ರಾಜಕೀಯ
ಅಚ್ಛೇದಿನ್‌ಗಳಿಗೆ ವಿದಾಯ : ಮೋಡಗಳಾಚೆಯಿಂದ ಮೋದಿ2.0
2019ರ ಸಾರ್ವತ್ರಿಕ ಚುನಾವಣೆಗಳ ತೀರ್ಪು ಎಲ್ಲರನ್ನೂ ಒಳಗೊಳ್ಳುವ ದೇಶ ನಿರ್ಮಾಣಕ್ಕಾಗಿ ನವಭಾರತದಿಂದ ಬಂದಿರುವ ಜನಾದೇಶ ಎಂದಿರುವ ನರೇಂದ್ರ ಮೋದಿಯವರು ತನ್ನ ಎರಡನೇ ಆಡಳಿತಾವಧಿಯಲ್ಲಿ ದುರುದ್ದೇಶದಿಂದ, ಕೆಟ್ಟ ಆಶಯದಿಂದ ಏನನ್ನೂ ಮಾಡುವುದಿಲ್ಲ, ತಪ್ಪು ಮಾಡಬಹುದು, ಆದರೆ ಎಂದೂ ದುರ್ಭಾವನೆಯಿಂದ ಮಾಡುವುದಿಲ್ಲ ಎಂದು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತ ಪ್ರತಿಜ್ಞೆ ಕೈಗೊಂಡಿದ್ದಾರೆ. ಅವರು ಇನ್ನೂ ಎರಡು ಪ್ರತಿಜ್ಞೆಗಳನ್ನು ಮಾಡಿದ್ದಾರೆ. ಅವರ ಕೆಲಸವನ್ನು ವಿಮರ್ಶಿಸುವಾಗ ಇವನ್ನು ಗಮನದಲ್ಲಿಟ್ಟು ಕೊಳ್ಳಬೇಕಂತೆ.
ಏಳು ಸುತ್ತುಗಳ ಸಾರ್ವತ್ರಿಕ ಚುನಾವಣೆಗಳು ಮುಗಿಯುತ್ತಿದ್ದಂತೆ ಬಯಲಿಗೆ ಬಂದಿರುವ ಕೆಲವು ಸಂಗತಿಗಳ ಹಿನ್ನೆಲೆಯಲ್ಲಿ ಈ ಪ್ರತಿಜ್ಞೆಗಳನ್ನು ಪರೀಕ್ಷಿಸಬೇಕು ಎಂಬುದು ಅವರ ಆಶಯವಿರಲಿಕ್ಕಿಲ್ಲ. ಇದು ಬಹುಶಃ ಅಚ್ಚೇ ದಿನ್ ಇತ್ಯಾದಿ ಜುಮ್ಲಾಗಳೇ ಇರದ ಮುಂದಿನ ಐದು ವರ್ಷಗಳಿಗೆ ಮಾತ್ರ ಅನ್ವಯವಾಗುವಂತದ್ದು. ಅದೇನೇ ಇರಲಿ, ಆ ಸಂಗತಿಗಳನ್ನು ನೋಡೋಣ. ಒಬ್ಬ ಟ್ವಿಟರಿಗ ಈ ಪಟ್ಟಿಯನ್ನು ತಯಾರಿಸಿದ್ದಾರೆ :
- ಸಿಬಿಐಬೊಫೊರ್ಸ್ಬಗ್ಗೆಕೋರ್ಟಿನಲ್ಲಿಹಾಕಿರುವಅರ್ಜಿಯನ್ನುಹಿಂತೆಗೆದುಕೊಂಡಿದೆ.
- ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ವಿರುದ್ಧ ಆದಾಯಕ್ಕೆ ಮೀರಿ ಆಸ್ತಿ ಹೊಂದಿರುವ ಕೇಸುಗಳಲ್ಲಿ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ಹೇಳಿದೆ.
- ಚುನಾವಣಾ ಆಯೋಗದ ಒಬ್ಬ ಆಯುಕ್ತರು ಬಹಿರಂಗವಾಗಿ ಭಿನ್ನಮತ ವ್ಯಕ್ತಪಡಿಸಿದ್ದಾರೆ.
- ಪೆಟ್ರೋಲ್ ಬೆಲೆಗಳು ಕೊನೆಯ ಸುತ್ತಿನ ನಂತರ ಮತ್ತೆಏರುತ್ತಿವೆ.
- ನಮೋ ಟಿವಿ ಕಾಣೆಯಾಗಿದೆ.
- ಎಲ್ಲಕ್ಕೂ ಮಿಗಿಲಾಗಿ ಭಾರತೀಯ ವಾಯುಪಡೆ ತನ್ನದೇ ಹೆಲಿಕಾಪ್ಟರನ್ನು ಹೊಡೆದು ಉರುಳಿಸಿರುವುದಾಗಿ ಪರೋಕ್ಷವಾಗಿ ಒಪ್ಪಿಕೊಂಡಿದೆ.
