ದಿನದ ಸುದ್ದಿ

ಹಿಂದುಳಿದ ಸಮಾಜಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಸಂಘಟಿತರಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ

Published

on

ಸುದ್ದಿದಿನ,ದಾವಣಗೆರೆ:ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜವು ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ತಿಳಿಸಿದರು.

ಬುಧವಾರ(ಫೆ.5) ರಂದು ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತಾನಾಡಿದರು. ಸವಿತಾ ಸಮಾಜದ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು, ಆಗ ಮಾತ್ರ ಶ್ರೀಮಂತ, ಬಡವ, ಮೇಲು ಕೀಳು ಎಂಬ ಮನೋಭಾವನೆ ಬರಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಸಮಾಜದಲ್ಲಿ ಇರುವಂತಹ ತೊಡಕುಗಳನ್ನು ತೊರೆದು ನಡೆದರೆ ಮಾತ್ರ ಅಭಿವೃದ್ದಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ವೃತ್ತಿ ಬದುಕಿಗೆ ಅನುಕೂಲವಾಗಲು ಪರಿಕರಗಳ ಕಿಟ್ ನೀಡಲು ಮತ್ತು ಪಾಲಿಕೆಯಲ್ಲಿರುವ ಮಳಿಗೆಗಳನ್ನು ಇವರಿಗೆ ಕಡಿಮೆ ಬಾಡಿಕೆ ನೀಡಬೇಕು ಎಂದರು. ಹೊಂಡದ ಸರ್ಕಲ್‌ನಲ್ಲಿರುವ ಸಮುದಾಯದ ಭವನದ ಕಟ್ಟಡವನ್ನು ಪೂರ್ಣಗೊಳಿಸಲು ಸಚಿವರೊಂದಿಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ಮಾರ್ಗದರ್ಶಿಯಾಗಿದೆ. ಸವಿತಾ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ. ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ದೂಢಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಪಾಲಿಕೆ ಮಹಾಪೌರರಾದ ಚಮನ್ ಸಾಬ್ ಕೆ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ತಹಶೀಲ್ದಾರ್ ಅಶ್ವಥ್, ಸಂಘದ ಜಿಲ್ಲಾಧ್ಯಕ್ಷರಾದ ಬಾಲರಾಜ್, ವಕೀಲರಾದ ರಂಗಸ್ವಾಮಿ ಹಾಗೂ ಸಮಾಜದ ಎಲ್ಲಾ ಮುಖಂಡರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Trending

Exit mobile version