ದಿನದ ಸುದ್ದಿ

ಬಹುತೇಕ ಶಾಂತಿಯುತ ಮತದಾನ

Published

on

ಸುದ್ದಿದಿನ, ಬೆಂಗಳೂರು : ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಇಂದು ಬಹುತೇಕವಾಗಿ ಶಾಂತಿಯುತ ಮತದಾನವಾಗಿದೆ.

224 ವಿಧಾನಸಭಾ ಕ್ಷೇತ್ರಗಳಲ್ಲಿ ಸುಗಮ ಹಾಗೂ ನ್ಯಾಯಸಮ್ಮತ ಮತದಾನಕ್ಕೆ 58 ಸಾವಿರದ 545 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆ ಪೈಕಿ 11 ಸಾವಿರದಕ್ಕೂ ಹೆಚ್ಚು ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿತ್ತು. 184 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 2 ಸಾವಿರದ 615 ಉಮೇದುವಾರರು ಕಣದಲ್ಲಿದ್ದರು.

5 ಕೋಟಿ 31 ಲಕ್ಷ 33 ಸಾವಿರಕ್ಕೂ ಹೆಚ್ಚು ಮತದಾರರಿಗೆ ಮತಚಲಾಯಿಸಲು ಆಯೋಗ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ಮತದಾನದ ಭದ್ರತೆಗಾಗಿ ಅರೆಸೇನೆ, ಕೇಂದ್ರ ಕಾಯ್ದಿಟ್ಟ ಪಡೆ, ರಾಜ್ಯ ಕಾಯ್ದಿಟ್ಟ ಪಡೆ, ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಸುಮಾರು 2 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಮತದಾನದ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಎಲ್ಲ 224 ಕ್ಷೇತ್ರಗಳಲ್ಲಿ, 70 ರಿಂದ 72 ಪ್ರತಿಶತ ಮತದಾನವಾಗಿವೆ. ಕಳೆದ ಬಾರಿ ಶೇಕಡ 72.36ರಷ್ಟು ಮತದಾನವಾಗಿತ್ತು.
ರಾಜ್ಯದ ವಿವಿಧ ಪಕ್ಷಗಳ ಗಣ್ಯರು, ಸಂಸದರು, ಶಾಸಕರು, ಕೇಂದ್ರ ಸಚಿವರು, ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದ್ದು, ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಟ್ರಾಂಗ್ ರೂಮ್‌ನಲ್ಲಿ ವ್ಯಾಪಕ ಭದ್ರತೆ ನಡುವ ಸುರಕ್ಷಿತವಾಗಿ ಇಡಲಾಗಿದೆ. ಸ್ಟ್ರಾಂಗ್ ಸುತ್ತಮುತ್ತಲೂ ವ್ಯಾಪಕ ಬಂದೊಬಸ್ತ್ ಕೈಗೊಳ್ಳಲಾಗಿದೆ. ಇದೇ 13 ರಂದು ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ನಂತರ ಫಲಿತಾಂಶ ಪ್ರಕಟವಾಗುವ ಸಂಭವವಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version