ದಿನದ ಸುದ್ದಿ
ಶಿವಮೊಗ್ಗ | ಮಿಂಚಿನ ನೋಂದಣಿ ಅಭಿಯಾನ: ಜಿಲ್ಲಾಧಿಕಾರಿ ಕೆ.ಎ. ದಯಾನಂದ್
ಸುದ್ದಿದಿನ, ಶಿವಮೊಗ್ಗ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗಾಗಿ ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಫೆಬ್ರವರಿ 23 ಮತ್ತು 24ರಂದು ಹಾಗೂ ಮಾರ್ಚ್ 2ಮತ್ತು 3ರಂದು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮತದಾರರ ಮಿಂಚಿನ ನೋಂದಣಿ ಅಭಿಯಾನದ ದಿನಗಳಲ್ಲಿ ಎಲ್ಲಾ ಬಿಎಲ್‍ಒಗಳು ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಲಭ್ಯವಿರಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಇನ್ನೂ ಹೆಸರು ನೊಂದಾಯಿಸಿಕೊಳ್ಳದೇ ಇರುವವರು ಅರ್ಜಿ ನಮೂನೆ 6ನ್ನು ಪಡೆದು ಭರ್ತಿ ಮಾಡಿ ಸ್ಥಳದಲ್ಲಿಯೇ ಸಲ್ಲಿಸಬಹುದಾಗಿದೆ ಎಂದರು.
ಈ ಬಾರಿ 18-19 ವರ್ಷದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವಯೋಮಾನದ 25554 ಮತದಾರರು ಮಾತ್ರ ಇದುವರೆಗೆ ತಮ್ಮ ಹೆಸರು ನೊಂದಾಯಿಸಿದ್ದಾರೆ. 2011ರ ಜನಗಣತಿ ಪ್ರಕಾರ ಇದೀಗ ಜಿಲ್ಲೆಯಲ್ಲಿ ಅಂದಾಜು 65ಸಾವಿರ 18-19ರ ವಯೋಮಾನದವರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸದೇ ಇರುವ ಯುವ ಮತದಾರರನ್ನು ಗುರುತಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ. ಇದೇ ರೀತಿ ಎಲ್ಲಾ ಕಾಲೇಜುಗಳಲ್ಲಿ ಮತದಾರರ ನೋಂದಣಿಗೆ ವಿಶೇಷ ಅಭಿಯಾನ ರೂಪಿಸಲಾಗಿದೆ. ಎಲ್ಲಾ ಕಾಲೇಜುಗಳಲ್ಲಿ ಚುನಾವಣಾ ರಾಯಭಾರಿಗಳನ್ನು ನೇಮಕ ಮಾಡಲಾಗಿದ್ದು ಅವರಿಗೆ ತರಬೇತಿ ನೀಡಲಾಗಿದೆ ಎಂದರು.
1950 ಸಹಾಯವಾಣಿ: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮತ್ತಿತರ ಚುನಾವಣಾ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯಲು ಅಥವಾ ಅಹವಾಲುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಈ ಕೇಂದ್ರ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಸಹಾಯವಾಣಿ ದೂರವಾಣಿ 1950 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಅಹವಾಲು ಸಲ್ಲಿಸಬಹುದಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 350 ಕರೆಗಳನ್ನು ಸ್ವೀಕರಿಸಲಾಗಿದ್ದು, ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು.
ಚುನಾವಣಾ ಆಯೋಗ CHUNAVANA ಎಂಬ ಮೊಬೈಲ್ ಆಪ್ ಸಿದ್ಧಪಡಿಸಿದ್ದು, ಇದನ್ನು ಡೌನ್‍ಲೋಡ್ ಮಾಡಿಕೊಂಡು ಮತಗಟ್ಟೆ ವಿವರಗಳು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಮತದಾರರ ಗುರುತಿನ ಚೀಟಿ ಸಂಖ್ಯೆ ಮಾತ್ರವಲ್ಲದೆ ಕೇವಲ ತಮ್ಮ ಹೆಸರನ್ನು ನಮೂದಿಸಿ ಸರ್ಚ್ ಮಾಡುವ ಅವಕಾಶವೂ ಇಲ್ಲಿದೆ. ತಮ್ಮ ಮತಗಟ್ಟೆಗಳ ನಿರ್ದಿಷ್ಟ ಸ್ಥಳವನ್ನು ಗುರುತಿಸಲು ಜಿಪಿಎಸ್ ಸರ್ಚ್ ಸೌಲಭ್ಯವೂ ಇದರಲ್ಲಿದೆ ಎಂದು ಅವರು ಹೇಳಿದರು.
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನದ ಪ್ರಮಾಣ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ. ಈ ಬಾರಿ ಪ್ರಥಮ ಸ್ಥಾನ ಗಳಿಸುವ ಗುರಿ ಹೊಂದಲಾಗಿದ್ದು, ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸುವ ಮೂಲಕ ಈ ಗುರಿ ಸಾಧನೆಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401