ದಿನದ ಸುದ್ದಿ
ಹುಬ್ಬಳ್ಳಿ | ಮೊದಲ ಅಮೃತ ಸರೋವರ ನೂತನ ಕೆರೆ ನಿರ್ಮಾಣಕ್ಕೆ ಚಾಲನೆ ; ಜಿಲ್ಲೆಯಲ್ಲಿ ಮುಂದಿನ 7 ತಿಂಗಳಲ್ಲಿ 75 ಕೆರೆ ನಿರ್ಮಾಣ ಗುರಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸುದ್ದಿದಿನ,ಹುಬ್ಬಳ್ಳಿ : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಶರೇವಾಡ ಗ್ರಾಮದ 3 ಎಕರೆ ಪ್ರದೇಶದಲ್ಲಿ ಜಿಲ್ಲೆಯ ಮೊದಲ ಅಮೃತ ಸರೋವರ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಶರೇವಾಡ ಗ್ರಾಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ 75 ಅಮೃತ ಸರೋವರಗಳ ಪೈಕಿ ಮೊದಲನೆಯ ಅಮೃತ ಸರೋವರವನ್ನು ಟಾಟಾ ಕಂಪನಿಯವರ ಸಿ.ಎಸ್.ಆರ್. ಕಾರ್ಯ ಚಟುವಟಿಕೆಯಡಿ ನೂತನ ಕೆರೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮುಂದಿನ 7 ತಿಂಗಳ ಅವಧಿಯಲ್ಲು 75 ಕೆರೆಗಳನ್ನು ಅಮೃತ ಸರೋವರ ಹೆಸರಿನಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ದೇಶದಲ್ಲಿ 60 ಕೋಟಿ ಜನರು ಶುದ್ಧ ಕುಡಿಯುವ ನೀರು ಸಿಗದೇ ಕಷ್ಟ ಎದುರಿಸುತ್ತಿದ್ದಾರೆ.
ನೀರು ಅಮೃತವಿದ್ದಂತೆ, ಇಸ್ರೇಲ್ ದೇಶದಲ್ಲಿ ನೀರಿನ ಪ್ರತಿ ಹನಿಯನ್ನು ಸದ್ಬಳಕೆ ಮಾಡಿಕೊಳ್ಳುವ ತಾಂತ್ರಿಕತೆಗಳನ್ನು ಪಾಲಿಸುತ್ತಾರೆ. ನಮ್ಮ ದೇಶದಲ್ಲಿಯೂ ನೀರಿನ ಸದ್ಬಳಕೆಗೆ ಆದ್ಯತೆ ನೀಡಬೇಕಾಗಿದೆ.
ಅನೇಕ ಕಡೆಗಳಲ್ಲಿ ಬೋರೆವೆಲ್ ಮೂಲಕ ನೀರು ಪೂರೈಸಲಾಗುತ್ತದೆ. ಅದು ಕುಡಿಯಲು ಯೋಗ್ಯವಿರುವುದಿಲ್ಲ. ಕೊಳವೆಬಾವಿಗಳು ಬೇಸಿಗೆ ಅವಧಿಯಲ್ಲಿ ಬತ್ತಿ ಹೋಗುತ್ತವೆ. ಆದರೆ ಕೆರೆಯ ನೀರನ್ನು ಶುದ್ಧೀಕರಿಸಿ ಕುಡಿಯಬಹುದು. ನೀರನ್ನು ಮಿತವಾಗಿ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಬೇಕು .
ಮಹಾ ನಗರಗಳಲ್ಲಿ ಕೆರೆಗಳನ್ನು ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಮುಂದಿನ 10 ವರ್ಷಗಳಲ್ಲಿ ಕುಡಿಯುವ ನೀರಿನ ಬವಣೆ ಉಂಟಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಅಮೃತ ಸರೋವರ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯ ಕೈಗಾರಿಕೆಗಳು ಕೆರೆ ಅಭಿವೃದ್ಧಿ ಪಡಿಸಲು ಸಿಎಸ‌್‌ಆರ್ ಅಡಿ ಧನ ಸಹಾಯ ನೀಡುವಂತೆ ಕೋರಲಾಗುವುದು. ಶರೇವಾಡದ ಕೆರೆ ಇತರೆ ಕೆರೆಗಳಿಗೆ ಮಾದರಿಯಾಗಬೇಕು. ಕೆರೆಗಳ ನಿರ್ಮಾಣದಿಂದ ದೇಶದಲ್ಲಿ ನೀರಿನ ಸಮಸ್ಯೆ ತಪ್ಪಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಚಿಕ್ಕನಗೌಡ್ರ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ,
ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್, ಗ್ರಾಮ ಪಂಚಾಯತ ಅಧ್ಯಕ್ಷ ಶಿವಾನಂದ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಮಹಾದೇವಿ ಅಮಟೂರ, ಟಾಟಾ ಕಂಪನಿಯ ಗೋವಿಂದರಾಜ್ ಕುಲಕರ್ಣಿ, ಪ್ರಶಾಂತ್ ದೀಕ್ಷಿತ್, ಮುಖಂಡರಾದ ಬಸವರಾಜ್ ಕುಂದಗೋಳಮಠ, ಸಿ.ಎನ್.ಪಾಟೀಲ್, ಎಂ.ಆರ್. ಪಾಟೀಲ್ ಸೇರಿದಂತೆ ಅಧಿಕಾರಿಗಳು, ಗ್ರಾಮ ಪಂಚಾಯತ ಸದಸ್ಯರು ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243