ನೆಲದನಿ

ನೆಲದ ನೋವಿಗೆ ಮಿಡಿವ ಬೌದ್ಧ ಚಿಂತಕ ‘ಡಾ.ಮೂಡ್ನಾಕೂಡು ಚಿನ್ನಸ್ವಾಮಿ’

Published

on

  • ಡಾ.ಕೆ.ಎ.ಓಬಳೇಶ್

ಭಾರತದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ತೋರಿದ ಬೌದ್ಧದರ್ಶನದ ಜಾಡುಹಿಡಿದು ವೈಚಾರಿಕ ಮಾರ್ಗವನ್ನು ಕಂಡುಕೊಳ್ಳುವ ನೆಲೆಯಲ್ಲಿ ಹಲವರು ಬೌದ್ಧ ಚಿಂತನೆಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಬಾಬಾಸಾಹೇಬರ ಬೌದ್ಧದರ್ಶನದ ಪ್ರಭಾವವು ಕನ್ನಡದ ಹಲವಾರು ವಿಚಾರವಾದಿಗಳ ಸೈದ್ಧಾಂತಿಕ ನೆಲೆಗೆ ವೇದಿಕೆಯನ್ನು ರೂಪಿಸಿದೆ.

ಹೀಗೆ ಬಾಬಾಸಾಹೇಬರು ತೋರಿದ ಬೌದ್ಧ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಕಾಲೀನ ಸಮಾಜದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿರುವ ಬೌದ್ಧ ಚಿಂತಕರಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರು ಪ್ರಮುಖರಾಗಿದ್ದಾರೆ. ಮೂಡ್ನಾಕೂಡು ಚಿನ್ನಸ್ವಾಮಿಯವರು ಬುದ್ಧ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಸಮಾಜದ ಮುಂದಿಡುತ್ತ ಬಂದಿದ್ದಾರೆ. ಶೋಷಿತ ಸಮುದಾಯದ ದನಿಯಾಗಿ ನಿಂತು ಹಲವಾರು ಸಂಘಟನೆ ಮತ್ತು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕುವುದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತ ತಮ್ಮ ಚಿಂತನಧಾರೆಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಸಮಕಾಲೀನ ಸಮಾಜದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ ಬುದ್ಧನ ಜೀವಪರ ನಿಲುವುಗಳೊಂದಿಗೆ ಅನುಸಂಧಾನಕ್ಕೆ ಮುಂದಾಗಿದ್ದಾರೆ. ಇಂತಹ ವೈಚಾರಿಕ ಅನುಸಂಧಾನದ ನೆಲೆಗಳು ಇವರ ಬಹುತೇಕ ಸಾಹಿತ್ಯ ಕೃತಿಗಳಲ್ಲಿ ಪ್ರತಿಪಾದಿತವಾಗಿವೆ. ಇಂತಹ ನೆಲಮೂಲ ಚಿಂತನೆಯ ಪ್ರತೀಕವಾದ ಮೂಡ್ನಾಕೂಡು ಚಿನ್ನಸ್ವಾಮಿಯರನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಆಶಯವಾಗಿದೆ.

ಶ್ರೀಯುತರು 22 ಸೆಪ್ಟಂಬರ್ 1954ರಂದು ಚಾಮನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ ಬಸವರಾಜಯ್ಯ ಹಾಗೂ ಗೌರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಬಾಲ್ಯದ ದಿನಗಳಿಂದಲೂ ಬಡತನ ಹಾಗೂ ಅಸ್ಪೃಶ್ಯತೆಯ ಕರಾಳತೆಯನ್ನು ಕಂಡುಂಡು ಬೆಳೆದ ಇವರು, ಇಂತಹ ಅಮಾನವೀಯ ಅಂಶಗಳನ್ನು ತಮ್ಮ ಚಿಂತನೆಗಳ ಮೂಲಕ ಪ್ರತಿರೋಧಿಸುತ್ತ ಬಂದವರು.

