ದಿನದ ಸುದ್ದಿ
ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಸಂತೆಬೆನ್ನೂರು ಫೈಜ್ನಟ್ರಾಜ್ ಆಯ್ಕೆ
ಸುದ್ದಿದಿನ,ದಾವಣಗೆರೆ : ಕವಿ,ಶಿಕ್ಷಕ, ಮಾಸದ ಮಾತು ಸಂಘಟಕ. ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ ಜಿಲ್ಲೆಯ ಪ್ರತಿನಿಧಿ ಕವಿಯಾಗಿ ಆಯ್ಕೆಯಾಗಿದ್ದು ನವೆಂಬರ್ ಮೂರನೇ ತಾರೀಕಿನಂದು ಮೈಸೂರಲ್ಲಿ (Mysore) ನಡೆಯಲಿರುವ ವಿಶ್ವ ವಿಖ್ಯಾತ ದಸರಾ (Dasara) ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವಿತೆ ವಾಚಿಸಲಿದ್ದಾರೆ.
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ ಕಂಬಾರ ಅವರು ಈ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಸುಪ್ರಸಿದ್ಧ ಕವಿ ಮತ್ತು ನಾಟಕಕಾರರಾದ ಶಿ ಹೆಚ್.ಎಸ್. ಶಿವಪ್ರಕಾಶ್ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಬಹುಭಾಷಾ ಕವಿಗೋಷ್ಠಿಯೂ ಇದಾಗಿದ್ದು. ನಾಡಿನ ಪ್ರಸಿದ್ಧ ಕವಿಗಳು ಈ ಪ್ರಧಾನ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಉತ್ತಮೋತ್ತಮ ಕಾವ್ಯವಾಚನ ಮಾಡಲಿದ್ದು ದಾವಣಗೆರೆ ಜಿಲ್ಲೆಯ ಪ್ರತಿಭಾನ್ವಿತ ,ಸೃಜನಶೀಲ ಕವಿ ಫೈಜ್ನಟ್ರಾಜ್ ಅವರಿಗೆ ಅವರ ಕಾವ್ಯ ಕುಸುರಿ ಸಾಮರ್ಥ್ಯದಿಂದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ದಸರಾ ಕವಿಗೋಷ್ಠಿಯ ಕಾರ್ಯಾಧ್ಯಕ್ಷರೂ, ಕನ್ನಡ ಪ್ರಾಧ್ಯಾಪಕರೂ ಆದ ಪ್ರೊ.ಎಂ.ಜಿ.ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಬೋಧಕರಾಗಿ, ಕನ್ನಡ ಕಟ್ಟುವ ಕಾರ್ಯದ ಮಾಸದ ಮಾತು ಬಳಗ ನಡೆಸಿಕೊಂಡು, ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಮೂಡಿಸುವ ಅಂಗಳದ ಹೂವುಗಳು ಎಂಬ ಶಾಲಾ ಪತ್ರಿಕೆ ನಡೆಸುತ್ತಾ ಹೆಸರಾದ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಈಗಾಗಲೇ ಎಂಟು ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದು ಸಂಚಯ ಕಾವ್ಯ ಪುರಸ್ಕಾರ, ಗವಿಸಿದ್ದ ಪ್ರಶಸ್ತಿ, ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಮುಂತಾದ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದು ಇವರ ಒಂದು ಕತೆ ಮಹಾರಾಷ್ಟ್ರ ವಿದ್ಯಾಇಲಾಖೆಯಲ್ಲಿ ಪಠ್ಯವಾಗಿದೆ.
ಇದೀಗ ದಾವಣಗೆರೆ ಜಿಲ್ಲೆಯ ಕವಿಯಾಗಿ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ದಾವಣಗೆರೆ ಜಿಲ್ಲೆಯ ಅಭಿಮಾನಿಗಳು, ಸಾಹಿತ್ಯಾಸಕ್ತರು ಮಾಸದ ಮಾತು ಬಳಗ, ಗ್ರಾಮಸ್ಥರು, ಅಭಿಮಾನಿಗಳು, ವಿದ್ಯಾರ್ಥಿ ಸಮೂಹ ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243