ಲೈಫ್ ಸ್ಟೈಲ್

ಉಡುವ ಬಾರೆ ಡಿಸೈನರ್ ರೆಡಿಸೀರೆ

Published

on

ಇಂದಿನ ಹುಡುಗಿಯರಿಗೆ ಸೀರೆ ಉಡುವುದೆಂದರೆ ಕಬ್ಬಿಣದ ಕಡಲೆ. ಹಾಗೆಂದು ಸೀರೆ ಉಡದೆ ಇರುವುದಕ್ಕೆ ಆಗುತ್ತದೆಯೇ. ಯಾವುದೇ ಶುಭ ಸಮಾರಂಭವಿರಲಿ ಸೀರೆ ಉಟ್ಟ ನಾರಿಗೆ ಹೆಚ್ಚು ಮನ್ನಣೆ, ಹಾಗೆಂದೇ ಇಂದು ಫ್ಯಾಷನ್ ಪ್ರಯ ನಾರಿಮಣಿಯರಿಗಾಗಿ ರೆಡಿಸೀರೆಗಳು ಬಂದಿವೆ.

ಇದು ಉಡಲು ಸುಲಭ, ನೋಡಲು ಸುಂದರ. ಮೈಗಂಟುವ, ಮೈಬಳಸುವ ಮೈಕಟ್ಟನ್ನು ಅನುಸರಿಸುವ ಕಾರಣಕ್ಕೋ ಏನೋ ಎಂಥವರಿಗೂ ಇಷ್ಟವಾಗ ಬಿಡುತ್ತವೆ ಈ ರೆಡಿ ಸೀರೆಗಳು. ಫ್ಯಾನ್ಸಿ ಸೀರೆಗಳನ್ನು ಹೆಚ್ಚು ಇಷ್ಟಪಡುವ ಹೆಣ್ಣುಮಕ್ಕಳಿಗೆ ಇದು ಅಚ್ಚು ಮೆಚ್ಚು.

ರೆಡಿ ಸೀರೆಗಳು ನೋಡಲು ಗ್ರಾಂಡ್ ಆಗಿ ಕಂಡರೂ ಉಟ್ಟರೆ ಹಗುರ, ನಿಭಾವಣೆಯೂ ಸುಲಭ. ರೆಡಿ ಸೀರೆಯನ್ನು ತೆಗೆದುಕೊಳ್ಳುವಾಗ ಗಾಢ ಬಣ್ಣಗಳ ಆಯ್ಕೆ ಮಾಡುವುದು ಉತ್ತಮ. ದೊಡ್ಡ ಬಾರ್ಡರ್ ಇರುವ ರೆಡಿ ಸೀರೆಯನ್ನು ಉಟ್ಟರೆ ಅಂದ ದುಪ್ಪಟ್ಟು. ರೆಡಿ ಸೀರೆಗಳು ಎಲ್ಲ ವಯಸ್ಸಿನವರಿಗೂ ಹೊಂದಿಕೆಯಾಗುವುದಿಲ್ಲ.

ತೆಳ್ಳಗೆ ಬಳುಕುವ ಬಳ್ಳಿಯಂತೆ ಇರುವ ಹುಡುಗಿಯರಿಗೆ ಹೆಚ್ಚು ಸೂಕ್ತ. ಇವನ್ನು ಉಡುವುದು ಬಹಳ ಸುಲಭ, ಸೆರಗು ಪಿನ್ ಮಾಡಿದರೆ ಮುಗಿಯಿತು ಸೀರೆ ಉಟ್ಟ ಕೆಲಸ. ರೆಡಿ ಸೀರೆಗಳಲ್ಲಿ, ಕುಂದನ್‍ವರ್ಕ್, ಜರ್ದೋಸಿ ವರ್ಕ್, ಫಿಶ್ ಕಟ್, ಸೀರೆಗಳು ಹೆಚ್ಚು ಸುಂದರವಾಗಿ ಕಾಣುತ್ತದೆ.

ರೆಡಿಸೀರೆ ಧರಿಸಿದಾಗ ಸೀರೆಗೆ ತಕ್ಕಂತೆ ಆಭರಣ ಧರಿಸಿದರೆ ಸೀರೆಯ ಅಂದ ಇನ್ನು ಹೆಚ್ಚಾಗತ್ತದೆ. ಕತ್ತು, ಕೈಗಳಿಗೆ ಒಂದೇ ತೆರನಾದ ವಿನ್ಯಾಸದ ಆಭರಣ ಧರಿಸದರೆ ನಾರಿಯ ಅಂದ ಇಮ್ಮಡಿಯಾಗುವುದರಲ್ಲಿ ಸಂದೇಹವೇ ಇಲ್ಲ.

