ದಿನದ ಸುದ್ದಿ

ಮೈಸೂರಿನಲ್ಲಿ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ

Published

on

ಸುದ್ದಿದಿನಡೆಸ್ಕ್:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ನಿವೇಶನ ಹಂಚಿಕೆಯ ಪ್ರಮುಖ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

50:50 ಅನುಪಾತದ ಯೋಜನೆಯ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅಕ್ರಮವಾಗಿ 14ನಿವೇಶನಗಳನ್ನು ಪಡೆದಿದ್ದಾರೆ ಹಾಗೂ ಮುಡಾದಲ್ಲಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹ ಕೃಷ್ಣ ಅವರು ಇಡಿ ಸಂಸ್ಥೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇಂದು ಬೆಳಗ್ಗೆ ಮೈಸೂರು ನಗರಾಭಿವೃದ್ಧಿ ಕಚೇರಿ ತೆರೆಯುತ್ತಿದ್ದಂತೆಯೇ ಇಡಿ ಅಧಿಕಾರಿಗಳ ಆಗಮನವಾಯಿತು.

ಇಂದು ಮತ್ತು ನಾಳೆ ಕಡತಗಳ ಪರಿಶೀಲನೆ ಮುಂದುವರೆಯಲಿದೆ. ಈಗಾಗಲೇ ಅಧಿಕಾರಿಗಳು ಕೇಳಿರುವ ಎಲ್ಲ ದಾಖಲಾತಿಗಳನ್ನು ಮುಡಾದ ಅಧಿಕಾರಿಗಳು ಒದಗಿಸುತ್ತಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯ ಬಿಗಿಭದ್ರತೆಯೊಂದಿಗೆ ಇಡಿ ಅಧಿಕಾರಿಗಳ ತಂಡದ ಕಲಾಪ ಪ್ರಗತಿಯಲ್ಲಿದೆ. ಇಡಿ ತಂಡದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದಾರೆ.

ಮತ್ತೊಂದೆಡೆ, ಮುಡಾ ಪ್ರಕರಣದ 4ನೇ ಆರೋಪಿ ದೇವರಾಜು ಅವರ ಬೆಂಗಳೂರು ಕೆಂಗೇರಿ ನಿವಾಸದ ಮೇಲೂ ಇಡಿ ಅಧಿಕಾರಿಗಳ ತಂಡದ ದಾಳಿ ನಡೆಯುತ್ತಿದೆ. ಈ ನಡುವೆ, ಮೈಸೂರು ಪ್ರಾಧಿಕಾರದ ಕಚೇರಿ ಮೇಲೆ ಜಾರಿನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವುದು ಒಂದು ಬೆದರಿಕೆಯ ತಂತ್ರವಾಗಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಇದು ದುರುದ್ದೇಶ ಪೂರ್ವಕ, ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಅವರು ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version