ದಿನದ ಸುದ್ದಿ
ಮೈಸೂರು ದಸರಾ; ಜಂಬು ಸವಾರಿಯ 12 ಆನೆಗಳು, ಮಾವುತ, ಕವಾಡಿಗರಿಗೆ ವಿಮೆ
ಸುದ್ದಿದಿನ ಡೆಸ್ಕ್: ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುವ 12 ಆನೆಗಳು, ಮವುತ, ಕವಾಡಿಗರಿಗೆ ಮೈಸೂರು ಜಿಲ್ಲಾಡಳಿತ 34ಲಕ್ಷ ವಿಮೆ ಮಾಡಿಸಿದೆ. ಇಷ್ಟೇ ಅಲ್ಲದೇ ಸಾರ್ವಜನಿಕರು, ಸಾರ್ವಜನಿಕ ಆಸ್ತಿಗಳ ಮೇಲೂ ವಿಮೆ ಮಾಡಿಸಲು ನಿರ್ಧರಿಸಿದೆ.
ದಸರಾ ಆನೆಗಳು, ಮಾವುತರು, ಕವಾಡಿಗರಿಗೆ ವಿಮೆ ಮಾಡುವಂತೆ ನ್ಯೂ ಇಂಡಿಯಾ ಅಸ್ಸುರೆನ್ಸ್ ಕಂಪನಿ ವಿಭಾಗೀಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ, ದಸರಾ ಉತ್ಸವದ ವಿಶೇಷಾಧಿಕಾರಿ ಅಭಿರಾಮ್ ಜಿ. ಶಂಕರ್ ಪತ್ರ ಬರೆದಿದ್ದಾರೆ. 12 ದಸರಾ ಆನೆಗಳಿಗೆ 34 ಲಕ್ಷ ವಿಮೆ ಮಾಡಿಸಿದ್ದು, 40,120 ಪ್ರೀಮಿಯಂ ಪಾವತಿ ಮಾಡಲಾಗಿದೆ.
12 ಮಾವುತರು, 12 ಕವಾಡಿಗರಿಗೆ ಒಂದು ಲಕ್ಷ ರೂ. ವಿಮೆ ಮಾಡಿಸಿದ್ದು, 720 ಪ್ರಿಮಿಯಂ ಮೊತ್ತ ಪಾವತಿಸಿದ್ದಾರೆ. ಸಾರ್ವಜನಿಕ ಆಸ್ತಿಗಳು ಹಾನಿಯಾದರೆ ಅದರ ಮಾಲಿಕರಿಗೆ ಹಣ ಭರಿಸುವುದಕ್ಕಾಗಿ 25 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಇದರ ಪ್ರಿಮಿಯಂ ಕಂತಾಗಿ 3,540 ರೂ ಪಾವತಿ ಮಾಡಲಾಗಿದೆ. ಸಪ್ಟೆಂಬರ್ 2ರಿಂದ ಅಕ್ಟೋಬರ್ 31ರ ತನಕ ವಿಮೆ ವಾಯಿದೆ ಇದೆ. ಆಸ್ತಿ- ಪಾಸ್ತಿ, ಸಾವರ್ಜನಿಕರಿಗೆ ಹಾನಿಯಾದ ಮೂರು ದಿನದೊಳಗಾಗಿ ಕ್ಲೇಮು ಮಾಡಿಕೊಳ್ಳಬೇಕು. ಅರಣ್ಯ (ವನ್ಯಜೀವಿ) ಇಲಾಖೆ ಡೆಪ್ಯುಟಿ ಕಂಜರ್ವೇಟರ್ ಹೆಸರಿನಲ್ಲಿ ವಿಮೆ ಮಾಡಿಸಲಾಗಿದೆ.