ದಿನದ ಸುದ್ದಿ

ಮೋದಿ ಭಾಷಣ ಅಸಹಾಯಕ ನಾಯಕನ ಗೋಳಾಟದಂತಿತ್ತು : ಸಿದ್ದರಾಮಯ್ಯ ಲೇವಡಿ

Published

on

ಸುದ್ದಿದಿನ, ಬೆಂಗಳೂರು : ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ಧಿಷ್ಟ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಅಸಹಾಯಕ ನಾಯಕನ ಗೋಳಾಟದಂತಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿಮಾಡಿದರು.

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆಯನ್ನು ನವಂಬರ್ ತಿಂಗಳ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು ಎಂದರು.

ಕೊರೊನಾ ಸೋಂಕಿನ ತೀವ್ರತೆಯನ್ನು ಅವಲೋಕಿಸಿದರೆ ಇದು ಮುಂದಿನ 2-3 ತಿಂಗಳೊಳಗೆ ಕೊನೆಗೊಳ್ಳುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿವಿನ ಸಮಸ್ಯೆ ಭೀಕರವಾಗಲಿದೆ. ಆದ್ದರಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದ್ದ ಅನ್ನಭಾಗ್ಯದ ಮಾದರಿಯಲ್ಲಿ ಇಡೀ ರಾಷ್ಟ್ರದಲ್ಲಿ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಸುವ ಶಾಶ್ವತ ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ದೇಶದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ ಗಳ ತೀವ್ರ ಕೊರತೆ ಇದೆ. ವೈದ್ಯರು,ದಾದಿಯರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದ ಜನ ಕೊರೊನಾ ಸೋಂಕಿಗಿಂತ ಕೊರೊನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಕಿಡಿಕಾರಿದರು.

ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ಪ್ರಧಾನಿಗಳು ಅದರ ಖರ್ಚು-ವೆಚ್ಚದ ಸಂಪೂರ್ಣ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದರು.

ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದ ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಏರಿಕೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು ಎಂದು ಕಿಡಿಕಾರಿದರು.

ಹುತಾತ್ಮ 20 ವೀರಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಘೋಷಿಸಿದ್ದ ಪ್ರಧಾನಿ ಮೋದಿಯವರು, ಇದಕ್ಕಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದರೆ ನೊಂದ ದೇಶದ ಜನತೆ ಮತ್ತು ವೀರಯೋಧರ ಕುಟುಂಬಕ್ಕೆ ಸಾಂತ್ವನ ಮಾಡಿದ ಹಾಗಾಗುತ್ತಿತ್ತು. ಈ ಘಟನೆಯ ಪ್ರಸ್ತಾವವನ್ನೇ ಮಾಡದೆ ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version