ದಿನದ ಸುದ್ದಿ
ಮಂಗನಕಾಯಿಲೆ : ಮಂಕುಬೂದಿ ಎರಚುವ ತಂತ್ರ ಯಾರ ರಕ್ಷಣೆಗಾಗಿ?
ಮಂಗನಕಾಯಿಲೆ ಇದೀಗ ಜಿಲ್ಲೆಯಾದ್ಯಂತ ವ್ಯಾಪಿಸಿರುವುದು ಅಧಿಕೃತವಾಗಿದೆ.ಈ ಹಿಂದೆ ಯಾವುದೋ ಒಂದು ಗ್ರಾಮ, ಪಂಚಾಯ್ತಿ ವ್ಯಾಪ್ತಿಯಲ್ಲಿ ರೋಗ ಕಾಣಿಸಿಕೊಳ್ಳುತ್ತಲೇ ಆರೋಗ್ಯ, ಅರಣ್ಯ ಮುಂತಾದ ಸಂಬಂಧಪಟ್ಟ ಇಲಾಖೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ರೋಗ ತಡೆಯಲಾಗುತ್ತಿತ್ತು. ಅಂತಹ ಹೊಣೆಗಾರಿಕೆಯನ್ನು ಜಿಲ್ಲಾಡಳಿತ ಸಕಾಲದಲ್ಲಿ ನಿರ್ವಹಿಸುವ ಮೂಲಕ ಜೀವಹಾನಿ ತಡೆಯಲಾಗುತ್ತಿತ್ತು.
ಆದರೆ ಈ ಬಾರಿ ಕಳೆದ ಸರಿಸುಮಾರು ಮೂರು ತಿಂಗಳಿನಿಂದ ರೋಗ ತಡೆರಹಿತವಾಗಿ ಹಬ್ಬುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ಪ್ರಮಾಣದಲ್ಲಿ ಸಾವು ಸಂಭವಿಸಿವೆ. ಈಗಲೂ ದಿನಂಪ್ರತಿ ಹತ್ತಾರು ಜನರು ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನೂರಾರು ಮಂದಿ ವಿವಿಧ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂದರೆ ರೋಗ ತಡೆ ಮತ್ತು ಮುಂಜಾಗ್ರತಾ ಕ್ರಮಗಳಲ್ಲಿ ಗಂಭೀರ ಲೋಪಗಳಾಗಿವೆ. ಆರಂಭದಲ್ಲಿ ಎಲ್ಲಾ ಇಲಾಖೆಗಳೂ ರೋಗವನ್ನು ನಿರ್ಲಕ್ಷಿಸಿದ್ದರೂ ಆರು ಸಾವುಗಳ ಬಳಿಕ ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯ್ತಿಗಳ ಕಾಳಜಿಯ ಕಾರಣದಿಂದ ಇದೀಗ ಸ್ಥಳೀಯ ಸಿಬ್ಬಂದಿ ಸಾಕಷ್ಟು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.
ಆದರೆ ಆರಂಭದಲ್ಲಿ ಪದ್ಮಾ ಕೋಮರಾಜ್(ಮೊದಲ ಪ್ರಕರಣ) ಸೇರಿದಂತೆ ಶ್ವೇತಾ ಜೈನ್ ಅವರ ಪ್ರಕರಣಗಳಲ್ಲಿ ಸಂಪೂರ್ಣ ಲೋಪ ಅಗಿರುವುದು ತಾಲೂಕು ಆಸ್ಪತ್ರೆ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗಳಲ್ಲಿ. ಆಸ್ಪತ್ರೆಗಳಲ್ಲಿ ಅದು ಮಂಗನಕಾಯಿಲೆ ಎಂಬುದು ದೃಢಪಟ್ಟ ಬಳಿಕ ಕೂಡ ಅಗತ್ಯ ಚಿಕಿತ್ಸೆ ಮತ್ತು ಕಾಳಜಿ ತೋರುವಲ್ಲಿ ಗಂಭೀರ ಲೋಪವಾಗಿ ಅಮೂಲ್ಯ ಜೀವಗಳು ಬಲಿಯಾದವು.
