ಲೋಕಾರೂಢಿ

ನಂಗೂ ಹಿಂಗೆ ಆಗಿತ್ತು..! ಗೌಡ್ರು ಮತ್ತು ಈಶನ ಮೀ ಟೂ ವೃತ್ತಾಂತ

Published

on

ಹೊಟ್ಟೆ ಬಹಳ ಹಸಿದಿತ್ತು. ಅದೇ ಸಂದರ್ಭ ನಮ್ಮ ಗೌಡ್ರು, ಹೇ ಬಾರೋ ಈಶ ಊಟ ಮಾಡೋ ಅಂತಾ ಕರೆದ್ರು.
ಹೊಟ್ಟೆ ಹಸಿದಿದ್ದರಿಂದ ತಡ ಮಾಡದೇ ಸೌಕಾರ್ ಮನೆ ಅಂಗಳದ ಅಂಚಿಗೆ ಬಡ ಬಡಾನೆ ಹೋಗಿ ಕುಳಿತೆ. ಗೌಡ್ರು ತನ್ನ ಹೆಂಡತಿಗೆ ಕೂಗಿ, ಹೇ ಈಶ ಬಂದವ್ನೆ ಕಣೇ ಏನಾದ್ರೂ ಊಟ ಉಳಿದಿದ್ರೆ ಕೊಡು ಅಂತಾ. ಅತ್ತ ಕಡೆಯಿಂದ ಸ್ವಲ್ಪ ತಡೀರಿ ಕೊಡ್ತೀನಿ ಅಂತಾ ಧ್ವನಿ ಕೇಳಿಬಂತು.
ಏ ಈಶ… ಊಟ ಕೊಡುವರೆಗೂ ಏನ್ ಮಾಡ್ತೀ, ಮನೆ ಸುತ್ತಮುತ್ತ ಸ್ವಲ್ಪ ಕಸ ಹೆಚ್ಚಾಗೈತೆ ಸ್ವಚ್ಛಗೊಳಿಸು, ಸ್ವಲ್ಪ ಕಟ್ಟಿಗೆ ಕಡಿ… ಅಷ್ಟರಲ್ಲಿ ಊಟ ಬರುತ್ತೆ ಅಂದ್ರು ನಮ್ಮ ಗೊಂಚಗಾರ್ರ‌್‌. ಇದು ನಮ್ ಹಳ್ಳೀಲಿ ಸರ್ವೇ ಸಾಮಾನ್ಯ. ಕೆಲಸ ಮಾಡಲ್ಲ ಅಂತ ಹೇಳಿದ್ರೆ ಹೊಟ್ಟೆಗೆ ಹಿಟ್ಟು ಸಿಗಕ್ಕಿಲ್ಲ. ಬಿಸಿಲ ಝಳ ಲೆಕ್ಕಿಸದೇ ತಕ್ಷಣ ಮನೆ ಸುತ್ತಮುತ್ತ ಸೌಕಾರ್ ಮೆಚ್ಚೋ ರೀತಿ ಸ್ವಚ್ಛಗೊಳಿಸಿದೆ. ಅಷ್ಟರಲ್ಲಿ ಮನೆಯೊಡತಿ ಏನ್ರಿ ಈಶನಿಗೆ ಕರೀರ‌್ರಿ ಊಟ ಕೊಡ್ತೀನಿ ಅಂತಾ ಕೂಗಿ ಹೇಳಿದ ಧ್ವನಿ ನನ್ ಕಿವಿಗೆ ಬಿತ್ತು.
ಅಷ್ಟ್ರಲ್ಲಿ ಎಲ್ಲ ಕೆಲಸ ಮುಗಿಸಿದ್ದೇ. ಕೈ ಕಾಲನ್ನು ಅರೆಬರೆ ತೊಳ್ಕೊಂಡು ತಡಕೆಗೆ ಸಿಗಿಸಿದ್ದ ತಟ್ಟೆ ತಗೊಂಡು ತಂಗಳು ಮುದ್ದೆಗೆ ಕೈವೊಡ್ಡಿದೆ. ಆ ಮಹಾತಾಯಿ ಕೊಟ್ಟ ಊಟವನ್ನ ಬಗಾಬಗನೇ ತಿಂದು ಕೈಮುಗಿದು ಮನೆಯತ್ತ ಹೆಜ್ಜೆ ಹಾಕಿದೆ. ಈ ರೀತಿ ಬಹಳಷ್ಟು ಬಾರಿ ನನ್ನ ಹಸಿದ ಹೊಟ್ಟೆಗೆ ನನ್ ಗೌಡ್ರು ಅನ್ನ ಹಾಕಿದ್ದಾರೆ. ಜತೆಗೆ ದೇಹ ದಂಡಿಸೋಕೆ ಕೆಲಸ ಕೊಟ್ಟೋರೆ.
