ದಿನದ ಸುದ್ದಿ
ಗಾಜಿನ ಮನೆ ವಿಳಂಬಕ್ಕೆ ಎಸ್ಎಆರ್ ಆಕ್ರೋಶ
ದಾವಣಗೆರೆ: ಗಾಜಿನ ಮನೆ ವಿಳಂಬ ಮಾಡಿರುವುದಕ್ಕೆ ಶಾಸಕ ಎಸ್.ಎ. ರವೀಂದ್ರನಾಥ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಕುಂದುವಾಡ ಕೆರೆಯ ಗಾಜಿನ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಗಸ್ಟ್ 15ರೊಳಗಾಗಿ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರೂ ವಿಳಂಬ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ವಿಳಂಬದ ಬಗ್ಗೆ ತೋಟಗಾರಿಕೆ ಇಲಾಖೆ ಹಾಗೂ ಸಂಬಂದಿತಾ ಇಲಾಖಾಧಿಕಾರಿಗಳ ವಿರುದ್ಧ ಗರಂ ಆಗಿ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 24 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣಗೊಂಡಿದೆ. ಇದರ ಸುತ್ತಲಿನ ಪ್ರದೇಶ ಅಭಿವೃದ್ಧಿ, ರಸ್ತೆ, ಕ್ಯಾಂಟೀನ್ ಬಿಲ್ಡಿಂಗ್ ನಿರ್ಮಾಣಕ್ಕೆ ಅಗತ್ಯವಾದ 5 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ತೋಟಗಾರಿಕೆ ಇಲಾಖೆ ಮುಖ್ಯ ಕಚೇರಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ವಾರದ ಒಳಗಾಗಿ ತೋಟಗಾರಿಕೆ ಇಲಾಖೆ ನಿರ್ದೇಶಕರು ಇಲ್ಲಿಗೆ ಬಂದು ಸ್ಥಳ ಪರಿಶೀಲಿಸಬೇಕು. ಸರ್ಕಾರ ದಿಂದ ಅಗತ್ಯ ಅನುದಾನ ಮಂಜೂರು ಮಾಡಿಸುವ ಕೆಲಸ ನಾನು ಮಾಡುತ್ತೇನೆ. ಇನ್ನಾದರೂ ಶೀಘ್ರವೇ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕರು ಬೆಂಗಳೂರಿನ ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ಕರೆ ಮಾಡಿ ಗಾಜಿನ ಮನೆ ಕಾಮಗಾರಿ ಮಂದಗತಿಯಲ್ಲಿ ಸಾಗಿರುವ, ಹೆಚ್ಚುವರಿ 5 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಸ್ಪಂದಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.