ಇಂದು ಅಕ್ಷರಶಃ ನಿಜವಾಗಿದೆ.
ಗಾಂಧೀಜಿ ಅವರ ಮಹೋನ್ನತ ಧ್ಯೇಯಗಳು ಇಂದಿನ ಯುವ ಜನಾಂಗಕ್ಕೆ ನಂಬಲು ಆಗದಷ್ಟು ಉನ್ನತವಾಗಿವೆ.
ಎಲ್ಲಾ ಇದ್ದು ತುಂಡು ಬಟ್ಟೆಯುಟ್ಟು ಬದುಕಿದ ಪಕೀರ, ತನ್ನ ನೇತೃತ್ವದಲ್ಲೇ ಸ್ವಾತಂತ್ರ್ಯ ಬಂದರು ಅಧಿಕಾರ ಬಯಸದೇ ಅದೇ ದಿನ ದೂರದ ಊರಲ್ಲಿ ದೀನರ ಸೇವೆಯಲ್ಲಿ ನಿರತರಾದ ನಿಸ್ವಾರ್ಥಿ.
ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಮಣಿಸಿದ ಕೃಶಕಾಯದ ಸಂತ, ಉಪವಾಸ, ಸತ್ಯಾಗ್ರಹ ,ಅಹಿಂಸೆಗಳು ಹೋರಾಟದ ಆಯುಧಗಳಾಗಬಹುದು ಎಂದು ಜಗತ್ತಿಗೆ ಸಾರಿದ ಮಾನವತಾವಾದಿ ಗಾಂಧೀಜಿ . ಇವೆಲ್ಲವೂ ಅಪ್ಪಟ ಸತ್ಯವಾದರೂ, ಕಳ್ಳರಿಗೆ ,ಸುಳ್ಳರಿಗೆ , ಭ್ರಷ್ಟರಿಗೆ , ಮೂಢರಿಗೆ ಜೈಕಾರ ಹಾಕುತ್ತ ಅವರನ್ನೇ ಆದರ್ಶವಾಗಿ ಇಟ್ಟುಕೊಂಡಿರುವವರಿಗೆ ಐನ್ ಸ್ಟೈನ್ ಅವರು ಹೇಳಿದಂತೆ ಇಂತಹ ಅದ್ಬುತ ವ್ಯಕ್ತಿತ್ವವೊಂದು ಇತ್ತೆಂದು ಜೀರ್ಣಿಸಿಕೊಳ್ಳಲಾಗದೆ ಸುಳ್ಳು ಅನಿಸುವುದು ಸಹಜವೇ ಆಗಿದೆ.
ಇನ್ನೊಬ್ಸ ಮಹಾನ್ ಮಾನವತಾವಾದಿ ಅಂಬೇಡ್ಕರ್ ಮತ್ತು ಗಾಂಧೀಜಿ ಅವರಿಗೂ ಕೆಲವು ವಿಷಯಗಳಲ್ಲಿ ಭಿನ್ನ ನಿಲುವು ಇದ್ದಿದ್ದು ನಿಜ. ಆದರೆ ಅದು ಎರಡು ಸಮಕಾಲೀನ ಪ್ರಖರ ಚಿಂತಕರ ನಡುವೆ ಸಹಜವಾಗಿಯೇ ಹುಟ್ಟಿಕೊಳ್ಳುವ ಭಿನ್ನಾಭಿಪ್ರಾಯಗಳು.
ಮುಖ್ಯವಾಗಿ ಅಂಬೇಡ್ಕರ್ ಅವರಿಗೆ 1935ರಲ್ಲೇ ಮುಸ್ಲಿಂ ಮತ್ತು ಸಿಖ್ ಸಮುದಾಯಕ್ಕೆ ಇದ್ದಂತೆ ಪ್ರತ್ಯೇಕ ಎಲೆಕ್ಟೋರೇಟ್ ಗಳನ್ನು ಪರಿಶಿಷ್ಟರಿಗೂ ಒದಗಿಸಬೇಕೆಂಬ ಆಗ್ರಹವಿತ್ತು . ಆದರೆ ಗಾಂಧೀಜಿಯವರಿಗೆ ಹೀಗೆ ಮಾಡುವುದರಿಂದ ಅವರು ಹಿಂದೂ ಧರ್ಮದಿಂದ ಹೊರಗೆ ಗುರುತಿಸಿಕೊಳ್ಳುತ್ತಾರೆ , ಹಿಂದೂ ಧರ್ಮ ಒಡೆದು ಹೋಗುತ್ತದೆ ಎಂಬ ಆತಂಕವಿತ್ತು.
