ದಿನದ ಸುದ್ದಿ
ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮನವಿ
ಸುದ್ದಿದಿನ,ಶಿವಮೊಗ್ಗ : ಭದ್ರಾವತಿಯ ವಿ.ಐ.ಎಸ್.ಎಲ್. ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ಜಿಲ್ಲೆಯ ವಿವಿಧ ಆದ್ಯತಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಹೆಚ್ಚಿನ ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅವರು ಇಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಅವರು, ಪ್ರಸ್ತುತ ಭದ್ರಾವತಿಯಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಯು ಹೆಚ್ಚಿನ ಮೌಲ್ಯವುಳ್ಳ ಆತ್ಯಾಧುನಿಕ ತಂತ್ರಜ್ಞಾನಾಧಾರಿತ ಉಕ್ಕನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದ್ದು, ಈ ಕೈಗಾರಿಕೆಯನ್ನು ಲಾಭದಾಯಕವಾಗಿ ನಡೆಸಲು ಇನ್ನಷ್ಟು ಅತ್ಯಾಧುನಿಕವಾದ ಯಂತ್ರೋಪಕರಣಗಳು ಸೇರಿದಂತೆ ವಿವಿಧ ಅವಶ್ಯಕ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದವರು ನುಡಿದರು.
ಇದನ್ನೂ ಓದಿ | ಉತ್ತರಾಖಂಡದ ನೂತನ ಸಿಎಂ ಆಗಿ ಬಿಜೆಪಿ ಸಂಸದ ತಿರಥ್ ಸಿಂಗ್ ರಾವತ್
ಈ ಕೈಗಾರಿಕೆಯಲ್ಲಿನ ಉಕ್ಕು ಉತ್ಪಾದನಾ ಘಟಕಗಳಲ್ಲಿ ಬಂಡವಾಳ ಹೂಡಿಕೆ ಮಾಡಿ, ಹೆಚ್ಚಿನ ಮೌಲ್ಯವುಳ್ಳ ಉಕ್ಕಿನ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಮಧ್ಯಮ ಹಾಗೂ ದೀರ್ಘಕಾಲದ ಅವಧಿಯಲ್ಲಿ, ಉಕ್ಕು ಉತ್ಪಾದನೆಯ ಪ್ರಕ್ರಿಯೆಯನ್ನು ಆಧುನಿಕ ವ್ಯವಸ್ಥೆಗೆ ಪೂಕರವಾಗಿ ನವೀಕರಿಸಿ, ಸಿಂಟರ್ ಪ್ಲಾಂಟ್, ಕೋಕ್ ಓವನ್ ಹಾಗೂ ಆಧುನೀಕರಿಸಿದ ಸ್ಟೀಲ್ ಕರಗುವ ಘಟಕದ (SMS) ಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರತಿಸ್ಪರ್ಧಿಗಳಲ್ಲಿ ಲಭ್ಯವಿರುವ ಮಟ್ಟಕ್ಕೆ ವಿ.ಐ.ಎಸ್.ಎಲ್. ಘಟಕವನ್ನು ಕೊಂಡೊಯ್ಯುವ ಅಗತ್ಯವಿದೆ ಎಂದ ಅವರು, ಖಾಸಗೀ ಬಂಡವಾಳಗಾರರನ್ನು ಆಕರ್ಷಿಸಿ ವಿ.ಐ.ಎಸ್.ಎಲ್ ಅನ್ನು ಪುನರ್ ಆರಂಭ ಮಾಡಲು ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿಕೊಂಡಿದ್ದು, ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದವರು ತಿಳಿಸಿದ್ದಾರೆ.
ಅಂತೆಯೇ ಜಿಲ್ಲೆಯಲ್ಲಿ ಎಲ್.ಇ.ಡಿ. ಬಲ್ಬ್, ಟೆಕ್ಸ್‍ಟೈಲ್ ಪಾರ್ಕ್, ಆಹಾರ ಸಂಸ್ಕರಣಾ ಘಟಕಗಳು ಮತ್ತು ಇ.ಎಸ್.ಡಿ.ಎಂ. (Electronics System Design & Manufacturing) ಕೈಗಾರಿಕಾ ಕೇಂದ್ರಗಳ ಮುಖಾಂತರ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡಲೂ ಸಹ ಮನವಿ ಮಾಡಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243