ದಿನದ ಸುದ್ದಿ
ಹರಪನಹಳ್ಳಿ | ಮ್ಯಾಸ ಬೇಡರ ಕುಂದುಕೊರೆತಗಳ ಕುರಿತು ಸಭೆ
ಸುದ್ದಿದಿನ, ಹರಪನಹಳ್ಳಿ : ಕರ್ನಾಟಕ ಆಂದ್ರ ಗಡಿ ಜಿಲ್ಲೆಗಳಾದ ಬಳ್ಳಾರಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯಕ ಪಂಗಡದವರಾದ ಮ್ಯಾಸ ನಾಯಕ – ಮ್ಯಾಸ ಬೇಡರು ನೆಲೆಸಿರುತ್ತಾವೆ. ನಮ್ಮ ಬುಡಕಟ್ಟಿನಲ್ಲಿ ಮಂದ ನಾಯಕ ಮತ್ತು ಮಲ್ಲ ನಾಯಕ ಎಂಬ ಎರಡು ಗುಂಪುಗಳಿರುತ್ತವೆ. ಮ್ಯಾಸ ಬೇಡರ ಭಾಷೆ ತೆಲುಗು ಭಾಷೆಯ ಉಪ ಭಾಷೆ. ವಿದ್ವಾಂಸರು ಇದನ್ನು “ಮ್ಯಾಸ ಭಾಷೆ “ಎಂದೇ ಕರೆದಿರುತ್ತಾರೆ ಎಂದು ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಉಪಧ್ಯಾಕ್ಷ ಎಂ.ಕೆ.ಬೋಸಪ್ಪ ಹೇಳಿದರು.
ಬುಧವಾರ ಹರಪನಹಳ್ಳಿ ಪಟ್ಟಣದಲ್ಲಿ ಮ್ಯಾಸ ಬೇಡರ ಕುಂದುಕೊರೆತಗಳ ಕುರಿತು ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ವತಿಯಿಂದ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಕೆ.ಬೋಸಪ್ಪ ಅವರು ಮಾತನಾಡಿದರು.
ನಾವು ಮೂಲತ: ಗೊಂಡವಾನ ಪ್ರದೇಶದ ಬುಡಕಟ್ಟುಗಳಲ್ಲಿ ಒಂದಾದ ‘ಭಿಲ್’ ಬುಡಕಟ್ಟು ಜನಾಂಗದಿಂದ ಬೇರ್ಪಟ್ಟ ‘ನಾಯ್ಕಡ’ ಬುಡಕಟ್ಟಿಗೆ ಸೇರಿರುತ್ತೇವೆ. ಆಂದ್ರದ ಶ್ರೀಶೈಲದ ಮೂಲಕ ಆಂದ್ರ ಕರ್ನಾಟಕ ಗಡಿಭಾದಲ್ಲಿ ಬಂದು ನೆಲೆಸಿರುತ್ತೇವೆ. ನಾಯ್ಕಡ-ನಾಯಕ ಪಂಗಡದವರಾದ ಮ್ಯಾಸ ನಾಯಕ / ಮ್ಯಾಸ ಬೇಡ ಬುಡಕಟ್ಟು ಜನರು ಮೂರ್ತಿ ಪೂಜಕರು ಅಲ್ಲ. ‘ಉದಿ-ಪದಿ’ ಎಂಬ ಬುಡಕಟ್ಟು ಧಾರ್ಮಿಕ ಸಂಪ್ರದಾವನ್ನು ಪಾಲಿಸುತ್ತೇವೆ.
‘ಉದಿ’ ಎಂದರೆ ಪೆಟ್ಟಿಗೆ, ಬುಟ್ಟಿಗಳಲ್ಲಿ ಇಟ್ಟಿರುವ ಪವಿತ್ರ ವಸ್ತುಗಳ ಪುಟ್ಟಿ ಅಥವಾ ಪೆಟ್ಟಿಗೆ ಇವುಗಳನ್ನೇ ದೇವರೆಂದು ಇವರು ಪೂಜಿಸುವುದರಿಂದ ಇವುಗಳನ್ನು ಪೆಟ್ಟಿಗೆ ದೇವರುಗಳೆಂದು ಕರೆಯುತ್ತೇವೆ. ಬಿಲ್ಲು, ಕತ್ತಿ, ಕೋಲು ಮುಂತಾದ ಆಯುಧಗಳನ್ನು ಮತ್ತು ದೇವರ ಎತ್ತುಗಳನ್ನು ಸಹ ಪೂಜಿಸುತ್ತೇವೆ. ಈ ದೇವರ ಎತ್ತುಗಳು ನಮ್ಮ ಪೂರ್ವಿಕರ ಆತ್ಮವನ್ನು ಹೊಂದಿರುವ ಪ್ರಾಣಿಗಳೆಂದು ಪೂಜಿಸುತ್ತೇವೆ ಎಂದರು.
