ದಿನದ ಸುದ್ದಿ
ಬೆಳಗಿನ ಸಂಕ್ಷಿಪ್ತ ಸುದ್ದಿಗಳು
ಬೆಳಗಿನ ಸಂಕ್ಷಿಪ್ತ ಸುದ್ದಿಗಳು
- ಹಾವೇರಿಯಲ್ಲಿ ಬರುವ ಸೆಪ್ಟೆಂಬರ್ 23ರಿಂದ 3ದಿನಗಳ ಕಾಲ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಬಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
- ಪ್ರಜಾಪ್ರಭುತ್ವದ ಯಶಸ್ಸಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದ ವಿವಿಧ ಸಾಮಾಜಿಕ ವ್ಯವಸ್ಥೆಯ ನಡುವೆಯೂ ದೇಶದ ಭವಿಷ್ಯ ಬದ್ಧವಾಗಿರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
- ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿ ಮುಂಚೂಣಿಯಲ್ಲಿದ್ದು, ಈ ಮೂಲಕ ಶೈಕ್ಷಣಿಕ ಗುಣಮಟ್ಟದಲ್ಲ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸಹಕಾರಿಯಾಗಲಿದೆ. ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹರಿಹರದಲ್ಲಿ ಹೇಳಿದ್ದಾರೆ.
- ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಹಾಗೂ ಜವಹರಲಾಲ್ ನೆಹರು ತಾರಾಲಯ ಜಂಟಿಯಾಗಿ ಶೂನ್ಯ ನೆರಳಿನ ದಿನದ ಅಂಗವಾಗಿ ವಿಜ್ಞಾನ ಚಟುವಟಿಕೆಗಳ ಕಾರ್ಯಕ್ರಮವನ್ನು ಜವಹರಲಾಲ್ ನೆಹರು ತಾರಾಲಯದಲ್ಲಿ ಇಂದು ಮಧ್ಯಾಹ್ನ ಹಮ್ಮಿಕೊಳ್ಳಲಾಗಿದೆ.
- ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ವತಿಯಿಂದ ಏರ್ಪಡಿಸಿರುವ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ 20ನೇ ದ್ವೈವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭ ಇಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯಲಿದೆ. ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್, ದಿನೇಶ್ ಮಾಹೇಶ್ವರಿ, ಅಭಯ್ ಎಸ್ ಓಕಾ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
- ನವದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ನಾಳೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಬೃಹತ್ ಯೋಗ ಕಾರ್ಯಕ್ರಮ ಯೋಗ ಪ್ರಭಾ ವನ್ನು ಆಯೋಜಿಸಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವಾಲಯದ 500ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಅದರ ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
- ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಸ್ಪಷ್ಟಪಡಿಸಿದ್ದಾರೆ.
- ಮುಂಬೈನ ಬ್ರೇಬೌರ್ನ್ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ‍್ಸ್ ಹೈದರಾಬಾದ್ ತಂಡ 9 ವಿಕೆಟ್‌ಗಳಿಂದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದ ವಿರುದ್ಧ ನಿರಯಾಸ ಗೆಲುವು ದಾಖಲಿಸಿತು. ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮೊತ್ತೊಂದು ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 8ರನ್‌ಗಳಿಂದ ಕೊಲ್ಕತ್ತಾ ನೈಟ್ ರೈಡರ‍್ಸ್ ತಂಡದ ವಿರುದ್ಧ ಜಯಗಳಿಸಿತು.
- ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿ ಅವರನ್ನು ಬರಮಾಡಿಕೊಂಡರು. ರಾಜ್ಯ ಕ್ರೀಡಾ ಸಚಿವ ಡಾ. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.
- ಕೇಂದ್ರ ವಾರ್ತಾ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಸಂಜೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
- ಏಕ ಭಾರತ; ಶ್ರೇಷ್ಠ ಭಾರತ ನಿರ್ಮಿಸಲು ಯುವ ಜನತೆ ಮುಂದಾಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ೪೦ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಪಾಲರು, ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢ ಹೆಜ್ಜೆ ಇಡಬೇಕು ಎಂದರು.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ತಿಂಗಳ 25ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಬೆಳೆ ಖರೀದಿಸಲು ನೋಂದಣಿ ಪ್ರಕ್ರಿಯೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದ್ದಾರೆ. ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
- ಕೇಂದ್ರ ಸರಕಾರದ ಮಹಾತ್ಮಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ-ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ವಿಜಯಪುರದಲ್ಲಿ ಆಯೋಜಿಸಿರುವ ಎರಡು ದಿನಗಳ ಕಾಲ ರಾಜ್ಯಮಟ್ಟದ ನಿಂಬೆ ಉತ್ಸವ-2022ಕ್ಕೆ ಶಾಸಕ ರಮೇಶ ಭೂಸನೂರ ಇಂದು ಚಾಲನೆ ನೀಡಿದರು. ಜಿಲ್ಲೆಯ ನಿಂಬೆ ಬೆಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸೂಕ್ತ ಸ್ಥಾನಮಾನ ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243