ಬಹಿರಂಗ

ಮೀಸಲಾತಿ ವಿರೋಧಿಗಳಿಗೊಂದು ಸಂದೇಶ..!

Published

on

ಇಂದು ಬಹುಧೀರ್ಘವಾಗಿ ಚರ್ಛೆಯಾಗುತ್ತಿರುವ ವಿಷಯಗಳಲ್ಲಿ ಮೀಸಲಾತಿ ವಿಷಯ ಬಹಳ ಪ್ರಮುಖವಾಗಿದೆ. ಮೀಸಲಾತಿ ಎಂದ ತಕ್ಷಣ ಕೇವಲ sc/st ಗಳ ಮೇಲೆ ಕಂಗೆಣ್ಣು ಕಾರುವ ಮೂರ್ಖರು ನಮ್ಮ ದೇಶದಲ್ಲಿದ್ದಾರೆ. ಭಾರತ ಸಂವಿಧಾನವು ಜಾರಿಯಾದ ದಿನದಂದು sc/st ಹಾಗೂ OBC ಗಳಿಗೆ ಸೇರಿ 50% ಮೀಸಲಾತಿಯನ್ನು ನೀಡಿತ್ತು. ಆದರೆ ದುರಂತವೆಂದರೆ, ಮೀಸಲಾತಿ ವಿಚಾರದಲ್ಲಿ ಕೇವಲ sc/st ಗಳ ಮೀಸಲಾತಿಯ ಬಗ್ಗೆ ಮಾತನಾಡುವವರು OBC ಗಳ ಮೀಸಲಾತಿಯ ಬಗ್ಗೆ ಒಬ್ಬನೂ ಚಕಾರೆತ್ತುವುದಿಲ್ಲ. ಅದೇನೇಯಿರಲಿ, ಭಾರತದಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೀಸಲಾತಿ ಬೇಕೆ ಅಥವಾ ಬೇಡವೇ ? ಎಂಬುದನ್ನು ನಿರ್ಧರಿಸಲು ನನಗೊಂದು ಘಟನೆ ನೆನಪಿಗೆ ಬರುತ್ತಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಪ್ರಾಂತ್ಯದ ರಾಜರಾಗಿದ್ದ ಛತ್ರಪತಿ ಶಾಹುಮಹಾರಾಜರು ತಮ್ಮ ಆಸ್ಥಾನದಲ್ಲಿ ಬ್ರಾಹ್ಮಣೇತರರಿಗೆ 50% ಮೀಸಲಾತಿಯನ್ನು ಜಾರಿಗೊಳಿಸುತ್ತಾರೆ. ಇದಕ್ಕೆ ಸಾಮಾನ್ಯವಾಗಿಯೇ ಬ್ರಾಹ್ಮಣರ ವಿರೋಧ ವ್ಯಕ್ತವಾಯಿತು. ವಕೀಲನೊಬ್ಬ ರಾಜರನ್ನು ಮೀಸಲಾತಿಯನ್ನು ಕೊಡುವುದರಿಂದ ಪ್ರತಿಭೆಗೆ ದಕ್ಕೆ ಉಂಟಾಗುತ್ತದೆ ಎಂದು ಟೀಕಿಸುತ್ತಾನೆ. ಇದರಿಂದ ಸಮಾಧಾನವಾಗಿಯೇ ರಾಜರು ಆ ವಕೀಲನನ್ನು ತಮ್ಮ ಕುದುರೆಯ ಲಾಳಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿದ್ದ ಕುದುರೆಗಳನ್ನು ನೋಡಿಕೊಳ್ಳುವವನಿಗೆ ಕುದುರೆಗೆ ಹಾಕುವ ಆಹಾರವನ್ನು ಒಂದೇ ಕಡೆ ಸುರಿಯಲು ಹೇಳಿ , ಕುದುರೆಗಳೆಲ್ಲವನ್ನೂ ಆಹಾರ ತಿನ್ನಲು ಬಿಡಲು ಆಜ್ಞಾಪಿಸುತ್ತಾರೆ. ಆ ಕೆಲಸಗಾರನು ಹಾಗೇಯೇ ಮಾಡುತ್ತಾನೆ. ಒಟ್ಟಿಗೇ ಬಂದ ಕುದುರೆಗಳು ಒಂದೆಡೆ ಹಾಕಿದ್ದ ಆಹಾರವನ್ನು ತಿನ್ನಲು ಶುರು ಮಾಡುತ್ತವೆ. ರಾಜರು ವಕೀಲರಿಗೆ ಪ್ರಶ್ನಿಸುತ್ತಾರೆ.

ಶಾಹು : ವಕೀಲರೇ, ಎಲ್ಲಾ ಕುದುರೆಗಳು ಆಹಾರವನ್ನು ತಿನ್ನುತ್ತಿವೆಯೇ ?

