ದಿನದ ಸುದ್ದಿ
ನೆಲಮಂಗಲ ಸಮೀಪದ ದಾಸನಪುರದಲ್ಲಿ 306 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕೃಷಿ ಮಾರುಕಟ್ಟೆ ನಿರ್ಮಾಣ : ಸಚಿವ ಶಿವಾನಂದಪಾಟೀಲ್
ಸುದ್ದಿದಿನ,ಬೆಂಗಳೂರು:ರಾಜ್ಯದಲ್ಲಿ ಪ್ರಸ್ತುತ 171 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಹಾಗೂ 410 ಉಪ ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವ ಶಿವಾನಂದ ಪಾಟೀಲ್ ವಿಧಾನಪರಿಷತ್ತಿಗೆ ಇಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸಚಿವರು, ಸ್ವತಂತ್ರಮಾರುಕಟ್ಟೆ ಸಮಿತಿ ಸ್ಥಾಪನೆಗೆ ಸಂಬಂಧಪಟ್ಟಂತೆ ಬರುವ ಬೇಡಿಕೆಗಳನ್ನು ಕುರಿತು ಆರ್ಥಿಕ ಸಮೀಕ್ಷೆ ನಡೆಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ಯಶವಂತಪುರ, ಎಪಿಎಂಸಿ ಮಾರುಕಟ್ಟೆಯಲ್ಲಿ ವಾಹನದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲ ಸಮೀಪದ ದಾಸನಪುರದಲ್ಲಿ 306 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶಾಲ ಮಾರುಕಟ್ಟೆ ಅಭಿವೃದ್ಧಿಪಡಿಸಲಾಗಿದೆ.
ಎಪಿಎಂಸಿಗಳನ್ನು ಹೊರತುಪಡಿಸಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕಾಯ್ದೆಯಡಿ ಅವಕಾಶ ಕಲ್ಪಿಸಿ 4 ಖಾಸಗಿ ಮಾರುಕಟ್ಟೆ ಹಾಗೂ 65 ನೇರ ಖರೀದಿ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಯಶವಂತಪುರ ಮಾರುಕಟ್ಟೆಯಿಂದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿ ಸೇರಿದಂತೆ 4 ಉತ್ಪನ್ನಗಳನ್ನು ದಾಸನಪುರ ಉಪಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243