ಉದ್ಯೋಗದ ತುಡಿತದಿಂದಾಗಿ ಎಂ.ಕಾಂ ಪದವಿಯನ್ನು ಪಡೆದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಲೇ ಸಾಹಿತ್ಯದಲ್ಲಿ ವಿಶೇಷವಾದ ಆಸಕ್ತಿಯನ್ನು ರೂಡಿಸಿಕೊಂಡರು. ತನ್ನ ಬದುಕಿನ ನಿರ್ವಹಣೆಗಾಗಿ ಎಂ.ಕಾಂ ಪದವಿಯ ವೃತ್ತಿಯನ್ನು ಆಸರೆಯಾಗಿಟ್ಟುಕೊಂಡು, ಸಾಮಾಜಿಕ ತುಡಿತದ ಭಾಗವಾಗಿ ಸಾಹಿತ್ಯವನ್ನು ಪ್ರವೃತ್ತಿಯಾಗಿ ಮುನ್ನೆಡಿಸಿಕೊಂಡು ಬಂದರು.

ಶ್ರೀಯುತರು ತಮ್ಮ ವೃತ್ತಿ ಬದುಕಿಗಿಂತ ಸಮಸಮಾಜ ನಿರ್ಮಾಣಕ್ಕಾಗಿ ತುಡಿತ ಸಾಹಿತ್ಯದ ಪ್ರವೃತ್ತಿಯ ಮೂಲಕವೇ ಹೆಚ್ಚು ಗುರುತಿಸಿಕೊಂಡವರು. ಬಾಲ್ಯದ ದಿನಗಳಿಂದಲೂ ಅನುಭವಿಸಿಕೊಂಡು ಬಂದ ಅಸ್ಪøಶ್ಯತೆಯ ಕರಾಳತೆಯೇ ಇವರ ಜೀವಪರ ಚಿಂತನೆಗಳಿಗೆ ಹೆಚ್ಚು ಪ್ರೇರಣೆಯನ್ನು ನೀಡಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಬುದ್ಧನತ್ತ ಮುಖ ಮಾಡಿದವರು. ಬುದ್ಧನ ಮಾರ್ಗವೇ ಸ್ವಾಭಿಮಾನಕ್ಕೆ ದಾರಿ ಎಂಬುದನ್ನು ಅಂಬೇಡ್ಕರ್ ಚಿಂತನೆಗಳಿಂದ ಅರಿತವರು.

ಆ ಮೂಲಕ ಶೋಷಿತ ಸಮುದಾಯಗಳಲ್ಲಿ ಮನೆ ಮಾಡಿಕೊಂಡಿರುವ ಬಡತನ, ಜಾತಿಯತೆ, ಅಸ್ಪೃಶ್ಯತೆ, ಮೂಢನಂಬಿಕೆಗಳ ವಿಮೋಚನೆಗೆ ಬಿಡುಗಡೆಯ ಭಾಗವಾಗಿ ಬುದ್ಧ ಮತ್ತು ಅಂಬೇಡ್ಕರ್ ಅವರನ್ನು ಅಪ್ಪಿಕೊಂಡವರು. ತಾವು ಕಂಡುಕೊಂಡ ವೈಚಾರಿಕ ಅಂಶಗಳನ್ನು ಸಾಹಿತ್ಯದ ಮೂಲಕ ಜನತೆಗೆ ತಲುಪಿಸುವ ಮಹತ್ತರ ಕಾರ್ಯವನ್ನು ಇವರು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಸಾಹಿತ್ಯದ ಮೇಲಿನ ಆಸಕ್ತಿಯಿಂದಾಗಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಸಾಹಿತ್ಯ ಸೇವೆಗೆ ಡಿ.ಲಿಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ, ‘ಕೆಂಡ ಮಂಡಲ’ ‘ಬಹುರೂಪಿ’ ಇವು ನಾಟಕ ಕೃತಿಗಳು, ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಗೋಧೂಳಿ’, ‘ಮತ್ತೆ ಮಳೆ ಬರುವ ಮುನ್ನ’, ‘ನಾನೊಂದು ಮರವಾಗಿದ್ದರೆ’, ‘ಚಪ್ಪಲಿಗಳು ಮತ್ತು ನಾನು’ ಹಾಗೂ ‘ಚಂದಿರನ ಕಣ್ಣು ಇಂಗಲಾರದ ಹುಣ್ಣು’ ಇವು ಕವನ ಸಂಕಲನಗಳು. ‘ಮೋಹದ ದೀಪ’ ಇವರ ಕಥಾ ಸಂಕಲನ. ‘ನೊಂದವರ ನೋವು’, ‘ಮಾತು-ಮಂಥನ’ ಮತ್ತು ‘ಬಹುತ್ವತೆ ಮತ್ತು ಬೌದ್ಧ ತಾತ್ವಿಕತೆ’ ಇವು ಇವರ ವೈಚಾರಿಕ ಕೃತಿಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಇದು ಇವರ ಆತ್ಮಕಥೆಯಾಗಿದೆ.

ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಹಲವಾರು ಜೀವಪರ ತುಡಿತ ಹೊಂದಿರುವ ವೈಚಾರಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ಇವರ ಸಾಹಿತ್ಯ ಕೃತಿಗಳು ಇತರ ಭಾಷೆಗಳಿಗೂ ಅನುವಾದಗೊಂಡಿವೆ. ಶ್ರೀಯುತರ ಕವನ ಸಂಕಲನಗಳು ವೆನಿಜುಲಾ ದೇಶದ ಸ್ಪ್ವಾನಿಷ್ ಭಾಷೆಗೂ ಅನುವಾದಗೊಂಡಿವೆ. ಹಿಂದಿಯಲ್ಲಿ ಇವರ ಕವಿತೆಗಳು ‘ಅಂಗಾರ್ ಕೀ ಚೋಟಿಪರ್’ ಎಂಬ ಹೆಸರಿನಲ್ಲಿ ಕವನ ಸಂಕಲನ ಪ್ರಕಟವಾಗಿರುವುದು ಇವರ ಸಾಹಿತ್ಯದ ವಿಶೇಷವಾಗಿದೆ.

ಮೂಡ್ನಾಕೂಡು ಚಿನ್ನಸ್ವಾಮಿಯವರು ಕೇವಲ ಬೌದ್ಧ ಚಿಂತಕರು ಮಾತ್ರವಲ್ಲದೆ, ಬೌದ್ಧ ಅನುಯಾಯಿಗಳು. ಇವರು ಬೌದ್ಧಧಮ್ಮ ದೀಕ್ಷೆಯನ್ನು ಸ್ವೀಕರಿಸು ಮೂಲಕ ಹಿಂದುತ್ವದ ಕಟ್ಟುಪಾಡುಗಳಿಂದ ಬಿಡುಗಡೆಯನ್ನು ಪಡೆದುಕೊಂಡಿದ್ದಾರೆ. ಬುದ್ಧನ ಧಮ್ಮದ ಮಾರ್ಗವನ್ನು ಅನುಸರಿಸುವ ಮೂಲಕ ವಿಮೋಚನಾ ಮಾರ್ಗವನ್ನು ಕಂಡುಕೊಂಡಿರುವ ಇವರು, ತನ್ನಂತೆ ಶೋಷಣೆಯನ್ನು ಅನುಭವಿಸುತ್ತಿರುವ ಶೋಷಿತ ಸಮುದಾಯವನ್ನು ಎಚ್ಚರಿಸುವ ಭಾಗವಾಗಿ ತಮ್ಮ ಚಿಂತನೆಗಳನ್ನು ಬಿತ್ತರಿಸಿದ್ದಾರೆ. ಇವರು ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿರುವ ಶೋಷಿತ ಸಮುದಾಯಗಳನ್ನು ಜಾಗೃತ ನೆಲೆಯಲ್ಲಿ ಮುನ್ನಡೆಸುವುದಕ್ಕಾಗಿ ಬೌದ್ಧ ಚಿಂತನಧಾರೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

ಮೂಡ್ನಾಕೂಡು ಚಿನ್ನಸ್ವಾಮಿಯವರು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟುಕೊಂಡಿರುವ ಅಸ್ಪೃಶ್ಯತೆ ಯಂತಹ ಭೀಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಾಬಾಸಾಹೇಬರ ‘ಶಿಕ್ಷಣ- ಸಂಘಟನೆ- ಹೋರಾಟ’ ಎಂಬ ತ್ರಿವಳಿ ಸೂತ್ರಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಅಸ್ಪøಶ್ಯತೆಯ ಸೊಂಕಿಗೆ ಬಲಿಯಾದ ತನ್ನ ಪೂರ್ವಜರ ಅಸಹಾಯಕತೆಯನ್ನು ಅನಾವರಣಗೊಳಿಸುವ ನೆಲೆಯಲ್ಲಿ ರಚನೆಯಾದ ‘ಬೂದಿ ಮಾತ್ರ ಬಲ್ಲುದು ಬೇಯುವ ಬಗೆಯನ್ನು’ ಎಂಬ ಕವಿತೆಯಲ್ಲಿ ತನ್ನ ಮುಂದಿರುವ ಶಿಕ್ಷಣದ ಶಕ್ತಿಯನ್ನು ಎತ್ತಿಹಿಡಿದಿದ್ದಾರೆ.

