ದಿನದ ಸುದ್ದಿ
ಬೆಳಗಿನ ಸುದ್ದಿ ಮುಖ್ಯಾಂಶಗಳು
- ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಆಯಾ ಹಾಲು ಒಕ್ಕೂಟ ತನ್ನ ಲಾಭಾಂಶದಲ್ಲಿ ರೈತರಿಗೆ ಪಾಲು ಕೊಡಬಹುದು, ಆದರೆ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
- ಗದಗ ಜಿಲ್ಲೆಯ ನಾಗಾವಿ ಗ್ರಾಮದ ’ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ’ದ ಆವರಣದಲ್ಲಿ ಗೋಶಾಲೆ ನಿರ್ಮಾಣಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ನಿನ್ನೆ ಚಾಲನೆ ನೀಡಿದರು.
- ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್‌ನ ಅಡಾಲಜ್‌ನಲ್ಲಿರುವ ಅನ್ನಪೂರ್ಣಧಾಮದ ಹಾಸ್ಟೆಲ್ ಮತ್ತು ಶೈಕ್ಷಣಿಕ ಸಂಕೀರ್ಣವನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ ಜನಸಹಾಯಕ ಟ್ರಸ್ಟ್‌ನ ಹೀರಾಮಣಿ ಆರೋಗ್ಯಧಾಮಕ್ಕೂ ಪ್ರಧಾನಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
- ಆಜಾದಿ ಕಾ ಅಮೃತ ಮಹೋತ್ಸವ್ ಹಿನ್ನೆಲೆಯಲ್ಲಿ ಎರಡು ದಿನಗಳ ’ಅಮೃತ ಸಮಾಗಮ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಇಂದು ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತಿತರರು ಭಾಗವಹಿಸಲಿದ್ದಾರೆ.
- ಮುಂಬೈನಲ್ಲಿ ಇಂದು ನಡೆಯಲಿರುವ ಪಶ್ಚಿಮ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾಗಿದಾರರ ವಿಭಾಗೀಯ ಸಮಾವೇಶದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ವಹಿಸಲಿದ್ದಾರೆ. ಮುಂದಿನ ೫ ವರ್ಷಗಳಲ್ಲಿ ಎರಡನೇ ಹಂತದ ಪೋಷಣ್ ಅಭಿಯಾನ, ಶಕ್ತಿ ಮತ್ತು ಮಿಷನ್ ವಾತ್ಸಲ್ಯ ಯೋಜನೆಗಳ ಪರಿಣಾಮಕಾರಿ ಜಾರಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದೊಂದಿಗೆ ಈ ಸಮಾವೇಶ ಆಯೋಜಿಸಲಾಗಿದೆ.
- ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ನಾಳೆ (13) ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಖನಿಜಾನ್ವೇಷಣಾ ಟ್ರಸ್ಟ್-ಎನ್‌ಎಂಇಟಿ ೪ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಗಣಿ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಮತ್ತಿತರರು ಭಾಗವಹಿಸಲಿದ್ದಾರೆ.
- ಬೆಂಗಳೂರಿನ ’ಕೇಂದ್ರೀಯ ತಯಾರಿಕಾ ತಂತ್ರಜ್ಞಾನ ಸಂಸ್ಥೆ’-ಸಿಎಂಟಿಐ ಸಂಸ್ಥೆಯಲ್ಲಿಂದು ಎಸ್‌ಟಿಡಿಸಿ ಘಟಕವನ್ನು ಕೇಂದ್ರ ಭಾರಿ ಕೈಗಾರಿಕಾ ಖಾತೆ ಸಚಿವ ಡಾ. ಮಹೇಂದ್ರನಾಥ್ ಪಾಂಡೆ ಲೋಕಾರ್ಪಣೆ ಮಾಡಲಿದ್ದಾರೆ. ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಕಿಶನ್ ಪಾಲ್ ಗೂರ್ಜರ್ ಅವರು ’ಹೀಲಿಯಂ ಬಲೂನು’ ಘಟಕ ಉದ್ಘಾಟಿಸಲಿದ್ದಾರೆ.
- ರಾಜ್ಯದಲ್ಲಿ ಬಿತ್ತನೆ ಹಂಗಾಮು ಪ್ರಾರಂಭವಾಗುವುದಕ್ಕೂ ಮುನ್ನ ರೈತರಿಗಾಗಿ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಕಳಪೆ ಗುಣಮಟ್ಟದ ಬಿತ್ತನೆಬೀಜ ಹಾಗೂ ರಸಗೊಬ್ಬರ ಕಂಡು ಬಂದಲ್ಲಿ ಅಂತಹ ಅಂಗಡಿಯ ಲೈಸನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
- ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ9ನೇ ಘಟಿಕೋತ್ಸವ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾಲಯದ 30ನೇ ನುಡಿಹಬ್ಬ ಇಂದು ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಹಾಗೂ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ.
- ಸಹಕಾರ ನೀತಿ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ದೆಹಲಿಯಲ್ಲಿ ಇಂದು ಆರಂಭಗೊಳ್ಳಲಿದ್ದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಪ್ರತಿನಿಧಿಗಳು, ಸುಮಾರು ೪೦ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿವಿಧ ರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
- ಟ್ಯಾಂಕ್ ನಿರೋಧಕ ’ಹೆಲಿನಾ’ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಡಿಆರ್‌ಡಿಒ ವಿಜ್ಞಾನಿಗಳ ತಂಡ, ಭಾರತೀಯ ಭೂಸೇನಾ ಪಡೆ ಮತ್ತು ವಾಯುಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ನಿನ್ನೆ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
- ಈ ವರ್ಷದ ಅಮರನಾಥ ಯಾತ್ರೆಗೆ ನಿನ್ನೆಯಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಹಿಮಾಲಯ ತಪ್ಪಲಿನ ಗುಹಾಂತರ ದೇವಾಲಯಕ್ಕೆ ಜೂನ್30 ರಿಂದ ಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 11ರಂದು ಕೊನೆಗೊಳ್ಳಲಿದೆ.
- ಖೇಲೋ ಇಂಡಿಯಾ ಎರಡು ದಿನಗಳ ರಾಷ್ಟ್ರೀಯ ಮಹಿಳಾ ಆರ್ಚರಿ ಟೂರ್ನಿ ಜೆಮ್‌ಶೆಡ್‌ಪುರದಲ್ಲಿ ಇಂದು ಆರಂಭಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243