ನನ್ನ ಹೈಕ್ಳು, ನನ್ನ ಸುತ್ತಲಿನ ಹುಡುಗರ ಮುಂದೆ ಗೌಡ್ರು ಮುದ್ದೆ ಕೊಡ್ತಾ ಇದ್ದ ವಿಷಯ ಎಷ್ಟೋ ವರ್ಷದ ನಂತರವೂ ಪದೇ ಪದೆ ಸ್ಮರಿಸುತ್ತಲೇ ಇದ್ದೆ… ಅವರು ದೊಡ್ಡವಾರದಾಗ್ಲೂ ಹೇಳ್ತಾ ಇದ್ದೆ… ಒಂದ್ ಸಾರಿ ಆ ಹುಡುಗ್ರು ಏ ನಿನಗೆ ಮೆದುಳು ಇರಕ್ಕಿಲ್ಲ. ನೀನು ಅವರ ಮನೆಯಲ್ಲಿ ನಿನಗೆ ಗೊತ್ತಿಲ್ದೆ ಮೈಮುರಿದು ಕೆಲಸ ಮಾಡಿದ್ದೀಯಾ, ಆಗ ಹಸಿವಿನಲ್ಲಿ ನಿನಗೆ ಕಂಡಿರಕ್ಕಿಲ್ಲ. ಕಂಡಿದ್ರೂ ಊಟ ಸಿಗಕ್ಕಿಲ್ಲ ಅಂತಾ ಭಯದಲ್ಲಿ ಮಾಡಿದ್ದೀಯಾ. ಅದನ್ನು ಆ ಗೌಡ ಬಳಸಿಕೊಂಡಿದ್ದಾನೆ. ಅದು ಒಂದು ರೀತಿ ಶೋಷಣೆ ಅಂದ್ರು, ನನ್ನ ಪಕ್ಕ ಇದ್ದ ನನ್ನ ವಾರಿಗೆಯವ ರಂಗ ಕೂಡ ಬೀಡಿ ಸೇತ್ತಾ ಅಯ್ಯೋ ನಮ್ಮ ಗೌಡ್ರು ಮನೆಯಲ್ಲಿ ‘‘ನಂಗೂ ಹಿಂಗೆ ಆಗಿತ್ತು’’ ಅಂತಾ ಹೇಳ್ದಾ.
ಈ ಸುದ್ದಿ ಊರೆಲ್ಲ ಹಬ್ಬಿ ಬಿಡ್ತು. ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲೂ ಕೆಲ ಮಂದಿ ಹೌದು ‘‘ನಂಗೂ ಆಗಿತ್ತು’’ ಅಂತಾ ಜಗಳಿಕಟ್ಟೆ ಮೇಲೆ ಚೌಕಾಬಾರ ಆಡ್ತಾ ಹೇಳಿಕೊಂಡ್ರು. ಒಂದಿಷ್ಟು ಜನ ನಾವು ಹೇಳಿದ್ದು ಸರಿ ಐತೆ, ಇನ್ಮುಂದೆ ಯಾರಿಗೂ ಹಿಂಗಾಗ್ಬಾರ‌್ದು ಅಂದ್ರು. ಬಹಳಷ್ಟು ಜನ ಇಷ್ಟು ವರ್ಷ ಆದ್ಮೇಲೆ ಇದನ್ಯಾಕೆ ಹೇಳ್ತಾವ್ನೇ, ಅವಾಗ ಬಾಯಿಗೆ ಏನ್ ಬಟ್ಟೆ ತುರ‌್ಕೊಂಡಿದ್ನಾ ಅಂತಾ ಧಮ್ಕಿ ಹಾಕಿದ್ರು. ಅವರಿಗೇನು ಗೊತ್ತು ಅಂದಿನ ನಮ್ಮ ಹಸಿವು, ಭಯದ ಪರಿಸ್ಥಿತಿ.