ಈ ಆಸ್ಪತ್ರೆಗಳಲ್ಲಿ; ಸಾಗರ ಸಾರ್ವಜನಿಕ ಆಸ್ಪತ್ರೆ ಆಡಳಿತ ಹೊಣೆಗಾರಿಕೆ ಅಲ್ಲಿನ ವೈದ್ಯಾಧಿಕಾರಿ ಡಾ ಬೋಸ್ಲೆ ಅವರದ್ದಾದರೆ, ಮೆಗ್ಗಾನ್ ಆಸ್ಪತ್ರೆಯ ಹೊಣೆಗಾರಿಕೆ ನೇರವಾಗಿ ಅದರ ನಿರ್ದೇಶಕ ಡಾ ಲೇಪಾಕ್ಷಿ ಅವರದ್ದು. ಅಂತಿಮವಾಗಿ ಈ ಎರಡೂ ಆಸ್ಪತ್ರೆಗಳು ಜಿಲ್ಲಾಧಿಕಾರಿಗಳ ಅಧಿಕಾರ ವ್ಯಾಪ್ತಿಯಲ್ಲೇ ಇವೆ.
ಅಲ್ಲದೆ ಶ್ವೇತಾ ಜೈನ್ ಸಾವು ಸಂಭವಿಸುವವರೆಗೂ, ಅರಳಗೋಡು ಜನ ಆಕೆಯ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುವವರೆಗೂ ಸ್ವತಃ ಜಿಲ್ಲಾಧಿಕಾರಿಗಳೇ, ಮಂಗನಕಾಯಿಲೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗದಂತೆ ಮತ್ತು ಮೆಗ್ಗಾನ್ ಸೇರಿದಂತೆ ಸರ್ಕಾರಿ ಅಸ್ಪತ್ರೆಗಳಲ್ಲೇ ದಾಖಲಾಗುವಂತೆ ಬಹಿರಂಗ ಸೂಚನೆ ನೀಡಿದ್ದರು.
ಹಾಗಾದರೆ, ನಿರ್ಲಕ್ಷ್ಯ, ಹೊಣೆಗೇಡಿತನದಿಂದಾಗಿ ಸಂಭವಿಸಿರುವ ಸರಣಿ ಸಾವುಗಳ ಹೊಣೆಗಾರಿಕೆ ಹೊರಬೇಕಾದವರು ಸಾಗರದ ತಾಲೂಕು, ಮೆಗ್ಗಾನ್ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಮತ್ತು ಅಂತಿಮವಾಗಿ ಜಿಲ್ಲಾಧಿಕಾರಿಗಳೇ ಅಲ್ಲವಾ?
ಆದರೆ ಆರೋಗ್ಯ ಇಲಾಖೆ ಡಿಎಚ್ಒ ಮತ್ತು ಕೆಎಫ್ಡಿ ವಿಭಾಗದ ವೈದ್ಯರ ತಲೆದಂಡ ನೀಡಿ ತಿಪ್ಪೆಸಾರಿಸುವ ಪ್ರಯತ್ನ ಮಾಡಿದೆ. ನಿಜವಾದ ತಪ್ಪಿತಸ್ಥರನ್ನು ರಕ್ಷಿಸುವ ಮತ್ತು ಅದೇ ಹೊತ್ತಿಗೆ ಜನರಕಣ್ಣಿಗೆ ಮಂಕುಬೂದಿ ಎರಚಿ ಜನರನ್ನು ಮಂಗಮಾಡುವ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳಬೇಕಿದೆ.
–ಶಶಿ ಸಂಪಳ್ಳಿ
(ಇವರ ಗಮನಕ್ಕೆ : ಕೆಎಫ್ ಡಿ ಜನಜಾಗೃತಿ ಒಕ್ಕೂಟ,Chief Minister of Karnataka chief secretary of Karnataka, NHRCB, Bjp Shivamogga KPCCPresident, Kpcc Dinesh Gundu Rao)
ಸುದ್ದಿದಿನ.ಕಾಂ|ವಾಟ್ಸಾಪ್|9986715401