ರಾಜಕೀಯ
ದಲಿತರ ಗುಡಿಸಲಿನಲ್ಲಿ ಶ್ರೀರಾಮುಲು ಧ್ಯಾನ, ಯೋಗ!
ಸುದ್ದಿದಿನ ವಿಶೇಷ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ನೆಲಗೇತನಹಟ್ಟಿಯಲ್ಲಿ ಶಾಸಕ ಬಿ.ಶ್ರೀರಾಮುಲು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಗ್ರಾಮದ ದಲಿತ ಕಾಲೋನಿಯ ಬಡ ಕುಟುಂಬದ ಮನೆಯಲ್ಲಿ ವಾಸ್ತವ್ಯ ಮಾಡಿದ ಶ್ರೀರಾಮುಲು ರಾತ್ರಿ ರೊಟ್ಟಿ ಊಟ ಮಾಡಿದರು.
ಮುಂಜಾನೆ ಯೋಗ ಮಾಡಿದ ಶ್ರೀರಾಮುಲು, ತಮ್ಮ ದಿನಚರಿಯಂತೆ ಪೂಜೆ ಮಾಡಿದರು. ಗ್ರಾಮಸ್ಥರ ಸಂಕಷ್ಟಗಳಿಗೆ ಕಿವಿಯಾದ ಶ್ರೀರಾಮುಲು ಅವುಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಗುಡಿಸಲಿನಲ್ಲಿ ಶಾಸಕ ಬಿ. ಶ್ರೀರಾಮುಲು ನಿದ್ರೆ
ಚುನಾವಣೆ ಗೆಲುವಿನ ಬಳಿಕ ಮೊಳಕಾಲ್ಮೂರಿನಲ್ಲಿ ಸಕ್ರಿಯವಾಗಿ ಜನರ ಕಷ್ಟ ಆಲಿಸುತ್ತಿರುವ ಶ್ರೀರಾಮುಲು ಕ್ಷೇತ್ರದಲ್ಲಿ ಬದಾವಣೆ ತರುವುದೇ ನನ್ನ ಗುರಿ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ.
ನೆಲಗೇತನಹಟ್ಟಿ ದಲಿತರ ಗುಡಿಸಲಿನಲ್ಲಿ ಬುಧವಾರ ವಾಸ್ತವ್ಯ ಮಾಡಿದ ಶ್ರೀರಾಮುಲು ದಲಿತ ದಂಪತಿ ತಯಾರಿಸಿದ ರೊಟ್ಟಿ ಊಟ ಮಾಡಿದರು. ಗುಡಿಸಲಿನಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ.
ಪೂಜೆ ತಪ್ಪಿಸಲಿಲ್ಲ ಶ್ರೀರಾಮುಲು
ಶ್ರೀರಾಮುಲು ಅಪಾರ ದೈವಭಕ್ತರು ಎಂಬುದು ಹಲವು ಬಾರಿ ಸಾಭೀತಾಗಿದೆ. ಅದರಂತೆ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕೂಡ ಅದು ಮುಂದುವರಿದೆ. ಮುಂಜಾನೆ ಎದ್ದ ಶಾಸಕ ಶ್ರೀರಾಮುಲು ವಾಕಿಂಗ್, ಧ್ಯಾನ ಮುಗಿಸಿ ಎಂದಿನಂತೆ ಶ್ರದ್ಧೆಯಿಂದ ಪೂಜೆ ಸಲ್ಲಿಸಿದರು.
ಗ್ರಾಮಸ್ಥರಿಗೆ ಶ್ರೀರಾಮುಲು ಅಭಯ
ಗ್ರಾಮ ವಾಸ್ತವ್ಯದ ಮೂಲಕ ಶಾಸಕ ಬಿ.ಶ್ರೀರಾಮಲು ಗ್ರಾಮಸ್ಥರ ಕಷ್ಟ ಆಲಿದ್ದಾರೆ. ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಶ್ರೀರಾಮುಲು ಭರವಸೆ ನೀಡಿದ್ದಾರೆ. ಜೊತೆಗೆ ಶಾಸಕ ಶ್ರೀರಾಮುಲು ಅವರು ತಮ್ಮ ಗ್ರಾಮದಲ್ಲಿ ವಾಸ್ತವ್ಯ ಮಾಡಿರುವುದಕ್ಕೆ ನೆಲಗೇತನಹಟ್ಟಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.