ದಿನದ ಸುದ್ದಿ
ಎನ್.ಎಸ್.ಯು.ಐ ಕಾರ್ಯಕರ್ತರನ್ನು ಬಿಡುಗಡೆಗೊಳಿಸದಿದ್ದರೆ ಉಗ್ರ ಹೋರಾಟ : ಸೈಯದ್ ಖಾಲಿದ್ ಅಹ್ಮದ್
ಸುದ್ದಿದಿನ ಡೆಸ್ಕ್ : ಪಠ್ಯ ಪುಸ್ತಕ ಪರಿಶೀಲನಾ ಮುಖ್ಯಸ್ಥರಿಂದ ಹಾಗೂ ರಾಜ್ಯ ಸರ್ಕಾರದಿಂದ ಆಗಿರುವ ವಿವಾದವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಬಂಧಿತರಾಗಿರುವ ಅಮಾಯಕ ಎನ್. ಎಸ್.ಯು.ಐ ರಾಜ್ಯಾಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರವಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ವಿನಾ ಕಾರಣ ಗೊಂದಲಗಳನ್ನು ಸೃಷ್ಟಿಸುತ್ತಿದೆ ಪಠ್ಯ ಪುಸ್ತಕ ಸಮೀತಿಯನ್ನು ವಜಾಗೊಳಿಸಿ ಮುಖ್ಯಸ್ಥ ರೋಹಿತ್ ಚಕ್ರತೀರ್ಥ ಅವರ ವಿರುಧ್ದ ನಾಡದ್ರೋಹ ಕೇಸ್ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಅವರ ನೇತೃತ್ವದಲ್ಲಿ ಅನೇಕ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಶಿಕ್ಷಣ ಸಚಿವ ನಾಗೇಶ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿ ಜಾಮೀನು ರಹಿತ ಕೇಸ್ ದಾಖಲಿಸಿದ್ದಾರೆ ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶದಲ್ಲಿ ಸಂವಿಧಾನಾತ್ಮಕವಾಗಿ, ಕಾನೂನಾತ್ಮಕವಾಗಿ ಪ್ರತಿಭಟಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ ಆದರೆ ಸಂವಿಧಾನವನ್ನೇ ಒಪ್ಪದ ಈ ಬಿಜೆಪಿ ಸರ್ಕಾರ ನೀತಿ ನಿಯಮ ಎಲ್ಲಾ ಗಾಳಿಗೆ ತೂರಿ ಸುಳ್ಳು ಕೇಸು ದಾಖಲಿಸಿ ಹೋರಾಟಗಾರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುಧ್ದ ಯಾರೂ ಧ್ವನಿಯೆತ್ತದಂಥ ಪರಿಸ್ಥಿತಿ ಈ ಲಜ್ಜೆಗೆಟ್ಟ ಸರ್ಕಾರ ನಿರ್ಮಿಸುತ್ತಿದೆ. ಈ ಎರಡೂ ಸರ್ಕಾರಗಳ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ. ರೋಹಿತ್ ಚಕ್ರತೀರ್ಥ ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಗೆ ಅವಮಾನಿಸಿದ ಒಬ್ಬ ನಾಡದ್ರೋಹಿ ಅಂಥವನನ್ನು ಸಮರ್ಥಿಸಿಕೊಳ್ಳುವ ಈ ಸರ್ಕಾರ ಕೂಡ ನಾಡದ್ರೋಹಿ ಸರ್ಕಾರವೇ ಆಗಿದೆ ಎಂದು ಕಿಡಿಕಾರಿದರು.
ವಿದ್ಯಾರ್ಥಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಕೀರ್ತಿ ಗಣೇಶ್ ರವರು ಈ ಹಿಂದೆ ಅನೇಕ ವಿದ್ಯಾರ್ಥಿ ಪರ ಧ್ವನಿಯೆತ್ತಿದ್ದಾರೆ ,ಅನೇಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಆದರೆ ಕೇವಲ ದ್ವೇಷ ರಾಜಕಾರಣ ಮಾಡುತ್ತಿರುವ ಈ ಕೋಮುವಾದಿ ಸರ್ಕಾರ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ತಾನು ಪ್ರಕರಣದಿಂದ ನುಣಿಚಿಕೊಳ್ಳಲು ಪ್ರಯತ್ನಿಸುತ್ತಿದೆ ಆದರೆ ನಮ್ಮ ಯುವ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಇದನ್ನು ಸಹಿಸಿಕೊಳ್ಳುವುದಿಲ್ಲ ರೋಹಿತ್ ಚಕ್ರತೀರ್ಥ ವಿರುಧ್ದ ನಾಡದ್ರೋಹ ಕೇಸ್ ದಾಖಲಿಸಬೇಕು ಹಾಗೂ ಅವರು ಅನುಮೋದಿಸಿರುವ ಪಠ್ಯಗಳಿಗೆ ಈ ಕೂಡಲೇ ತಡೆಯಾಜ್ನೆ ತರಬೇಕು ಮತ್ತು ಈ ಪ್ರಕರಣ ಸಂಬಂಧ ಬಂಧಿಸಿರುವ ನಮ್ಮ ಎಲ್ಲಾ ಕಾರ್ಯಕರ್ತರನ್ನು ಕೂಡಲೇ ಬಂಧ ಮುಕ್ತಗೊಳಿಸಬೇಕು ಇಲ್ಲವಾದಲ್ಲಿ ಶೀಘ್ರದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಮ್ಮ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯಲಿದೆ ಎಂದು ಸೈಯದ್ ಖಾಲಿದ್ ಅಹ್ಮದ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243