ದಿನದ ಸುದ್ದಿ

ದಾವಣಗೆರೆ : ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಸೂಚನೆ

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಯ 105 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ತಿಳಿದು ಬಂದಿದೆ. ಆದ್ದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿ. ಪಂ ಸಿಇಒ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಮತ್ತು ಉಸ್ತುವಾರಿ ಸಚಿವ  ಎಸ್ ಆರ್ ಶ್ರೀನಿವಾಸ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿಂದು ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಸಾಧ್ಯವಾದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಿ. 105 ಗ್ರಾಮಗಳಲ್ಲೂ ಸಹ ಜನರಿಗೆ ಯಾವುದೇ ರೀತಿಯ ಸಮಸ್ಯೆ ತಲೆದೋರದಂತೆ ಕ್ರಮವಹಿಸಬೇಕು. ಶಾಶ್ವತ ಪರಿಹಾರ ನೀಡಬೇಕು. ಇದಲ್ಲದೇ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ನೀರಿನ ಬವಣೆ ನಿವಾರಿಸಬೇಕು. ಇದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಲು ವರದಿ ಸಲ್ಲಿಸಿದರೆ ಸರ್ಕಾರ ಮಟ್ಟದಲ್ಲಿ ಕ್ರಮ ವಹಿಸಲಾಗುವುದು ಎಂದರು.

ದಾವಣಗೆರೆಯಲ್ಲಿ 17 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆ ದೋರಿದೆ ಅಂತಹ ಭಾಗಗಳಲ್ಲಿ ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಇದೇ ವೇಳೆ ಗೋಶಾಲೆಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಿದ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ನೀರಿನ ಮೂಲಗಳಿಂದ ಸಹ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಬೇಕೆಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು. ವಿಶೇಷವಾಗಿ ಜಗಳೂರು ತಾಲ್ಲೂಕಿನಲ್ಲಿ 5ರಿಂದ 6 ಕೊಳವೆ ಬಾವಿಗಳನ್ನು ಕೊರೆಯಿಸಿ ಸಮರ್ಪಕವಾಗಿ ನೀರು ದೊರೆಯುವಂತೆ ಮಾಡಬೇಕು. ಕುಡಿಯುವ ನೀರು, ಉದ್ಯೋಗ ಖಾತ್ರಿ ಯೋಜನೆಗೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಸರ್ಕಾರದ ಬೊಕ್ಕಸದಲ್ಲಿ ಹಣಕ್ಕೆ ಯಾವುದೇ ಕೊರತೆಯಿಲ್ಲ ಆದ್ದರಿಂದ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ತಿಳಿಸಿದರು.

ಇಚ್ಚಾಶಕ್ತಿಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಇಲ್ಲಿ ಕೆಲವೆಡೆ ಅನುದಾನವಿದ್ದರು ಕೆಲಸಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಅದರಲ್ಲೂ ಜಗಳೂರಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಇದಾಗ ಬಾರದು. ಪ್ರತಿಕೆಲಸದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಿಇಒ ಅವರಿಗೆ ಮಾಹಿತಿ ನೀಡಬೇಕು ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಮೂರ್ತಿ, ಎಡಿಸಿ ಪದ್ಮಾಬಸವಂತಪ್ಪ, ಸಿಇಒ ಬಸವರಾಜೇಂದ್ರ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.

ಅಧಿಕಾರಿಗಳಿಗೆ ಎಚ್ಚರಿಕೆ

ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಫೋನ್ ಸ್ವೀಕರಿಸುವುದಿಲ್ಲ. ತಾಲ್ಲೂಕಿನ ಕಾರ್ಯವ್ಯಾಪ್ತಿಯಲ್ಲಿ ಇರುವುದಿಲ್ಲ ಎಂಬ ಆರೋಪ ಬಂದಿದೆ ಹೀಗೆ ಆದರೆ ನಿಮ್ಮ ಮೇಲೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಗಳೂರು ತಾಲ್ಲೂಕು ಪಂಚಾಯಿತಿ ಇಒ ಜಾಕೀರಾಮ್ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‍ಆರ್ ಶ್ರೀನಿವಾಸ್ ಹರಿಹಾಯ್ದರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ ನಿಮ್ಮನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದರು.

ಆರೋಪ

ಕೆಲಸದ ವ್ಯಾಪ್ತಿ ನನಗೆ ತಿಳಿದಿದೆ 2 ತಿಂಗಳಿನಿಂದ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಗೆ ಆಗಮಿಸಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಹೇಳಿದರು. ಕಳೆದ ಕೆಲ ತಿಂಗಳುಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿಬಗ್ಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಹಾಗೂ ಸಿಇಒ ಬಳಿ ಜಿಲ್ಲೆಯ ಸಮಗ್ರ ಮಾಹಿತಿ ಪಡೆದಿರುತ್ತೇವೆ ನಾವು ಯಾವಾಗ ಬರಬೇಕೋ ಆಗ ಬಂದು ಸಭೆ ನಡೆಸುತ್ತೇವೆ. ಆದರೆ ನನ್ನ ಬಗ್ಗೆ ಯಾವಾಗಲೂ ಜಿಲ್ಲೆಗೆ ಬರುವುದಿಲ್ಲ ಎಂಬ ಆರೋಪ ಮಾಡಲಾಗುತ್ತದೆ. ಯಾರೋ ಎನೋ ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು. ವಿರೋಧಿಗಳು ಎಲ್ಲೆಡೆ ಇರುತ್ತಾರೆ ಏನೂ ಮಾಡಲು ಸಾಧ್ಯವಿಲ್ಲವೆಂದರು.

ದೇವೇಗೌಡರು ಗೆಲ್ತಾರೆ

ಎಚ್.ಡಿ.ರೇವಣ್ಣ ಶಾಸ್ತ್ರ ಹೇಳ್ತಾರೆ
ತುಮಕೂರಿನಲ್ಲಿ ಎಚ್.ಡಿ.ದೇವೇಗೌಡರು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು ಶಾಸ್ತ್ರ ಹೇಳೋಕೆ ನಾನು ಎಚ್.ಡಿ.ರೇವಣ್ಣ ಅಲ್ಲ. ದೇವೇಗೌಡರು ಗೆದ್ದೇ ಗೆಲ್ಲುತ್ತಾರೆ. ಎಷ್ಟು ಅಂತರದಿಂದ ಗೆಲುವು ಪಡೆಯುತ್ತಾರೆ ಎಂದು ಹೇಳಲು ನಾನು ಶಾಸ್ತ್ರ ಹೇಳೋ ರೇವಣ್ಣ ಅಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version