ಈಗ ನನ್ನನ್ನವರು ಸುಡಲಾರರು
ನನ್ನ ಹಿಡಿಯಲು ಬಂದು ತಾವೇ ಸುಟ್ಟುಕೊಳ್ಳುವರು
ಯಾಕೆಂದರೆ ನಾನು
ಅಜ್ಞಾನವನ್ನು ಸುಡುವ ಅಕ್ಷರವಾಗಿದ್ದೇನೆ
ಸಾವಿಲ್ಲದ ಸತ್ಯಕ್ಕೆ ಸಾಕ್ಷಿಯಾಗಿದ್ದೇನೆ”

– ಎಂಬ ಇವರ ವೈಚಾರಿಕ ಧೋರಣೆಯ ಹಿಂದೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ತ್ರಿವಳಿ ಸೂತ್ರದ ಶಕ್ತಿ ಅಂತರ್ಗತವಾಗಿದೆ. ಹೀಗಾಗಿ ಸಮಕಾಲೀನ ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಜಾತಿಯತೆ ಹಾಗೂ ಅಸ್ಪøಶ್ಯತೆಯಂತಹ ನೀಚ ಪ್ರವೃತ್ತಿಗಳನ್ನು ತೊಡೆದುಹಾಕಲು ಬುದ್ಧ ಹಾಗೂ ಬಾಬಾಸಾಹೇಬರ ಸೈದ್ಧಾಂತಿಕ ನಿಲುವುಗಳೊಂದಿಗೆ ಅನುಸಂಧಾನಕ್ಕೆ ಮುಂದಾಗಿದ್ದಾರೆ.

ಸದಾ ಜೀವಪರವಾದ ತುಡಿತ ಹೊಂದಿರುವ ಮೂಡ್ನಾಕೂಡು ಚಿನ್ನಸ್ವಾಮಿಯವರು ಶೋಷಿತ ಸಮುದಾಯಗಳ ಜಾಗೃತಿಗಾಗಿ ಮಿಡಿಯುತ್ತ ಬಂದಿದ್ದಾರೆ. ಇವರ ಸಾಹಿತ್ಯದಲ್ಲಿ ದಲಿತ ಬಂಡಾಯದ ತುಡಿತವಿದೆ. ಶತ ಶತಮಾನಗಳ ಕಾಲ ಶೋಷಿತ ಸಮುದಾಯಗಳು ಅನುಭವಿಸಿಕೊಂಡು ಬಂದ ನೋವಿನ ಜ್ವಾಲೆ ಇದೆ. ಶ್ರೀಯುತರ ಬರಹಗಳ ಹಿಂದೆ ಬಾಬಾಸಾಹೇಬರ ಕನಸಿನ ಪ್ರಬುದ್ಧ ಭಾರತದ ಹಂಬಲವಿದೆ.

ಇಂತಹ ನೆಲಮೂಲ ಬದುಕಿನ ಅಸ್ಮಿತೆಯ ಭಾಗವಾಗಿ ಮೂಡಿಬಂದಿರುವ ಇವರ ಸಾಹಿತ್ಯ ಸೇವೆಯನ್ನು ಮನಗಂಡು ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಹಾಗೂ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗಳು ಇವರ ಮುಡಿಗೇರಿವೆ. ಹಲವಾರು ಸಂಘ- ಸಂಸ್ಥೆಗಳು ಗೌರವ, ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ. ಸದಾ ನೆಲದ ನೋವಿಗೆ ಮಿಡಿಯುವ ಇಂತಹ ವಿಶಿಷ್ಟ ಚೇತನಕ್ಕೆ ಸುದ್ಧಿದಿನ ಪತ್ರಿಕಾ ಬಳಗದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

(-ಡಾ.ಕೆ.ಎ.ಓಬಳೇಶ್:9591420216)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version