ದಿನದ ಸುದ್ದಿ
ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಅವ್ಯವಹಾರ | ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಕೊಪ್ಪಳ:ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇಲ್ಲಿ 2022-23 ರಿಂದ 2024-25ನೇ ಸಾಲಿನ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅರೇ ಸರ್ಕಾರಿ ಖಾತೆಯ ಅನುದಾನದಲ್ಲಿ ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ನಿಯಮಬಾಹಿರವಾಗಿ ಖರೀದಿ ಪ್ರಕ್ರಿಯೆಗೆ ಮುಂದಾಗಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಪ್ರಾಂಶುಪಾಲರಾದ ಡಾ. ಗಣಪತಿ ಕೆ. ಲಮಾಣಿ ಇವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇವರಿಂದ ಅರೇ ಸರ್ಕಾರಿ ಖಾತೆಯ ಅನುದಾನದ ಬಳಕೆಯ ಅಧಿಕೃತ ದಾಖಲೆಗಳನ್ನು ಪಡೆದು, ಪರಿಶೀಲನೆ ಮಾಡಿದಾಗ ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ಮಾಡಿರುವುದು ಮಾತ್ರವಲ್ಲದೆ, ವೆಂಕಟೇಶ್ ಟ್ರೇರ‍್ಸ್, ಕುಕನೂರು ಮತ್ತು ವೆಂಕಟೇಶ್ ಟ್ರೇರ‍್ಸ್, ತಳಕಲ್ಲ ಎಂಬ ಒಂದೇ ಹೆಸರಿನ ಏಜೆನ್ಸಿಯ ಮೂಲಕ ಎರಡು ಸ್ಥಳಗಳ ಹೆಸರಿನಲ್ಲಿ ನಕಲಿ ಜಿ.ಎಸ್.ಟಿ ಬಿಲ್ಲುಗಳನ್ನು ಸೃಷ್ಟಿಸಿಕೊಂಡು ಲಕ್ಷಾಂತರ ರೂಪಾಯಿ ಅನುದಾನವನ್ನು ವಂಚನೆ ಮಾಡಿರುವುದು ಕಂಡುಬದಿರುತ್ತದೆ.
ಪ್ರಾಂಶುಪಾಲರಿಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. 3 ತಿಂಗಳು ಕಳೆದರೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಯಾವುದೇ ಪ್ರತ್ಯುತ್ತರ ನೀಡದ ಕಾರಣ, ನಕಲಿ ಜಿ.ಎಸ್.ಟಿ ಮೂಲಕ ಹಣ ವಂಚಿಸಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಗೆ ದೂರು ನೀಡಿ, ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243