ನಾವು ಪ್ರಾಣಿ ಪೂಜಕರೆ ಹೊರತು, ಮೂರ್ತಿ ಪೂಜಕರಲ್ಲ ಮತ್ತು ವೈಧಿಕ ಸಂಪ್ರದಾಯಗಳನ್ನು ಪಾಲಿಸುವವರಲ್ಲ. ನಾವು ಕೋಳಿ ಮಾಂಸವನ್ನು ತಿನ್ನುವುದಿಲ್ಲ ಮತ್ತು ಕೋಣದ ಮಾಂಸವನ್ನು ಸಮಾನ್ಯವಾಗಿ ಮುಖ್ಯ ಮಾಂಸ ಭೋಜನವಾಗಿ ಉಪಯೋಗಿಸುತ್ತೇವೆ. ಚಿತ್ರದುರ್ಗ ಪಾಳೆಯಗಾರರು ನಮ್ಮ ಮ್ಯಾಸ ಬೇಡ ಬುಡಕಟ್ಟಿನ ಕಾಮಗೇತಿ ಬೆಡಗಿಗೆ ಸೇರಿದ ವೀರರಾಗಿರುತ್ತಾರೆ.
ರಾಜ್ಯದ ಬಳ್ಳಾರಿ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ಮತ್ತು ಜಗಳೂರು ತಾಲ್ಲೂಕಿನಲ್ಲಿ ನಮ್ಮ ನಾಯಕ ಪಂಗಡ ಮ್ಯಾಸ ಬೇಡರು ಜನ ಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುತ್ತೇವೆ. ಮ್ಯಾಸ ಬೇಡ ಸಮುದಾಯದ ಜನರು ಆರ್ಥಿಕ, ಸಮಾಜಿಕ, ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದೇವೆ ವಿಷಾದ ವ್ಯಕ್ತಪಡಿಸಿದರು.
ಬುಡಕಟ್ಟು ಹಿನ್ನೆಲೆಯನ್ನು ಹೊಂದಿರುವ ಮ್ಯಾಸ ಬೇಡ ಸಮುದಾಯದ ಜನರನ್ನು ಈಗಾಗಲೇ ನಾಯಕ ವಾಲ್ಮೀಕಿ ಎಂಬ ಹೆಸರಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಮೀಸಲಾತಿಯನ್ನು ನೀಡಿ 45ವರ್ಷಗಳೇ ಗತಿಸಿದರು ಸಹ ಈ ಜನರು ಮುಖ್ಯವಾಹಿನಿಗೆ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮ್ಯಾಸ ಬೇಡ ಸಮುದಾಯವು ನೆಲೆಸಿರುವ ಹಟ್ಟಿಗಳು ಇದುವರೆಗೂ ಕಂದಾಯ ಗ್ರಾಮಗಳು ಆಗಿರುವುದಿಲ್ಲ. ನಮ್ಮ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ವೀರರ ಹೆಸರಲ್ಲಿ ಮತ್ತು ಮ್ಯಾಸರಹಟ್ಟಿ ಎಂಬ ಹೆಸರಿನಲ್ಲಿ ಊರುಗಳು ಇರುತ್ತವೆ ಎಂದು ಹೇಳಿದರು.
ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್ ಮಾತನಾಡಿ ನಮ್ಮ ಬುಡಕಟ್ಟು ಸಮುದಾಯದ ಧಾರ್ಮಿಕ ನಂಬಿಕೆಯ ಪ್ರತೀಕವಾದ ದೇವರು ಎತ್ತುಗಳು ಇವೆ. ಸುಮಾರು ಗುಡಿಕಟ್ಟೆಯ ದೇವರ ಎತ್ತುಗಳು ದಶಕಗಳಿಂದ ಮೇವು ನೀರಿಲ್ಲದೆ ಸತ್ತುಹೋಗಿರುತ್ತವೆ. ಬಯಲು ಸಿಮೇಯಲ್ಲಿ ಇರುವುದರಿಂದ ಇವುಗಳನ್ನು ಉಳಿಸಿಕೊಳ್ಳಲು ಕಿಲಾರಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಹಾಲವಾರು ಬಾರಿ ಮಾದ್ಯಮಗಳಲ್ಲಿಯು ವರದಿಯಾಗಿರುತ್ತದೆ. ನಾವು ಹಾಲವಾರು ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಹ ಸಲ್ಲಿಸಲಾಗಿದೆ ಆದರೆ ಯಾವುದೇ ರೀತಿ ಕ್ರಮಕೈಗೊಂಡಿರುವುದಿಲ್ಲ. ಸರ್ಕಾರದಿಂದ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಮತ್ತು ಅನುಧಾನವು ತಳವಾರ ಪರಿವಾರದವರ ಪಾಲಗುತ್ತಿದೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದರಿಂದ ನಿಧಾನವಾಗಿ ನಮ್ಮ ಬುಡಕಟ್ಟು ಸಂಸ್ಕೃತಿಯು ನಾಶವಾಗುವ ಹಂತಕ್ಕೆ ತಲುಪಿರುತ್ತದೆ.
ಈ ಸಮುದಾಯದ ಹಟ್ಟಿಗಳು ಮತ್ತು ಜನರು ಮೂಲ ಸೌಲಭ್ಯಗಳಿಲ್ಲದೆ ಸಂಪೂರ್ಣವಾಗಿ ಅಭಿವೃದ್ದಿಯಿಂದ ವಂಚಿತವಾಗಿದ್ದೇವೆ. ಈ ಸಮುದಾಯದ ಹೆಸರಿನಲ್ಲಿ ಜನಪ್ರತಿ ನಿಧಿಗಳಾಗಿರುವವರು ಮತ್ತು ರಾಜಕೀಯ ಮುಖಂಡರುಗಳು ಮ್ಯಾಸ ಬೇಡರ ಹಕ್ಕುಗಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ರಾಜಕಾರಣಿಗಳು ಚುನಾವಣೆ ಬಂದಾಗ ಮಾತ್ರ ಮ್ಯಾಸ ನಾಯಕ ಎಂಬುದನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದರು.
ರಾಜಕೀಯ ಮುಖಂಡರ ಇಚ್ಛಾಶಕ್ತಿಯ
ಕೊರೆತೆಯಿಂದಾಗಿ ಇಂದು ಈ ಸಮುದಾಯ ಜ್ವಾಲಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಇದರಿಂದ ನಾವು ಮುಕ್ತಿಯನ್ನು ಪಡೆಯಬೇಕಾದರೆ ಮೊದಲು ನಾವು ಸಂಘಟಿತರಾಗಬೇಕು ನಮ್ಮ ಮ್ಯಾಸ ಮಂಡಲದ ಎಲ್ಲಾ ಹಟ್ಟಿಗಳಲ್ಲಿ ಯುವಕರನ್ನು ಜಾಗೃತಿಗೊಳಿಸಬೇಕು ರಾಜಕಾರಣಿಗಳು ಯಾವುದೇ ಪಕ್ಷಗಳಲ್ಲಿ ಇರಲಿ ನಮ್ಮ ಸಮುದಾಯದ ಅಭಿವೃದ್ದಿ ವಿಚಾರ ಬಂದಾಗ ಪಕ್ಷತೀತವಾಗಿ ಕೆಲಸಮಾಡಬೇಕು ಎಂದು ಕರೆ ನೀಡಿದರು.
ನಮ್ಮ ಸಮುದಾಯದ ಎಲ್ಲಾ ವರ್ಗದ ಜನರನ್ನು ಜಾಗೃತಿಗೊಳಿಸಿ ಮುಂದಿನ ದಿನಗಳಲ್ಲಿ ಆಳುವ ವರ್ಗಕ್ಕೆ ಮ್ಯಾಸ ಬೇಡರ ಶಕ್ತಿಯನ್ನು ತೋರಿಸಬೇಕು. ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಈ ಒಂದು ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ಸಭೆಯಲ್ಲಿ ಬಳ್ಳಾರಿ, ಕೊಟ್ಟೂರು ಕೂಡ್ಲಿಗಿ ಮೊಳಕಾಲ್ಮೂರು ಜಗಳೂರು ತಾಲ್ಲೂಕುಗಳ ಸಮಿತಿಯ ಮುಖಂಡರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243