ದಿನದ ಸುದ್ದಿ
ನಾಗರಹೊಳೆ ಕಾಡಿನಿಂದ ನಾಡಿಗೆ ಬಂದ ಆದಿವಾಸಿಗಳು
ಸುದ್ದಿದಿನ ಡೆಸ್ಕ್ : ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಪುನರ್ವಸತಿ ಕೇಂದ್ರಕ್ಕೆ ಜಿಲ್ಲೆಯ ಅಂಚಿನಲ್ಲಿರುವ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಹಾಡಿಗಳಲ್ಲಿ ವಾಸಮಾಡುತ್ತಿದ್ದ 53 ಆದಿವಾಸಿ ಕುಟುಂಬಗಳು ಸ್ಥಳಾಂತರಗೊಂಡಿವೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ರಾಜ್ಯ ಅರಣ್ಯ ಇಲಾಖೆ ಭೂಮಿ, ಬ್ಯಾಂಕ್ ಠೇವಣಿ ಜತೆಗೆ ಎಚ್ ಡಿ ಕೋಟೆಯ ಭೀಮನಹಳ್ಳಿಗೆ ಈ 53 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಸಧ್ಯಕ್ಕೆ ಈ ಆದಿವಾಸಿಗಳ ಪ್ರತಿ ಕುಟುಂಬಕ್ಕೆ 3 ಎಕರೆ ಭೂಮಿ ನೀಡಿದ್ದು, 2 ಲಕ್ಷ ಬ್ಯಾಂಕ್ ಠೇವಣಿ ಹಾಗೂ ಈಗಿನ ಖರ್ಚಿಗೆ 75 ಸಾವಿರ ರೂಪಾಯಿ ನಗದು ನೀಡಲಾಗಿದೆ. ನಂತರ ಎರಡನೇ ಹಂತದಲ್ಲಿ ತಿತಿಮತಿ, ಹಡುಗುಂಡಿ ಸಮೀಪದ ಮಜ್ಜಿಗೆ ಹಳ್ಳ ಹಾಗೂ ಆನೆಕ್ಯಾಂಪ್ 70 ಕುಟುಂಬಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ.
ಈ ಆದಿವಾಸಿ ಕುಟುಂಬಗಳಿಗೆ ಇತರೆ ಎಲ್ಲಾ ಇಲಾಖೆಗಳಿಂದ ಬೇರೆ ಬೇರೆ ಸೌಲಭ್ಯಗಳು ದೊರಕಿದ್ದು, ಆದಿವಾಸಿಗಳ ಮನೆಯ ಸಾಮಗ್ರಿಗಳನ್ನು ಸುಮಾರು 10ಲಾರಿಗಳಲ್ಲಿ ಭೀಮನಹಳ್ಳಿಗೆ ಸ್ಥಳಾಂತರಿಸಲಾಗಿದೆ.
ಮಾನವ-ಕಾಡು ಪ್ರಾಣಿ ಸಂಘರ್ಷಗಳು ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಹಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಸಂಘರ್ಷಗಳನ್ನು ತಪ್ಪಿಸಲು ಅರಣ್ಯ ಇಲಾಖೆ ಹಾಡಿಗಳಲ್ಲಿ ವಾಸಮಾಡುತ್ತಿರುವ ಆದಿವಾಸಿಗಳಿಗೆ ಅರಣ್ಯ ಇಲಾಖೆ ಸ್ವಯಂಪ್ರೇರಿತ ಸ್ಥಳಾಂತರ ಯೋಜನೆಯನ್ನು ಜಾರಿಗೊಳಿಸಿದೆ.
ಒಟ್ಟಾರೆಯಾಗಿ ಈ ಯೋಜನೆ ಮೂಲಕ ಕಾಡಿನಿಂದ ಹೊರಬರುತ್ತಿರುವ ಆದಿವಾಸಿ ಕುಟುಂಬಗಳಿಗೆ ಮನೆ ಮತ್ತು ಜಮೀನನ್ನು ಅರಣ್ಯ ಇಲಾಖೆ ಕಾಡಿನ ಹೊರಗೆ ನೀಡುತ್ತಿದೆ.