ವಕೀಲ :(ಸೂಕ್ಷ್ಮವಾಗಿ ಗಮನಿಸಿ) ಇಲ್ಲ ಸ್ವಾಮಿ !

ಶಾಹು : ಏಕೆ ಹೀಗೆ ಆಗುತ್ತಿದೆ ?

ವಕೀಲ : ಆಹಾರವನ್ನು ಒಂದೇ ಕಡೆ ಹಾಕಿದೆ, ಬಲಿಷ್ಠ ಕುದುರೆಗಳು ಬಡಕಲು ಕುದುರೆಗಳನ್ನು ಹಿಂದೆ ತಳ್ಳಿ ತಿನ್ನುತ್ತಿವೆ. ಆಹಾರವು ಒಂದೇ ಕಡೆ ಇರುವುದರಿಂದ ಸಣ್ಣ ಸಣ್ಣ ಕುದುರೆಗಳು, ಬಡಕಲು ಕುದುರೆಗಳಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ.!

ಈಗ ರಾಜರು ಎಲ್ಲಾ ಕುದುರೆಗಳನ್ನು ತಮ್ಮ ತಮ್ಮ ಜಾಗದಲ್ಲಿ ಕಟ್ಟಿಹಾಕಿ, ಅವಕ್ಕೆ ಬೇಕಾದಷ್ಟು ಆಹಾರವನ್ನು ಹಾಕಲು ಆಜ್ಞಾಪಿಸುತ್ತಾರೆ. ಕೆಲಸಗಾರ ಹಾಗೆಯೇ ಮಾಡುತ್ತಾನೆ.

ಶಾಹು : ಈಗ ಸರಿಯಾಗಿದೆಯೇ ?

ವಕೀಲ : ಹೌದು ಸ್ವಾಮಿ, ಈಗ ಎಲ್ಲಾ ಕುದುರೆಗಳಿಗೂ ಆಹಾರ ಸಿಗುತ್ತಿದೆ.

ಶಾಹು : (ನಗುತ್ತಾ) ವಕೀಲರೇ, ನಾನು ಮೀಸಲಾತಿಯನ್ನು ಏಕೆ ಜಾರಿಗೊಳಿಸಿದೆ ಎಂಬುದು ಈಗ ಅರ್ಥವಾಯಿತೇ !? ರಾಜನಾಗಿರುವ ನನಗೇ ಇಷ್ಟು ಶೋಷಣೆ, ಇನ್ನು ಜನಸಾಮಾನ್ಯರ ಪಾಡೇನು ? ಅದಕ್ಕೇ ಮೀಸಲಾತಿ ತಂದದ್ದು, ಎಂದು ಉತ್ತರಿಸಿದರು.

ಈ ಘಟನೆ ನಿಜಕ್ಕೂ ಗಣನೀಯವಾದದ್ದು. ಮೀಸಲಾತಿ ವಿರೋಧಿಸುವ ಎಲ್ಲಾ ವ್ಯಕ್ತಿಗಳಿಗೂ ಇದನ್ನು ಉತ್ತಮ ಉದಾಹರಣೆಯನ್ನಾಗಿ ಕೊಡಬಹುದು. ಮೀಸಲಾತಿಯಿಂದ ಪ್ರತಿಭೆಗೆ ದಕ್ಕೆಯಾಗುತ್ತದೆ ಎನ್ನುವ ಈ ಸಮಾಜ, ಕೆಳಸ್ತರದಲ್ಲಿರುವ ವ್ಯಕ್ತಿಗಳಿಗೆ ಪ್ರತಿಭೆ ತೋರುವ ಅವಕಾಶವನ್ನೇ ಕೊಡುವುದಿಲ್ಲ. ಪ್ರತಿಭೆ ತೋರಿದ ಏಕಲವ್ಯನನ್ನು ಹೆಬ್ಬೆರಳು ಕತ್ತರಿಸುವುದರ ಮೂಲಕ ಆತನ ಬಿಲ್ವಿದ್ಯ ಶಕ್ತಿಯನ್ನು ಕುಂದಿಸಲಾಯಿತು. ಇಲ್ಲಿ ಬಲಿಷ್ಠರು ಬಡವರನ್ನು ತುಳಿದು ಬದುಕಲು ಇಚ್ಛಿಸುತ್ತಾರೆಯೇ ಹೊರತು , ಮೇಲೆತ್ತುವ ಮನಸ್ಸು ಮಾಡುವುದಿಲ್ಲ.