ಈ ಕೊನೆಯದ್ದು ಈ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದಂತೆ ಕಾಣುತ್ತಿರುವ ಫುಲ್ವಾಮ, ಬಾಲಾಕೋಟ್ ಮತ್ತು ರಾಷ್ಟ್ರೀಯ ಭದ್ರತೆಯ ಮಾತುಗಳ ಸಂದರ್ಭದಲ್ಲಿ ಗಮನಾರ್ಹ(ಸಬ್‌ರಂಗ್, ಮೇ 22).
ಫೆಬ್ರುವರಿ 27ರಂದು, ಅಂದರೆ ಫುಲ್ವಾಮ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತೀಯ ವಾಯುಪಡೆಯ ವಿಮಾನಗಳು ಬಾಲಾಕೋಟ್ ಮೇಲೆ ಪ್ರಹಾರ ನಡೆಸಿದ ಮರುದಿನ ಕಾಶ್ಮೀರದ ಬುಡ್ಗಾಮ್‌ನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಒಂದು ಕ್ಷಿಪಣಿ ದಾಳಿಗೆ ಗುರಿಯಾಗಿ. ಅದರಲ್ಲಿದ್ದ ಆರು ಸಿಬ್ಬಂದಿ ಮತ್ತು ಒಬ್ಬ ಭಾರತೀಯ ನಾಗರಿಕ ಮೃತಪಟ್ಟರು. ಆ ವೇಳೆಗೆ ಪಾಕಿಸ್ತಾನೀ ವಾಯುಪಡೆಯ ಎಫ್-೧೬ ವಿಮಾನವನ್ನು ಹೊಡೆದುರುಳಿಸಿದ್ದು ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವಾಪಸಾತಿಯ ಅಬ್ಬರದ ನಡುವೆ ಈ ಸುದ್ದಿ ಮುಚ್ಚಿ ಹೋಯಿತು. ಆದರೆ ಆಗಲೇ ಈ ದುರ್ಘಟವೆ ಫ್ರೆಂಡ್ಲಿ ಪ್ರಹಾರದಿಂದ ಆಗಿರಬಹುದು ಎಂದು ಮಾಜಿ ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಹಾಗೂ ಕೆಲವು ಪತ್ರಿಕೆಗಳು ಗುಮಾನಿ ವ್ಯಕ್ತಪಡಿಸಿದ್ದರು. ಅದರೆ ವಾಯುಪಡೆ ಮತ್ತು ಸರಕಾರ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ.
ಈಗ, ಈ ಬಗ್ಗೆ ತನಿಖೆ ನಡೆದಿದ್ದು, ಈ ದುರ್ಘಟನೆ ನಮ್ಮ ವಾಯುಪಡೆಯ ಲೋಪದಿಂದಲೇ ನಡೆದಿದೆ ಎಂದು ದೃಢ ಪಟ್ಟಿದ್ದರೂ, ಈ ಬಗ್ಗೆ ಚುನಾವಣೆಗಳು ಮುಗಿಯುವ ವರೆಗೆ ನಿಧಾನವಾಗಿ ಮುಂದುವರೆಯಬೇಕು ಎಂದು ‘ಮೇಲಿನಿಂದ’ ಆದೇಶವಿದ್ದುದಾಗಿ ರಕ್ಷಣಾ ವಿಶ್ಲೇಷಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಭಾರತೀಯ ವಾಯುಪಡೆ ಈ ವಿಷಯದಲ್ಲಿ ತನ್ನ ಕೆಲವು ಅಧಿಕಾರಿಗಳ ಮೇಲೆ ‘ಕೊಲೆಯೆಂದಾಗದ ದಂಡನೀಯ ನರಹತ್ಯೆ’ಯ ಆರೋಪ ಹಾಕಲಿರುವುದಾಗಿ ಮೇ 21ರಂದು ಅಂದರೆ ಕೊನೆಯ ಸುತ್ತಿನ ಮತದಾನದ ಎರಡು ದಿನಗಳ ನಂತರ ವರದಿ ಮಾಡಿದವು. ಈಗಾಗಲೇ ಇಬ್ಬರು ಹಿರಿಯ ಅಧಿಕಾರಿಗಳ ಮೇಲೆ ಶಿಸ್ತುಕ್ರಮಗಳನ್ನು ಕೈಗೊಳ್ಳಲಾಗಿದೆಯಂತೆ. ಚುನಾವಣಾ ಸಮರದಲ್ಲಿ, ಆಚಾರ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂಬ ಚುನಾವಣಾಆಯೋಗದಕ್ಲೀನ್ ಚಿಟ್‌ಗಳೊಂದಿಗೆ ಬಾಲಾಕೋಟ್ ಕಾರ್ಯಾಚರಣೆ ಮತ್ತು ಎಫ್-16 ವಿಮಾನ ಹೊಡೆದುರುಳಿಸಿದ ‘ಎದೆಗಾರಿಕೆ’ಯ ಪ್ರಚಾರ ಬಾಚಿಕೊಂಡವರಿಗೆ ಮುಜುಗರವಾಗದಿರಲಿ ಎಂದು ಈ ಸುದ್ದಿ ವಿಳಂಬವಾಗಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದ್ದಾಗಲೇ, ಅಂದರೆ ಮಾದರಿ ಆಚಾರ ಸಂಹಿತೆ ಜಾರಿಯಲ್ಲಿದ್ದಾಗಲೇ ಪರಿಸರ ರಕ್ಷಣೆಯ ಉದ್ದೇಶದಿಂದ ಪ್ರಕಟಿಸಿದ್ದ ‘ಪರಿಸರ ಪರಿಣಾಮ ನಿರ್ಧಾರಣೆ ಅಧಿಸೂಚನೆ, 2016’ರಲ್ಲಿ ಕೈಯಾಡಿಸಿ ಅದನ್ನು ಉದ್ದಿಮೆದಾರರ ಪರವಾಗಿ ಬದಲಿಸುವ ಕಸರತ್ತು ನಡೆದಿದೆ ಎಂದು ವರದಿಯಾಗಿದೆ(ಸ್ಕ್ರಾಲ್.ಇನ್, ಮೇ 24).
ಅಚ್ಛೇ ದಿನ್‌ಗಳ ಅವಧಿಯಲ್ಲಿ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ಸತತವಾಗಿ ನಡೆದಿವೆ ಎಂದೂ ಹೇಳಲಾಗುತ್ತಿತ್ತು. ಇದು ಅರಣ್ಯವಾಸಿಗಳ, ಬುಡಕಟ್ಟು ಜನಗಳ ಮತ್ತು ಅಂಚಿನಲ್ಲಿರುವ ರೈತರ ಹಿತಗಳನ್ನು ಬಲಿಗೊಟ್ಟು ಉದ್ದಿಮೆದಾರರ ಲಾಭಗಳನ್ನು ಹೆಚ್ಚಿಸುವ ಪ್ರಯತ್ನಗಳು ಎಂದು ಬೇರೆ ಹೇಳಬೇಕಾಗಿಲ್ಲ. ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸುಪ್ರಿಂ ಕೋರ್ಟಿನಲ್ಲಿ ಪಟ್ಟಭದ್ರರ ಪರವಾಗಿ ಪ್ರಶ್ನಿಸುತ್ತಿದ್ದಾಗ ಸರಕಾರೀ ವಕೀಲರ ಗೈರುಹಾಜರಿಯಿಂದಾಗಿ ಲಕ್ಷಾಂತರ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲಾರಂಭಿಸಿದ್ದು, ಅದಕ್ಕೆ ತೀವ್ರ ಪ್ರತಿಭಟನೆಯ ನಂತರ ಸರಕಾರ ಎಚ್ಚೆತ್ತುಕೊಂಡು ಸುಪ್ರಿಂ ಕೊರ್ಟಿಗೆ ಧಾವಿಸಿದ್ದು ತೀರಾ ಹಳೆಯ ಸುದ್ದಿಯೇನೂ ಅಲ್ಲ.
ಈ ವಿಷಯ ಮತ್ತೆ ವಿಚಾರಣೆಗೆ ಬರಲಿದೆ. ಜತೆಗೆ ರಫೇಲ್ ವ್ಯವಹಾರದ ಕುರಿತ ಮೊಕದ್ದಮೆಯಲ್ಲಿ ಸರಕಾರ ನ್ಯಾಯಾಲಯವನ್ನು ತಪ್ಪುದಾರಿಗೆಳೆದಿದೆ ಎಂಬುದೂ ವಿಚಾರಣೆಗೆ ಬರಲಿದೆ, ಜತೆಗೆ ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ಪಾರದರ್ಶಕಗೊಳಿಸುವ ಹೆಸರಿನಲ್ಲಿ ತಂದ ಅಪಾರದರ್ಶಕ ಚುನಾವಣಾ ಬಾಂಡು ಎಂಬ ಕ್ರಮದ ವಿಚಾರಣೆಯೂ ಬರಲಿದೆ. ಈ ಎಲ್ಲ ಸಂದರ್ಭಗಳಲ್ಲೂ ಪ್ರಧಾನಿಗಳ ಮೇಲೆ ಹೇಳಿದ ಪ್ರತಿಜ್ಞೆ(ಗಳು) ಹೇಗೆ ಕೆಲಸ ಮಾಡಬಹುದು ಎಂಬುದು ಕುತೂಹಲಕಾರಿ.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243