ದಿನದ ಸುದ್ದಿ

ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ಮಾನವತಾವಾದಿ ತತ್ವವನ್ನು ಬೆಳೆಸಿಕೊಳ್ಳಬೇಕು : ಶಾಸಕ ಎಂ.ಅಶ್ವಿನ್ ಕುಮಾರ್

Published

on

ಸುದ್ದಿದಿನ,ಟಿ.ನರಸೀಪುರ: ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ಮಾನವೀಯತೆ, ಮಾನವತಾವಾದಿ ತತ್ವವನ್ನು ಬೆಳೆಸಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.

ಪಟ್ಟಣದ ಗುರು ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಟಿ.ನರಸೀಪುರ ತಾಲ್ಲೂಕು ಹಾಗೂ ಸಮದೃಷ್ಟಿ ಚಾರಿಟೆಬಲ್ ಟ್ರಸ್ಟ್, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ತಪಾಸಣೆ ಆಗಿರುವ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣ ಸಮಾರಂಭದ ಉದ್ಘಾಟನೆಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ನೆರವೇರಿಸಿ ಅವರು ಮಾತನಾಡಿದರು.

ಸಮದೃಷ್ಟಿ ಸೇವಾ ಸಂಸ್ಥೆ ನನ್ನ ಕ್ಷೇತ್ರದಲ್ಲಿ ಸರ್ಕಾರಿ ಶಾಲಾ ಮಕ್ಕಳಲ್ಲಿ ಕಣ್ಣಿನ ದೋಷ ಉಳ್ಳವರಿಗೆ ತಪಾಸಣೆ ನಡೆಸಿ ಉಚಿತವಾಗಿ ಕನ್ನಡಕ ನೀಡಲು ನನ್ನ ಬಳಿ ಸಮದೃಷ್ಟಿ ಸಂಸ್ಥಾಪಕರಾದ ಕೆ.ಉಲ್ಲಾಸ್ ಕಾಮತ್ ರವರು ಮಾತನಾಡಿದಾಗ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೊದಲ ಹಂತದಲ್ಲಿ 16,385 ಮಕ್ಕಳಿಗೆ ಕಣ್ಣಿನ ತಪಾಸಣೆ ನಡೆಸಿದಾಗ 622 ಮಕ್ಕಳಿಗೆ ದೃಷ್ಟಿ ದೋಷವಿರುವುದು ಪತ್ತೆಯಾಗಿತ್ತು.

ಅದರಲ್ಲಿ 200 ಮಕ್ಕಳಿಗೆ ಸರ್ಜಿಕಲ್ ಅವಶ್ಯಕತೆ ಇರುವುದರಿಂದ ಆ ಮಕ್ಕಳಿಗೂ ಸಹ ಇದೇ ಸಂಸ್ಥೆಯವರು ಆಪರೇಷನ್ ಮಾಡುವ ಮುಖಾಂತರ ದೋಷ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದು ಅದಕ್ಕೆ ನನ್ನ ಸಂಪೂರ್ಣ ಸಹಕಾರವನ್ನು ಅವರಿಗೆ ನೀಡುವುದಾಗಿ ತಿಳಿಸುತ್ತ, ಈ ಒಂದು ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಈ ಹಿಂದಿನ ಬಿಇಓ ಮತ್ತು ಅವರ ತಂಡ ಬಹಳಷ್ಟು ಶ್ರಮಿಸಿದೆ. ಅವರ ಸೇವೆ ಶ್ಲಾಘನೀಯ ಎಂದರು.

ಕೊರೊನ ಹಿನ್ನಲೆಯಲ್ಲಿ ಇಂದು ಕೆಲವೇ ಮಕ್ಕಳು ಕನ್ನಡಕವನ್ನು ಪಡೆಯಲು ಹಾಜರಿದ್ದು, ಉಳಿದ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ನನ್ನ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆ ಬಾಗಿಲಿಗೆ ಕನ್ನಡಕ ತಲುಪಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ಯಾರೂ ಆತಂಕ ಪಡುವುದು ಬೇಡವೆಂದರು.

ಈಗಾಗಲೇ ದೂರದರ್ಶನ ಮತ್ತು ಆನ್ಲೈನ್ ಮುಖಾಂತರ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ನೀಡುತ್ತಿದ್ದು ಇಂತಹ ಸಂದರ್ಭದಲ್ಲಿ ಸಮದೃಷ್ಟಿ ಸಂಸ್ಥೆ ಮಕ್ಕಳಿಗೆ ಕನ್ನಡಕ ವಿತರಿಸಿರುವುದು ಅವರಲ್ಲಿರುವ ಮಕ್ಕಳ ಬಗೆಗಿನ ಕಾಳಜಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲೂ ಮುಂಬರುವ ಮಕ್ಕಳಿಗೆ ಈ ಸೇವೆಯನ್ನು ವಿಸ್ತರಿಸುವುದಾಗಿ ತಿಳಿಸಿದ್ದು, ಮಕ್ಕಳ ಕಣ್ಣಿನ ದೃಷ್ಟಿಯ ಬಗ್ಗೆ ಅವರಿಗಿರುವ ಕಾಳಜಿ ಅತ್ಯಂತ ಶ್ಲಾಘನೀಯ ಎಂದರು.

ಈ ಒಂದು ಕಾರ್ಯದಲ್ಲಿ ಸಂಸ್ಥೆಯ ಸಿಇಒ ಶಿವಕುಮಾರ್ ಜನಾರ್ಧನ್, ಸಿದ್ಧಾರ್ಥ ಪೈ, ಕೆ.ವಿ.ಮಹೇಶ್, ಸುನಿಲ್ ಕುಮಾರ್, ಕೃಷ್ಣಾನಂದ ಹೆಗಡೆ ಸೇವೆ ಅತ್ಯಂತ ಸ್ಮರಣೀಯ ಎಂದು ಸ್ಮರಿಸಿದರು.

ಸಮದೃಷ್ಟಿ ಸಂಸ್ಥಾಪಕ ಕೆ. ಉಲ್ಲಾಸ್ ಕಾಮತ್ ಮಾತನಾಡಿ, ನಮ್ಮ ಈ ಸೇವೆ ಟಿ.ನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಬರಲು ಈ ಕ್ಷೇತ್ರದ ಶಾಸಕರಾದ ಎಂ.ಅಶ್ವಿನ್ ಕುಮಾರ್ ರವರು ಪ್ರಮುಖ ಕಾರಣ. ಅವರು ಕಿರಿಯ ವಯಸ್ಸಿನಲ್ಲೇ ಶಾಸಕರಾಗಿದ್ದರೂ ಸಹ ಸಾಮಾನ್ಯ ಮನುಷ್ಯರಂತೆ ಸಾರ್ವಜನಿಕ ಸೇವೆಯಲ್ಲಿದ್ದು ಮಕ್ಕಳ ದೃಷ್ಟಿ ದೋಷದ ಬಗ್ಗೆ ನಮ್ಮ ಬಳಿ ಮಾತನಾಡಿ, ನನ್ನ ಸಂಪೂರ್ಣ ಸಹಕಾರವನ್ನು ನಿಮಗೆ ನೀಡುವುದಾಗಿ ಹಲವಾರು ಮಕ್ಕಳಿಗೆ ದೃಷ್ಟಿ ದೋಷವಿದ್ದರೆ ಅದನ್ನು ಪೋಷಕರು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುಷ್ಟರಲ್ಲಿ ಮಕ್ಕಳಿಗೆ ಬೇರೆ ಬೇರೆ ಹಂತದ ತೊಂದರೆಗಳು ಕಾಣಿಸಿಕೊಳ್ಳುವುದು ಬೇಡವೆಂಬ ಅವರ ಕಳಕಳಿಗೆ ನಮ್ಮ ತಂಡ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ 224 ಸರ್ಕಾರಿ ಶಾಲೆಗಳ 16,385 ಮಕ್ಕಳನ್ನು ತಪಾಸಣೆ ಮಾಡಲು ಸಾಧ್ಯವಾಯಿತು. ಶಾಸಕರ ಸಹಕಾರ ಇಲ್ಲದಿದ್ದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಕನ್ನಡಕವನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ. ಕೊರೊನವಿಲ್ಲದಿದ್ದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಕನ್ನಡಕ ಮಕ್ಕಳ ಕೈ ಸೇರುತ್ತಿತ್ತು.

ಮಕ್ಕಳಿಗೆ ಕಣ್ಣಿನ ದೃಷ್ಟಿ ತುಂಬಾನೆ ಮುಖ್ಯ‌ ಕಲಿಕಾ ಹಂತದಲ್ಲಿ ಮಕ್ಕಳಿಗೆ ಇದರ ಪರಿವೇ ಇರುವುದಿಲ್ಲ. ಹಾಗಾಗಿ ಪೋಷಕರು, ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಕಣ್ಣಿನ ದೋಷ ಉಳ್ಳ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ಕೊಡಿಸಬೇಕೆಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಸೋಸಲೆ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ,ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಶಿವಶಂಕರ ಮೂರ್ತಿ, ಸೋಸಲೆ ನಾಗೇಶ್, ಬಿ.ಆರ್.ಸಿ. ಮಂಜುಳಾ, ಹೆಚ್.ಡಿ.ಮಾದಪ್ಪ, ಸುಬ್ರಹ್ಮಣ್ಯ ಹಾಗೂ ಇತರರು ಇದ್ದರು.

ವರದಿ : ಎಂ. ನಾಗೇಂದ್ರ ಕುಮಾರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version