ಲೈಫ್ ಸ್ಟೈಲ್
ಬಹುಪಯೋಗಿ ಗಣಿಕೆ ಸೊಪ್ಪು
ಗಣಿಕೆಯಲ್ಲಿ ಎರಡು ವಿಧ. ಕೆಂಪು ಹಣ್ಣು ಮತ್ತು ಕಪ್ಪು ಹಣ್ಣು ಬಿಡುವ ಗಣಿಕೆ ಸೊಪ್ಪು. ಈ ಹಣ್ಣು ರುಚಿಕರ, ಸಿಹಿ ಮತ್ತು ಹುಳಿಯಿಂದ ಕೂಡಿರುತ್ತದೆ. ಇವುಗಳಲ್ಲಿ ಕೆಂಪು ಹಣ್ಣು ಬಿಡುವ ಬಿಡುವ ಗಿಡ, ಔಷಧದಲ್ಲಿ ಶ್ರೇಷ್ಟವಾದದ್ದು. ಇದು ಕಾಚಿಸೊಪ್ಪು ಎಂದು ಪ್ರಸಿದ್ಧಿ ಪಡೆದಿದೆ. ಇದನ್ನು ಕಾಕ ಮಾಚಿ, ಧ್ವಾಂಕ್ಷ ಮಾಚಿ, ಕಾಕವ್ಯ, ಕಟ್ಟಿ ಎಂದು ಸಂಸ್ಕøತದಲ್ಲಿ ಹೆಸರುಗಳಿವೆ.
ಗಣಿಕೆ ಸೊಪ್ಪಿನ ಔಷಧೀಯ ಗುಣಗಳು
- ಇದರ ಎಲ್ಲಾ ಭಾಗವೂ ಔಷಧಯುಕ್ತವಾಗಿದೆ. ಇದರ ಎಲೆ ಮತ್ತು ಕಾಂಡವು ಅಡುಗೆಗೆ ತರಕಾರಿಯಾಗಿ ಬಳಸುತ್ತಾರೆ. ಇದರ ಹಣ್ಣು ತಿನ್ನಲು ರುಚಿಕರವಾಗಿ, ಸ್ವಲ್ಪ ಕಹಿ ಮತ್ತು ಹುಳಿ ರಸವಾಗಿರುವ ಹಣ್ಣು-ಕಬ್ಬಿಣ, ರಂಜಕ, ಸತು ಇತರ ಉಪಯುಕ್ತ ಖನಿಜಾಂಶಗಳಿಂದ ಕೂಡಿ ವಿಟಮಿನ್ ಬಿ, ಸಿ, ಗಳಿಂದ ಸಮೃದ್ಧವಾಗಿ ಅಪೂರ್ವವಾದ ರೋಗನಿರೋಧಕ ಗುಣ ಹೊಂದಿದೆ. ಈ ಗಣಿಕೆ ಸೊಪ್ಪು ಅನೇಕ ಔಷಧ ಗುಣಗಳಿಂದ ಕೂಡಿ; ಜ್ವರ, ಅರುಚಿ, ಅಗ್ನಿಮಾಂದ್ಯ, ಯಕೃತ್, ಕೆಮ್ಮು, ಕರುಳಿನ ಹುಣ್ಣು, ಚರ್ಮರೋಗ ಇತರ ವ್ಯಾಧಿಗಳ ಚಿಕಿತ್ಸೆಗೆ ಉಪಯೋಗಿಸುತ್ತಾರೆ.
- ಮಲಬದ್ಧತೆ, ಅಜೀರ್ಣ, ಮಧುಮೇಹ, ರಕ್ತದೊತ್ತಡದವರಿಗೆ ಉತ್ತಮ ಪಥ್ಯಾಹಾರ. ಇದು ದೇಹದಲ್ಲಿ ಕೊಬ್ಬಿನಾಂಶವನ್ನು ತೆಗೆದು, ಶರೀರದ ತೂಕವನ್ನು ಕಡಿಮೆ ಮಾಡುತ್ತದೆ.
- ಕೆಮ್ಮು, ಬಾಯಿ ಹುಣ್ಣು, ಸ್ವರಬೇಧ ಮುಂತಾದ ವ್ಯಾಧಿಗಳಿಗೆ ಹೆಚ್ಚು ಉಪಯೋಗಿಸುತ್ತಾರೆ. ಇದನ್ನು ತಂಬುಳಿ, ಬಸ್ಸಾರು, ಪಲ್ಯ ಇತರ ಖಾದ್ಯವಾಗಿ ಉಪಯೋಗಿಸಬಹುದು.
- ಗಣಿಕೆ ಸೊಪ್ಪು ಮೂಲವ್ಯಾಧಿಯಿಂದ ನರಳುತ್ತಿರುವವರಿಗೆ ಒಳ್ಳೆಯದು. ಇದರ ಸೇವನೆಯಿಂದ ಬಿಸಿಲಿನ ತಾಪದಿಂದ ಮೂಗಿನಲ್ಲಿಯ ರಕ್ತಸ್ರಾವ ನಿಲ್ಲುವುದು.
