ದಿನದ ಸುದ್ದಿ
ಮರಿಯಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವ್ಯವಹಾರ : ಪ್ರಾಚಾರ್ಯ ಮಲ್ಲಿಕಾರ್ಜುನಯ್ಯ ಡಿ.ಎಂ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸುದ್ದಿದಿನ,ವಿಜಯನಗರ:ಮರಿಯಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನಯ್ಯ ಡಿ.ಎಂ ಅವರು ಕಾಲೇಜು ಹಣ ದುರುಪಯೋಗ ಮತ್ತು ಸಾಮಾಗ್ರಿ ಖರೀದಿ ವ್ಯವಹಾರಗಳಲ್ಲಿ ಭ್ರಷ್ಟಚಾರ ಕಂಡು ಬಂದಿದ್ದು, ಇದನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಹಕ್ಕು ಅಧಿನಿಯಮದ ಅಡಿಯಲ್ಲಿ ದಾಖಲೆಗಳನ್ನು ಪಡೆದು ಪರಿಶೀಲನೆ ಮಾಡಿದಾಗ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನಯ್ಯ ಅವರು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಿವಿಧ ಅರೇ ಸರ್ಕಾರಿ ಖಾತೆಗಳ ಹಣ ಹಾಗೂ ಸರ್ಕಾರದಿಂದ ಮಂಜೂರಾಗಿರುವ ಹಣಕ್ಕೆ ಸಂಬಂಧಿಸಿದಂತೆ ಸಾಮಾಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಕಂಡುಬಂದಿದೆ ಎಂದಿದ್ದಾರೆ.
ಈ ಬಗ್ಗೆ ಮಾಹಿತಿಹಕ್ಕು ನಿಯಮಾನುಸಾರ ಕಡತ ಹಾಗೂ ಸಾಮಾಗ್ರಿಗಳ ಪರಿಶೀಲನೆ ಅವಕಾಶ ಕೋರಿದರೂ ಸದರಿ ಕಾಲೇಜಿನ ಪ್ರಾಂಶುಪಾಲರು ಅವಕಾಶ ಕಲ್ಪಿಸಿರುವುದಿಲ್ಲ. ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದಾಖಲೆಗಳ ಪ್ರಕಾರ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243