ದಿನದ ಸುದ್ದಿ
ಆಹಾರ ಪದಾರ್ಥಗಳ ಬೆಲೆ ಏರಿಕೆ ಪರಿಣಾಮ; ಹಣದುಬ್ಬರವೂ ಏರಿಕೆ
ಸುದ್ದಿದಿನ ಡೆಸ್ಕ್ : ಚಿಲ್ಲರೆ ಹಣದುಬ್ಬರ ಜನವರಿ ತಿಂಗಳಲ್ಲಿ ಅತ್ಯಧಿಕ ಅಂದರೆ ಶೇಕಡ 6.52ಕ್ಕೆ ಏರಿಕೆಯಾಗಿದೆ. ಧಾನ್ಯಗಳು ಮತ್ತು ಪ್ರೋಟೀನ್-ಭರಿತ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ.
ಕಳೆದ ವರ್ಷದ ನವೆಂಬರ್ ಹಾಗೂ ಡಿಸೆಂಬರ್ ಹೊರತುಪಡಿಸಿದರೆ ಚಿಲ್ಲರೆ ಹಣದುಬ್ಬರ ಜನವರಿ ತಿಂಗಳಲ್ಲಿ ಆರ್‌ಬಿಐ ನ ಗರಿಷ್ಠ ಮಿತಿಯಾಗಿರುವ ಶೇಕಡ6 ದಾಟಿದೆ.
ಗ್ರಾಹಕ ದರ ಸೂಚ್ಯಂಕ – ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇಕಡ 5.72 ರಷ್ಟಿತ್ತು. ಜನವರಿಯಲ್ಲಿ ಶೇಕಡ 6.01 ರಷ್ಟಾಗಿತ್ತು. ಇದಕ್ಕೂ ಮುನ್ನ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ದರ ಶೇಕಡ 6.77ಕ್ಕೆ ಏರಿಕೆಯಾಗಿತ್ತು.
ಜನವರಿ ತಿಂಗಳಲ್ಲಿ ತರಕಾರಿಗಳ ಬೆಲೆ ಕುಸಿತ ಕಂಡರೆ, ಇಂಧನ ಹಾಗೂ ವಿದ್ಯುತ್ ಬೆಲೆ ಏರಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ಜನವರಿ ತಿಂಗಳಲ್ಲಿ ಶೇಕಡ 4.19ರಿಂದ ಶೇಕಡ 5.94 ಕ್ಕೆ ಏರಿಕೆಯಾಗಿದೆ ಎಂದು ಆರ್ಥಿಕ ವರದಿಯಲ್ಲಿ ತಿಳಿಸಲಾಗಿದೆ. ಹಣದುಬ್ಬರ ಗ್ರಾಮೀಣ ಭಾಗದಲ್ಲಿ ಶೇ. 6.85ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ.6 ರಷ್ಟಿದೆ.
ಹಣದುಬ್ಬರ ಪ್ರಮಾಣ ಶೇಕಡ 6ಕ್ಕಿಂತಲೂ ಕಡಿಮೆ ಇರಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವಾರ ನಿಗದಿಪಡಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243