ಈ ದೇಶದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಮೀಸಲಾತಿಯನ್ನು ಅನುಭವಿಸಿದ ವರ್ಗವೆಂದರೆ ಅದು ಬ್ರಾಹ್ಮಣ ವರ್ಗ ಎಂಬುದು ವಾಸ್ತವಿಕ ವಿಚಾರ. ಬ್ರಾಹ್ಮಣರಿಗೆ ಮನುಸ್ಮೃತಿಯು ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳನ್ನು ಹಾಗೂ ಆರ್ಥಿಕಾಭಿವೃದ್ಧಿ ಮಾರ್ಗವನ್ನು ಕೊಟ್ಟಿತ್ತು. ಇದು ಹಳೆಯ ಪುರಾಣ, ಮನುಸ್ಮೃತಿ ಈಗ ಚಾಲ್ತಿಯಲ್ಲಿ ಇಲ್ಲ ಎಂದು ವಾದಿಸುವವರೂ ಉಂಟು. ಹಾಗಾದರೆ ದೇವಾಲಯಗಳಲ್ಲಿ ಅರ್ಚಕನಾಗಿ ಬ್ರಾಹ್ಮಣರೇ ಏಕೆ ಬೇಕು ? ಕಕ್ಕಸು ಗುಂಡಿ ಸ್ವಚ್ಛ ಮಾಡುವ ಕೆಲಸದಲ್ಲಿ ದಲಿತರೇ ಏಕೆ ಬೇಕು ? ಡಾಂಬರು ಹಾಕುವ ಕೆಲಸಕ್ಕೆ ದಲಿತರೇ ಏಕೆ ಬೇಕು ? ಇಂತಹ ಕೆಲಸಗಳಲ್ಲಿಯೂ ಬದಲಾವಣೆ ಬಯಸಬೇಕಲ್ಲವೇ ? ಅರ್ಚಕನ ಸ್ಥಾನದಲ್ಲಿ ದಲಿತನನ್ನು , ಕಕ್ಕಸು ಗುಂಡಿ ಸ್ವಚ್ಛ ಮಾಡುವ ಕೆಲಸದಲ್ಲಿ ಬ್ರಾಹ್ಮಣನನ್ನು ನೋಡಲು ಈ ಸಮಾಜ ಒಪ್ಪುವುದೇ ? ಖಂಡಿತ ಇಲ್ಲ.

ಬಹಳ ಪ್ರಮುಖವಾಗಿ ನನಗೆ ತಿಳಿದ ವಿಚಾರವೇನೆಂದರೆ, ಮೀಸಲಾತಿಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ವ್ಯಕ್ತಿಗಳು ಇಂದು 10% ಮೀಸಲಾತಿ ದೊರೆತಾಗ ಅದನ್ನು ವಿರೋಧಿಸಲೇ ಇಲ್ಲ !! ಅವರಿಗೆ ಮೀಸಲಾತಿ ಕೊಟ್ಟಿದ್ದರಲ್ಲಿ ತಪ್ಪಿಲ್ಲ, ಆದರೆ ಇಲ್ಲಿ ಅವರು ಬಯಸಿದ್ದಾದರೂ ಏನು ಎನ್ನುವುದು ಪ್ರಶ್ನೆ. ಅವರು ವಿರೋಧಿಸಿದ್ದು ಮೀಸಲಾತಿಯನ್ನಲ್ಲ, ಈ ದೇಶದ ಬಡ ಜನರು ತಮ್ಮ ಮಟ್ಟಕ್ಕೆ ಆರ್ಥಿಕವಾಗಿ ಸಬಲರಾಗುವುದನ್ನು !!

ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ, ಸಾಮಾಜಿಕ ಸ್ಥಿತಿ-ಗತಿಗಳಿಂದ ಬಹು ದೂರವೇ ಬದುಕಿದ ಜನರಿಗೆ, ಮೀಸಲಾತಿ ಎಂಬ ಅಸ್ತ್ರದ ಮೂಲಕ ಅಭಿವೃದ್ಧಿಯಾಗುವುದನ್ನು ಯಾರಾದರೂ ಸಹಿಸುತ್ತಾರೆಯೇ ? ಹಾಗಾಗಿಯೇ ಅವರು ಮೀಸಲಾತಿಯನ್ನು ಇಷ್ಟು ದಿವಸ ವಿರೋಧಿಸಿದ್ದು. ಮೀಸಲಾತಿ ಎಂಬುದು ಭಿಕ್ಷೆಯೂ ಅಲ್ಲ, ಅದು ದೇಶದ ನ್ಯೂನ್ಯತೆಯೂ ಅಲ್ಲ, ಅದೊಂದು ಸಮಾನತೆಯ ಸಾಧನ ಅಷ್ಟೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಮೀಸಲಾತಿ ಎಂಬ ಅಂಶವಿಲ್ಲ, ಏಕೆಂದರೆ ಬೇರೆ ದೇಶಗಳಲ್ಲಿ ನಮ್ಮಂತೆ ಸಾವಿರಾರು ಜಾತಿಗಳಿಲ್ಲ.! ಭಾರತದಂತಹ ಜಾತಿ ಪೀಡನೆಯ ವ್ಯವಸ್ಥೆಯಲ್ಲಿ ಖಂಡಿತವಾಗಿಯೂ ಮೀಸಲಾತಿಯ ಅವಶ್ಯಕತೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version