ದಿನದ ಸುದ್ದಿ
2022ಕ್ಕೆ ಇಸ್ರೊದಿಂದ ಮಾನವ ಸಹಿತ ರಾಕೆಟ್ ಉಡಾವಣೆ
ಸುದ್ದಿದಿನ ಡೆಸ್ಕ್: ಎಲ್ಲ ಅಂದುಕೊಂಡಂತೆ ಆದರೆ, 2022ಕ್ಕೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಇಸ್ರೊ ಮಾನವ ಸಹಿತ ರಾಕೆಟ್ ಉಡಾವಣೆ ಮಾಡಲಿದೆ.
ದಿಲ್ಲಿಯ ಕೆಂಪು ಕೋಟೆಯಲ್ಲಿ72ನೇ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಘೋಷಿಸಿದರು.
ವ್ಯೋಮ್ ಹೆಸರಿನ ಈ ಕಾರ್ಯಾಚರಣೆಯನ್ನು ಇಸ್ರೊ 2022ರಲ್ಲಿ ಕೈಗೊಳ್ಳಲಿದ್ದು, ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಳ್ಳಲಿರುವ ಯಾನಿ ಯಾರೆಂಬುದು ಇನ್ನು ದೃಢಪಟ್ಟಿಲ್ಲ.
2022ಕ್ಕೆ ಭಾರತವು 75ನೇ ಸ್ವಾತಂತ್ರ್ಯ ಮಹೋತ್ಸವ ಸಂಭ್ರಮದಲ್ಲಿರುತ್ತದೆ ಅದೇ ವೇಳೆಗೆ ಮಾನವ ಸಹಿತ ರಾಕೆಟ್ ಉಡಾವಣೆ ಮಾಡಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಮೋದಿ ಅವರು ಇಲ್ಲಿ ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೊ ಮುಖ್ಯಸ್ಥ ಡಾ. ಶಿವನ್ ಅವರು ಇಸ್ರೊ ಮಾನವ ಸಹಿತ ರಾಕೆಟ್ ಉಡಾವಣೆ ಯೋಜನೆಯ ಕುರಿತು ಈಗಲೇ ಮಾತನಾಡುವುದು ಕಷ್ಟ. ಆದರೆ, 2022ರ ವೇಳೆಗೆ ಖಂಡತವಾಗಿಯೂ ಪೂರೈಸಲಿದೆ ಎಂದು ತಿಳಿಸಿದರು.
ಇಸ್ರೊದ ವ್ಯೋಮ್, ಕೇವಲ ಸಂಸ್ಥೆಯ ಒಂದು ಯೋಜನೆಯಲ್ಲ ಇದು ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂದು ತಿಳಿಸಿದ್ದಾರೆ.
9 ಸಾವಿರ ಕೋಟಿ ರೂಪಾಯಿಯ ಈ ಯೋಜನೆಯನ್ನು 40 ತಿಂಗಳಲ್ಲಿ ಇಸ್ರೊ ಕೈಗೊಳ್ಳಲಿದೆ. ಇದಕ್ಕಾಗಿ ಸಾಕಷ್ಟು ತಯಾರಿಗಳನ್ನೂ ಮಾಡಿಕೊಂಡಿದೆ. ಅಂದಹಾಗೆ ಈವರೆಗೆ ಎರಡು ಬಾರ ಜಿಎಸ್‍ಎಲ್‍ವಿ ನೌಕೆಗಳನ್ನು ಬಹ್ಯಾಕಾಶಕ್ಕೆ ಕಳಿಸಿ ಅವು ಯಶಸ್ವಿಯಾಗಿ ವಾಪಸಾದ ನಂತರವಷ್ಟೆ ಮಾನವ ಸಹಿತ ಯೋಜನೆ ಕೈಗೊಳ್ಳುವ ನಿರ್ಧಾರಕ್ಕೆ ಇಸ್ರೊ ಬಂದಿದೆ.
ಕಡಿಮೆ ಬೆಲೆಯಲ್ಲಿ ಮಂಗಳ ಯಾನ ಕೈಗೊಂಡು ವಿಶ್ವದ ಪ್ರಶಂಸೆಗೆ ಒಳಗಾಗಿದ್ದ ಇಸ್ರೊ, ಮಾನವ ಸಹಿತ ಯೋಜನೆಯನ್ನು ಕೈಗೊಳ್ಳುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಲಿದೆ.
ಇಸ್ರೊ ಮಂಗಳಯಾನವನ್ನು ಅಗ್ಗದ ಬೆಲೆಯಲ್ಲಿ ಬಾಹ್ಯಾಕಾಶಕ್ಕೆ ಸೇರಿಸಿದ ಬೆನ್ನಿಗೇ, ಇತರೆ ದೇಶಗಳ ಉಪಗ್ರಹಗಳನ್ನು ಯಶಸ್ವಿಯಾಗಿ ಇಸ್ರೊ ನಭಕ್ಕೆ ಸೇರಿಸಿದೆ.