ರಾಜಕೀಯ
ಮೋದಿ ಜಗತ್ತಿನ ದೊಡ್ಡ ಸುಳ್ಳುಗಾರ : ವೀರಪ್ಪ ಮೊಯಿಲಿ
ಸುದ್ದಿದಿನ,ಗೌರಿಬಿದನೂರು : ಜನರಿಗೆ ಭರವಸೆಗಳನ್ನು ನೀಡಿ ಈಡೇರಿಸದ ಜಗತ್ತಿನ ದೊಡ್ಡ ಸುಳ್ಳುಗಾರ ಮೋದಿ ಎಂದು ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಕಿಡಿಕಾರಿದರು.ಹೊಸೂರು, ವಿದುರಾಶ್ವತ್ಥ ಗ್ರಾಮಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಮಹಾಭಾರತದಲ್ಲಿ ಶಿಶುಪಾಲನು ನೂರು ಸುಳ್ಳು ಹೇಳಿದ ನಂತರ ಶ್ರೀಕೃಷ್ಣ ಸುದರ್ಶನ ಚಕ್ರ ಬಿಡುವ ಮೂಲಕ ಶಿಶುಪಾಲನನ್ನು ವಧೆ ಮಾಡಲಾಗಿತ್ತು. ಹಾಗೆಯೇ ಹಲವಾರು ಸುಳ್ಳು ಭರವಸೆಗಳನ್ನು ನೀಡಿರುವ ಪ್ರಧಾನಿ ಮೋದಿ ಅವರನ್ನು ಲೋಕಸಭಾ ಚುನಾವಣೆಯ ಏ.18ರಂದು ಸುದರ್ಶನ ಚಕ್ರ ಬಿಡುವ ಮೂಲಕ ಪ್ರಧಾನಿ ಸ್ಥಾನದಿಂದ ಮೋದಿಯನ್ನು ಕಿತ್ತು ಹಾಕಬೇಕು ಎಂದರು.
ರಾಜಕೀಯ ದಲ್ಲಿ ನೀತಿಯನ್ನು ಪಾಲಿಸಿಕೊಂಡು ಬರುತ್ತಿರುವ ವ್ಯಕ್ತಿ ನಾನು. ಸುಮಾರು 50 ವರ್ಷಗಳಿಂದ ಒಂದೇ ಪಕ್ಷ ವಾದ ಕಾಂಗ್ರೆಸ್ ನಲ್ಲಿ ಇದ್ದು ನೀತಿಯಿಂದ ಹಾಗೂ ಜನರ ಪ್ರೀತಿ ಯಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಕೃಷಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ತಿಂಗಳಿಗೆ 6 ಸಾವಿರದಂತೆ ವರ್ಷಕ್ಕೆ 72 ಸಾವಿರವನ್ನು ಇಪ್ಪತ್ತೈದು ಕೋಟಿ ಬಡವರಿಗೆ ಈ ಯೋಜನೆ ತಲುಪಲಿದೆ ಎಂದು ವಿವರಿಸಿದರು. ಕೇಂದ್ರದಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದರು.
ಮಹಿಳಾ, ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಮಾತನಾಡಿ ಪ್ರತಿ ಮನೆಗೂ ಬಹು ಅನುಕೂಲವಾಗಿರುವ ಅಡುಗೆ ಅನಿಲಕ್ಕೆ ಯುಪಿಎ ಸರ್ಕಾರವಿರುವಾಗ 350 ಇತ್ತು. ಈಗ ಅದೇ ಗ್ಯಾಸ್ ಸಿಲಿಂಡರ್ ಗೆ 950ತಲುಪಿದೆ.
ರೈತರಿಗೆ ಮೂರು ಕಂತುಗಳಲ್ಲಿ ಎರಡು ಸಾವಿರದಂತೆ ವರ್ಷಕ್ಕೆ 6ಸಾವಿರ ನೀಡುತ್ತಿದ್ದಾರೆ. ಅಂದರೆ ರೈತರಿಗೆ ದಿನಕ್ಕೆ 17 ಭಿಕ್ಷೆಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಯೋಜನೆಯ ವೆಚ್ಚ 282 ಕೋಟಿ ಅದರಲ್ಲಿ ಮೋದಿ ಫೋಟೋ ತೋರಿಸಲು ಜಾಹೀರಾತಿಗಾಗಿ 151 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವ ರೆಡ್ಡಿ, ಜಿಪಂ ಅಧ್ಯಕ್ಷ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.