ದಿನದ ಸುದ್ದಿ
ಮೈಸೂರು ರೇಸ್ ಕೋರ್ಸ್‍ಗೆ ಗೇಟ್‍ಪಾಸ್?
ಸುದ್ದಿದಿನ ಡೆಸ್ಕ್: ಭಾರಿ ವಿವಾದದಲ್ಲಿರುವ ಮೈಸೂರು ರೇಸ್‍ಕೋರ್ಸ್ ಅನ್ನು ನಗರದಿಂದ 20 ಕಿ.ಮೀ. ದೂರಕ್ಕೆ ಸ್ಥಳಾಂತರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ತಿಳಿಸಿದರು.
ಮೈಸೂರು -ಎಚ್‍ಡಿ ಕೋಟೆ ರಸ್ತೆಯಲ್ಲಿರುವ ರೇಷ್ಮೆ ನೇಯ್ಗೆ ಘಟಕಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲೇ ಇರುವ ರೇಸ್‍ಕೋರ್ಸ್‍ನ ಗುತ್ತಿಗೆ ಅವಧಿ ಮುಗಿದು ಹಲವು ವರ್ಷಗಳೇ ಕಳೆದಿದ್ದರೂ, ಜಾಗವನ್ನು ಸರಕಾರಕ್ಕೆ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಕಾನೂನು ಕ್ರಮ ಜರುಗಿಸುವಂತೆ ಪತ್ರ ಬರೆದಿದ್ದೇನೆ. ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೊಟಾನಿಕಲ್ ಗಾರ್ಡನ್: ರೇಸ್‍ಕೋಸ್ ಸ್ಥಳಾಂತರಗೊಂಡ ನಂತರ ಅದೇ ಜಾಗದಲ್ಲಿ ಬೊಟಾನಿಕಲ್ ಗಾರ್ಡನ್‍ವೊಂದನ್ನು ನಿರ್ಮಿಸಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು ಕೊಡಲಾಗುವುದು ಎಂದು ಅವರು ತಿಳಿಸಿದರು.
ಮತ್ತೊಂದು ರೇಷ್ಮೆ ಘಟಕ: ಮೈಸೂರು ಸಿಲ್ಕ್‍ಗೆ ಜಾಗತಿಕವಾಗಿಯೂ ಹೆಚ್ಚು ಬೇಡಿಕೆ ಬರುತ್ತಿದ್ದು, ಇದನ್ನು ಸದ್ಯ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೈಸೂರಿನಲ್ಲೇ ಮತ್ತೊಂದು ರೇಷ್ಮೆ ನೇಯ್ಗೆ ಘಟಕವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.