ನಾನೇನೂ ಉದ್ದೇಶಪೂರ್ವಕವಾಗಿ ಹೇಳಿಲ್ಲ. ಮುಂದೆ ಈ ರೀತಿ ಯಾರಿಗೂ ಆಗ್ದೀರಲಿ ಅಂತಾ ಹೇಳಿದ್ದೀನಿ ಅಂತಾ ನಾನು ಬಾಯಿ ಬಡಕೊಂಡ್ರೂ… ಗೌಡ್ರು ಪರ ಗುಂಪು ನನ್ನ ವಿರುದ್ಧ ಮಚ್ ಮಸಿತಲೇ ಇತ್ತು. ಜತೆಗೆ ‘‘ನನಗೂ ಹಿಂಗೆ ಆಗಿತ್ತು’’ ಅಂತ ಹೇಳಿದ ರಂಗನಂತ ಅನೇಕರ ವಿರುದ್ಧ ಜನ ಸಿಟ್ಟಿಗೆದ್ದಿದ್ದರು.
ಇದರಿಂದ ನನ್ನಂತೆ ಗೊತ್ತಿಲ್ಲದೆ ತಂಗಳು ಮುದ್ದೆಗೆ ಮೈಮುರಿದು ಅವರವರ ಗೊಂಚಗಾರ್ ಮನೆಯಲ್ಲಿ ಕೆಲಸ ಮಾಡಿ ಶೋಷಣೆಗೆ ಒಳಗಾಗಿದ್ದ ಜನ ‘‘ನಂಗೂ ಆಗಿತ್ತು’’ ಅಂತಾ ಹೇಳುವ ಧೈರ್ಯವನ್ನೇ ಮಾಡ್ಲಿಲ್ಲ. ಜತೆಗೆ ಇವರು ಕೂಡ ನನ್ಗೇನೆ ಬೈಯೋಕೆ ನಿಂತ್ರು.
ದೇವರಂತ ಗೌಡ್ರು ವಿರುದ್ಧ ಶೋಷಣೆ ಆರೋಪ ಹೊರಿಸ್ತಾನಲ್ಲ ಅಂತಾ ಎಲ್ರೂ ಸೇರಿ ಧಬಾಯಿಸಿದ್ರು.
ಇದನ್ನೆಲ್ಲ ಕಂಡು ಇಪ್ಪತ್ತೈದು ವರ್ಷದ ಹಿಂದೆ ಆಗಿದ್ದ ‘‘ಪರೋಕ್ಷ ಶೋಷಣೆ’’ ಬಗ್ಗೆ ಈಗ ಯಾಕಾದ್ರೂ ಹೇಳಿದ್ನಾ ಅಪ್ಪಾ ಅಂತಾ ನೊಂದುಕೊಂಡೇ. ನಮ್ ಜನಕ್ಕೆ ಸತ್ಯ ಹೇಳಿದ್ರೆ ಸಹಿಸಿಕೊಳ್ಳಕ್ಕೆ ಯಾಕ್ ಆಗಕ್ಕಿಲ್ಲ. ನಮ್ಮನ್ನೇ ಕಳ್ಳನ ರೀತಿ ನೋಡ್ತಾರಲ್ಲ. ಸದ್ಯ ನನ್ನ ಹೈಕ್ಳ ಮಾತು ಕೇಳಿ ಈಗ ಹೇಳಿದ್ದೇನೆ. ಗೌಡ್ರು ಮನೆಯಂಗಳದಲ್ಲಿ ತಂಗಳು ಮುದ್ದೆ ತಿಂದ ಸಂದರ್ಭ ಹೇಳಿದ್ರೆ… ಅಬ್ಬಾ ನೆನಸ್ಕೊಂಡ್ರೆ ಭಯನೇ ಆಗ್ತಾತೆ. ಆಗ ಹೇಳಿದ್ರೆ ಇಷ್ಟೋತ್ತಿಗೆ ನಾನು ಸತ್ ಇಪ್ಪತ್ತೈದು ವರ್ಷ ಆಗ್ತಾ ಇತ್ತೇನಪ್ಪಾ.
ಈ.ಮಹೇಶ್‌ಬಾಬು, ಜಿಲ್ಲಾಧ್ಯಕ್ಷರು, ಪತ್ರಕರ್ತರ ಸಂಘ, ಚಿತ್ರದುರ್ಗ
(ಮೊ.ನಂ: 9900882955)
ಕೃಪೆ : whatsapp

Trending

Exit mobile version