- ಗಣಿಕೆ ಸೊಪ್ಪಿನ ಎಲೆಗಳಿಗೆ ಅರಿಶಿನ ಬೆರೆಸಿ ಚೆನ್ನಾಗಿ ನುಣ್ಣಗೆ ಅರೆದು ಬಿಸಿ ಮಾಡಿ ನೋವು ಇರುವ ಭಾಗಗಳಿಗೆ ಹಚ್ಚುವಿದರಿಂದ ನೋವು ಗುಣಮುಖವಾಗುತ್ತದೆ.
- ಗಣಿಕೆ ಸೊಪ್ಪಿನ ಪಲ್ಯ ಸೇವಿಸುವುದರಿಂದ ಹೆಚ್ಚು ಕಾಲದಿಂದ ತೊಂದರೆ ಕೊಡುತ್ತಿರುವ ಬಾಯಿ ಹುಣ್ಣು ಗುಣವಾಗುತ್ತದೆ.
- ಗಣಿಕೆ ಸೊಪ್ಪು ಸೇವಿಸುವುದರಿಂದ ಸ್ತ್ರೀಯರು ಮುಟ್ಟಿನ ಕಾಲದಲ್ಲಿ ಉಂಟಾಗುವ ಅತಿಯಾದ ಸ್ರಾವ ಕಡಿಮೆಯಾಗುವುದು.
- ಕೀಲುನೋವು-ಗಣಿಕೆ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ಅರೆದು ನೋವು ಇರುವ ಭಾಗಕ್ಕೆ ಲೇಪನ ಮಾಡಿದರೆ, ಮಂಡಿಯ ಮತ್ತು ಇತರ ಕೀಲು ನೋವು ಕಡಿಮೆಯಾಗುತ್ತದೆ.
- ಗಣಕೆಸೊಪ್ಪಿನ ರಸ, ಬೆಳ್ಳುಳ್ಳಿ ಮತ್ತು ಎಳ್ಳೆಣ್ಣೆಯಿಂದ ತಯಾರಿಸಿದ ತೈಲವನ್ನು ಕೋಲುನೋವು, ಸೊಂಟನೋವು, ಮಂಡಿ ನೋವುಗಳಿಗೆ ಉಪಯೋಗಿಸುತ್ತಾರೆ.
ಇದರಲ್ಲಿ ಅತ್ಯಂತ ಹೆಚ್ಚು ಪೌಷ್ಟಿಕಾಂಶವಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಳಸುತ್ತಾರೆ.
ಎಚ್ಚರಿಕೆ
ಗಣಿಕೆಸೊಪ್ಪನ್ನು ಜೇನುತುಪ್ಪ ಅಥವಾ ಬೆಲ್ಲದ ಜೊತೆಯಲ್ಲಿ ಆಹಾರವಾಗಿ ಉಪಯೋಗಿಸಿದರೆ ವಿರುದ್ಧವಾದ ಆಹಾರವಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕರವಾಗುತ್ತದೆ.
ನೂರು ಗ್ರಾಂ ಗಣಿಕೆಸೊಪ್ಪಿನಲ್ಲಿರುವ ಪೋಷಕಾಂಶಗಳು
- ತೇವಾಂಶ – 82.2 ಗ್ರಾಂ
- ಸಸಾರಜನಕ – 5.9 ಗ್ರಾಂ
- ಮೇಧಸ್ಸು – 1.0 ಗ್ರಾಂ
- ಖನಿಜಾಂಶ – 2.1 ಗ್ರಾಂ
- ನಾರಿನಾಂಶ – 2.2 ಗ್ರಾಂ
- ಕಾರ್ಬೋಹೈಡ್ರೇಟ್ – 8.9 ಗ್ರಾಂ
- ಕ್ಯಾಲ್ಷಿಯಂ – 410 ಮಿಲಿ ಗ್ರಾಂ
- ರಂಜಕ – 70 ಮಿಲಿ ಗ್ರಾಂ
- ಕಬ್ಬಿಣ – 20.5 ಮಿಲಿ ಗ್ರಾಂ
- ರೈಬೋಫ್ಲಾವಿನ್ – 0.59 ಮಿಲಿ ಗ್ರಾಂ
- ನಿಯಾಸಿನ್ – 0.9 ಮಿಲಿ ಗ್ರಾಂ
- ಸಿ ಜೀವಸತ್ವ – 1.1 ಮಿಲಿ ಗ್ರಾಂ
- ಎ ಜೀವಸತ್ವ – 100 ಇಂ. ಯೂ
- ಬಿ ಜೀವಸತ್ವ – 10 ಎಂ.ಸಿ.ಜಿ
ಗಣಿಕೆ ಸೊಪ್ಪಿನಿಂದ ತಯಾರಿಸಬಹುದಾದ ಅಡುಗೆಗಳು
- ಗಣಿಎ ಸೊಪ್ಪು ಸಾರು
- ಗಣಿಕೆ ಸೊಪ್ಪು ಸಾಗು
- ಗಣಿಕೆ ಸೊಪ್ಪು ಬಜ್ಜಿ
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ |9986715401