ರಾಜಕೀಯ
ಕೋಟೆನಾಡು ಭೇದಿಸಿದ ಶಾಸಕ ತಿಪ್ಪಾರೆಡ್ಡಿಗೆ ಅಭಿವೃದ್ಧಿ ಮಂತ್ರವಾಗಲಿ !
ಸುದ್ದಿದಿನ, ಚಿತ್ರದುರ್ಗ: ನಗರದ ಅಭಿವೃದ್ಧಿ ಕುರಿತು ಪದೇಪದೇ ನೆಪ ಹೇಳುತ್ತಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಈ ಬಾರಿ ನಗರದ ಜನ ಪೂರ್ಣ ಬಹುಮತ ನೀಡಿದ್ದಾರೆ.ನಗರದ ಅಭಿವೃದ್ಧಿ ಕುರಿತು ಶಾಸಕರು ನನಗೆ ಅಧಿಕಾರದ ಸಮಸ್ಯೆಯಿದೆ. ನಗರಸಭೆಯಲ್ಲಿ ನನಗೆ ಬೆಂಬಲವಿಲ್ಲ ಎಂದು ಹೇಳುತ್ತಿದ್ದ ಶಾಸಕರಿಗೆ ಈಗ ಸಂಪೂರ್ಣ ಶಕ್ತಿ ದೊರೆತಿದೆ. ಜನರ ಆಶಯದಂತೆ ಶಾಸಕರು ಕೆಲಸ ಮಾಡಬೇಕಿದೆ ಅಷ್ಟೇ. ಜತೆಗೆ ಈ ಬಾರಿ ಶಾಸಕರು ಕೆಲಸ ಮಾಡುತ್ತಾರೆ ಎಂಬ ಭರವಸೆ ಕೂಡ ನಾಗರಿಕರಲ್ಲಿದೆ.
ಕೈ ಕೋಟೆ ಭೇದಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
ರಾಜಕೀಯದ ಜೀವನದ ಒಟ್ಟಾರೆ ಅನುಭವ ಮತ್ತು ಶಕ್ತಿಯನ್ನು ಉಪಯೋಗಿಸಿದ ಶಾಸಕ ತಿಪ್ಪಾರೆಡ್ಡಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿ ವಿಜಯ ಪತಾಕೆ ಹಾರಿಸಿದ್ದಾರೆ.
35 ವಾರ್ಡ್‍ಗಳ ಪೈಕಿ ಸರಳ ಬಹುಮತಕ್ಕೆ ಬೇಕಾದ ಸೀಟುಗಳನ್ನು ಬಿಜೆಪಿ ಪಕ್ಷಕ್ಕೆ ಪಡೆಯುವಲ್ಲಿ ಶಾಸಕ ತಿಪ್ಪಾರೆಡ್ಡಿ ಯಶಸ್ವಿಯಾಗಿದ್ದಾರೆ. ಕಳೆದ ಎರಡ್ಮೂರು ದಶಕಗಳಿಂದಲೂ ಶಾಸಕರಾಗಿದ್ದ ತಿಪ್ಪಾರೆಡ್ಡಿ ಅವರು ನಗರಸಭೆಯಲ್ಲಿ ಬೇರೆ ಪಕ್ಷಗಳ ಆಡಳಿವಿದ್ದ ಕಾರಣ ಅಭಿವೃದ್ಧಿ ವಿಚಾರಕ್ಕೆ ಬಂದಾಗ ರಾಜಕೀಯ ವಿಚಾರವಾಗಿ ತೀವ್ರ ಮುಜುಗರಕ್ಕೆ ಈಡಾಗಿದ್ದರು.
ಒಂದು ಕಡೆ ಶಾಸಕರು ಇದ್ದೂ ಇಲ್ಲದಂತಾಗಿದೆ. ನಗರದ ರಸ್ತೆಗಳು ಹಾಳಾಗಿವೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ವಿರೋಧಿಗಳು ಟೀಕೆ ಮಾಡುತ್ತಿದ್ದರು. ಈ ಟೀಕೆಗಳ ಮಧ್ಯೆಯೇ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯಗಳಿಸಿದ್ದರು. ಅದೇ ಉತ್ಸಾಹದಲ್ಲಿದ್ದ ಶಾಸಕರು ನಗರಸಭೆ ಚುನಾವಣೆಯಲ್ಲೂ ವೈಯುಕ್ತಿಕ ಪ್ರತಿಷ್ಠೆ ಪಣಕ್ಕಿಟ್ಟು ಗೆಲುವು ಸಾಧಿಸಿದ್ದಾರೆ.
ಅಭಿವೃದ್ಧಿಯೊಂದೇ ಮಂತ್ರ
ಐತಿಹಾಸಿಕ ನಗರ ಚಿತ್ರದುರ್ಗ ಇತಿಹಾಸದ ಕಾರಣಕ್ಕೆ ನಾಡಿನ ಗಮನ ಸೆಳೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಅಪ ಖ್ಯಾತಿಗೂ ಕಾರಣವಾಗಿತ್ತು. ನಗರದ ರಸ್ತೆಗಳು ಕಿತ್ತು ಹೋಗಿದ್ದವು, ಚರಂಡಿ ವ್ಯವಸ್ಥೆ ಹಾಳಾಗಿತ್ತು. ಕುಡಿವ ನೀರು, ಸಾರಿಗೆ ಸೌಕರ್ಯ ಹೀಗೆ ಹತ್ತಾರು ವಿಷಯದಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಸದ್ಯ ನಗರದ ಜನರ ಬೇಡಿಕೆಯೂ ಅದೇ ಆಗಿದೆ. ಅದರಂತೆ ಈಗ ನಗರಸಭೆ ಗೆಲುವಿನೊಂದಿಗೆ ಪೂರ್ಣ ಬಹುಮತ ಪಡೆದ ಶಾಸಕರು ಅಭಿವೃದ್ಧಿಗೆ ಮುಂದಾಗಬೇಕಿದೆ.