ರಾಜಕೀಯ
ಚುನಾವಣಾ ಪ್ರಚಾರಕ್ಕೆ ಸೇನಾ ಫೋಟೋ ಬಳಸುವಂತಿಲ್ಲ : ಚುನಾವಣಾ ಆಯೋಗ ಖಡಕ್ ವಾರ್ನಿಂಗ್
ಸುದ್ದಿದಿನ,ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಲೋಕ ಸಮರಕ್ಕೆ ದಿನ ನಿಗದಿ ಮಾಡುವ ತಯಾರಿಯಲ್ಲಿದೆ. ಆದ್ರೆ, ಇತ್ತ ರಾಜಕೀಯ ಪಕ್ಷಗಳು ಯೋಧರ ಫೋಟೋ ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿವೆ. ಇದಕ್ಕೆ ಬ್ರೇಕ್ ಹಾಕಲೆಂದೇ ಆಯೋಗ ರಾಜಕೀಯ ಪಕ್ಷಗಳಿಗೆ ಖಡಕ್ ಆಗಿ ವಾರ್ನ್ ಮಾಡಿದೆ.
‘ತಮ್ಮ ಕಾಲದಲ್ಲಿ ಏರ್ಸ್ಟ್ರೈಕ್ ನಡೆಸಿ ಉಗ್ರರನ್ನು ಮಟ್ಟ ಹಾಕಿದ್ದೇವೆ’ ಅಂತಾ ಬಿಜೆಪಿ ಎಲೆಕ್ಷನ್ಗಳಲ್ಲಿ ಬೊಬ್ಬೆ ಹೊಡಿತಿದ್ರೆ, ವಿಪಕ್ಷಗಳು ಇದಕ್ಕೆ ಸಾಕ್ಷಿ ನೀಡುವಂತೆ ಪ್ರಧಾನಿ ಮೋದಿ ಮೇಲೆ ಮುಗಿ ಬೀಳುತ್ತಿವೆ. ಇದೇ ವೇಳೆ, ಇದರ ಸಾಧಕ ಬಾಧಕಗಳನ್ನು, ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಆಯೋಗ, ಯಾವುದೇ ಪಕ್ಷಗಳು ಯೋಧರ ಫೋಟೋ ಅಥವಾ ಸೇನೆಯ ಕಾರ್ಯಚಟುವಟಿಕೆಳನ್ನು ತಮ್ಮ ಬ್ಯಾನರ್ ಅಥವಾ ಪ್ರಚಾರ ವೇದಿಕೆಗಳಲ್ಲಿ ಬಳಸಿಕೊಳ್ಳುವಂತಿಲ್ಲ ಅಂತಾ ಖಡಕ್ ವಾರ್ನ್ ಮಾಡಿದೆ.
ಪಾಕಿಸ್ತಾನ ಸೆರೆಯಿಂದ ಬಿಡುಗಡೆ ಹೊಂದಿ ತಾಯ್ನೆಲೆಕ್ಕೆ ವಾಪಸ್ಸಾದ ವಿಂಗ್ ಕಮಾಂಡರ್ ಅಭಿನಂದನ್ನ ಫೋಟೋವನ್ನು ದೆಹಲಿ ಬಿಜೆಪಿ ಈಗಾಗಲೇ ತಮ್ಮ ಪ್ರಚಾರದ ಬ್ಯಾನರ್ಗಳಲ್ಲಿ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಕೂಡ ಆಯೋಗಕ್ಕೆ ದೂರು ನೀಡಿದ್ರು. ಇದನ್ನ ಗಂಭೀರವಾಗಿ ಪರಿಗಣಿಸಿದ ಆಯೋಗ, ರಾಜಕೀಯ ಪಕ್ಷಗಳನ್ನ ಹದ್ದುಬಸ್ತಿನಲ್ಲಿಡಲು ಈ ಸುತ್ತೋಲೆ ಹೊರಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401