ರೆಡಿ ಸೀರೆಗಳು ದೊಡ್ಡ ಸಮಾರಂಭಗಳಿಗೆ ಹೆಚ್ಚು ಸೂಕ್ತ. ಏಕೆಂದರೆ ಇದು ನೋಡಲು ಗ್ರಾಂಡ್ ಲುಕ್ ನೀಡುತ್ತದೆ. ರೆಡಿ ಸೀರೆ ಧರಿಸಿದಾಗ ಕ್ಲಚ್, ಪರ್ಸ್, ಕ್ರಿಸ್ಟಲ್ ಕೂರಿಸಿದ ಕ್ಲಚ್ ಪರ್ಸ್ ಉಪಯೋಗಿಸಿದರೆ ನೋಡಲು ಚೆಂದ.

ಡಿಸೈನರ್ ಬ್ಲೌಸ್

ಸೀರೆಯ ರವಿಕೆಯ ಅಂದ ಹೆಚ್ಚಿಸುತ್ತೋ ಅಥವಾ ರವಿಕೆಯಿಂದಲೇ ಸೀರೆಗೆ ಸೌಂದರ್ಯವೋ ಗೊತ್ತಿಲ್ಲ. ಆದರೆ ಇಷ್ಟಂತೂ ನಿಜ. ಸೀರೆಯ ಬಣ್ಣಕ್ಕೆ ಸರಿ ಹೊಂದುವಂತಹ ಮ್ಯಾಚಿಂಗ್ ರವಿಕೆಗಾಗಿ ಪೇಟೆಯಲ್ಲಿ ಅಲೆದಾಡಿ ಬಿಡುತ್ತಿದ್ದ ಮಹಿಳೆಯರಿಗೀಗ ಒಂಚೂರು ನಿರಾಳರಾಗಿದ್ದಾರೆ. ಪರ್ಫೆಕ್ಟ್ ಮ್ಯಾಚ್ ಅನ್ನೋ ಕ್ರೇಜ್ ಬದಲಾಗಿದೆ.

ಸೀರೆಗೆ ಮ್ಯಾಚ್ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ರವಿಕೆಯ ವಿನ್ಯಾಸ ಮಾತ್ರ ಆಕರ್ಷಕವಾಗಿರಬೇಕು ಅನ್ನುವ ಮಹಿಳೆಯರು ಇದಿಗ ವೈವಿಧ್ಯಮಯ ವಿನ್ಯಾಸಗಳ ರವಿಕೆಗಳಿಗೆ ಮನಸೋತಿದ್ದಾರೆ.

ಹೌದು ಇತ್ತೀಚೆಗೆ ಸೀರೆಗಿಂತಲೂ ಆಕರ್ಷಕ ರವಿಕೆ ಫ್ಯಾಷನ್ ಜಗತ್ತಿನಲ್ಲಿ ಹಂಗಾಮ ಸೃಷ್ಟಿಸಿದೆ. ಇವುಗಳಿಗೆ ಇದೀಗ ಎಲ್ಲಿಲ್ಲದ ಬೇಡಿಕೆ. ಬ್ಯಾಕ್‍ಲೆಸ್, ಟೈಯಿಂಗ್, ಬ್ಯಾಕ್‍ಹುಕ್, ಮಿಕ್ಸ್ ಅಂಡ್ ಮ್ಯಾಚ್ ಪ್ಯಾಚ್‍ವರ್ಕ್ ಇನ್ನೂ ಹಲವಾರು ಶೈಲಿಯ ರವಿಕೆಗಳೀಗ ಸೀರೆ ಅಂದ್ರೆ ಮಾರು ದೂರ ಓಡುವವರನ್ನೂ ತನ್ನತ್ತ ಸೆಳೆಯುತ್ತಿದೆ.

ಹೈ ಕಾಲರ್, ಸ್ಟ್ರಾಪಲೆಸ್, ಹಾಲ್ಟರ್ ನಿಮ್ಮ ಸೀರೆ ಚೆಲುವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮಗೂ ಬೋಲ್ಡ್ ಅಂಡ್ ಗ್ಲಾಮರಸ್ ಲುಕ್. ಫ್ಯಾಷನ್ ಅಂದ್ರೆ ಹಿಂದೊಮ್ಮೆ ಮಿಂಚಿ ಮೆರೆಯಾದದ್ದೇ ಮತ್ತೋಮ್ಮೆ ಒಂಚೂರು ಮಾರ್ಪಾಡುಗೊಂಡು ಮತ್ತೆ ಟ್ರೆಂಡ್ ರೂಪದಲ್ಲಿ ಪ್ರತ್ಯಕ್ಷವಾಗುವುದು! ಅದೇ ಆಗಿದ್ದು ಉದ್ದ ತೋಳೀನ ರವಿಕೆ ವಿಷಯದಲ್ಲೂ. ಉದ್ದ ತೋಳಿನ ರವಿಕೆ ಫ್ಯಾಷನ್ ನಿಂತೆ ಹೋಗಿತ್ತು. ಇದೀಗ ಮತ್ತೆ ಮರಳಿ ಬಂದಿದೆ.

 

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ |9986715401

Leave a Reply

Your email address will not be published. Required fields are marked *

Trending

Exit mobile version