ಅದರ ಬದಲಾಗಿ ಪರಿಶಿಷ್ಟರು ಮಾತ್ರ ಸ್ಪರ್ಧಿಸಿ ಎಲ್ಲರೂ ಮತದಾನ ಮಾಡುವ ಮೀಸಲು ಕ್ಷೇತ್ರಗಳನ್ನು ನೀಡಬಹುದು ಎಂದು ಗಾಂಧೀಜಿಯವರ ನಿಲುವಾಗಿತ್ತು.
ಈ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರು ಪ್ರತ್ಯೇಕ ಎಲೆಕ್ಟೋರೇಟ್ ಅಲ್ಲಿ ಆಗ್ರಹಿಸಿದಕ್ಕಿಂತ ಮೂರು ಪಟ್ಟು ಹೆಚ್ಚು ಸ್ಥಾನಗಳನ್ನು ನೀಡಲು ಗಾಂಧೀಜಿ ಪ್ರಸ್ತಾಪವಿತ್ತರು.
ಇದಕ್ಕಾಗಿ ಅಂಬೇಡ್ಕರ್ ಅವರ ಮೇಲೆ ಒತ್ತಡ ಹೇರಲು ಗಾಂಧೀಜಿ ಅವರು ಯರವಾಡ ಜೈಲಿನಲ್ಲೇ ಉಪವಾಸ ಕುಳಿತರು. ಅದು ಗಾಂಧೀಜಿ ಅವರ ಆಶಯದಂತೆ ಅಸ್ಪ್ರಶ್ಯತಾ ನಿವಾರಣ ಚಳುವಳಿ ಇಡೀ ದೇಶದಲ್ಲಿ ಹಬ್ಬಲು ನಾಂದಿಯಾಯಿತು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಅಂಬೇಡ್ಕರ್ ಗಾಂಧೀಜಿಯವರ ಪ್ರಸ್ತಾಪ ಒಪ್ಪಿಕೊಳ್ಳಬೇಕಾಯಿತು.
ಒಟ್ಟಾರೆ ಅಸ್ಪ್ರಶ್ಯತೆ ನಿವಾರಣೆ ಆಗಬೇಕೆಂಬುದು ಇಬ್ಬರು ಮಹನೀಯರ ಧ್ಯೇಯವಾಗಿತ್ತು. ವಿಪರ್ಯಾಸವೆಂದರೆ ಅಂದು ಯಾವ ಹಿಂದೂ ಧರ್ಮದ ಏಕತೆಗಾಗಿ ಗಾಂಧೀಜಿ ಅಂಬೇಡ್ಕರ್ ಅವರ ಪ್ರಸ್ತಾಪವನ್ನು ವಿರೋಧಿಸಿದರೋ ಇಂದು ಅದೇ ಹಿಂದೂ ಧರ್ಮದ ಕಟ್ಟಾ ಪ್ರತಿಪಾದಕರು ಅಂಬೇಡ್ಕರ್ ಅನುಯಾಯಿಗಳನ್ನು ಗಾಂಧೀಜಿ ಅವರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.
ಅಂಬೇಡ್ಕರ್ ಅವರ ಮೇಲೆ ಗಾಂಧೀಜಿ ಅವರಿಗೆ ವ್ಯಕ್ತಿಗತ ವಿರೋಧವಿದ್ದರೆ ದೇಶದ ಸಂವಿಧಾನ ರಚನೆಯಂತ ಮಹೋನ್ನತ ಜವಾಬ್ದಾರಿ ಅಂಬೇಡ್ಕರ್ ಅವರ ಹೆಗಲಿಗೇರಲು , ಅಂಬೇಡ್ಕರ್ ಅವರು ದೇಶದ ಮೊದಲ ಕಾನೂನು ಮಂತ್ರಿಯಾಗಲು ವಿರೋಧಿಸಬೇಕಿತ್ತಲ್ಲವೇ ???
ಸುದ್ದಿದಿನ.ಕಾಂ|ವಾಟ್ಸಾಪ್|9980346243