ದಿನದ ಸುದ್ದಿ

ಯುವಜನತೆಗಾಗಿ ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನ ಆರಂಭಿಸಿದ ನಲಪಾಡ್; ವಿಜೇತರಿಗೆ ಐಫೋನ್ 12 ಸೇರಿದಂತೆ ಆಕರ್ಷಕ ಬಹುಮಾನಗಳು

Published

on

ಕನ್ನಡ ರಾಜ್ಯೋತ್ಸವದ ದಿನದಂದು ಬೆಂಗಳೂರಿನ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಮೊಹ್ಮದ್ ಹ್ಯಾರೀಸ್ ನಲಪಾಡ್ ಅವರು ವಿವಿಧ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಕಂಡುಕೊಳ್ಳುವ ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನವನ್ನು ಆರಂಭಿಸಿದ್ದಾರೆ. ಕಾಲಕಾಲಕ್ಕೆ ಮೊಹ್ಮದ್ ಹ್ಯಾರೀಸ್ ನಲಪಾಡ್ ಅವರು ಜನರೆದುರಿಡುವ ಸಮಸ್ಯೆಗಳಿಗೆ ಯುವಕ-ಯುವತಿಯರು ತಮ್ಮ ಪರಿಹಾರೋಪಾಯವನ್ನು ಸೂಚಿಸುವ ವಿಭಿನ್ನ ಪ್ರಯತ್ನ ಇದಾಗಿದೆ.

ಅಭಿಯಾನದ ಪ್ರಾರಂಭದಲ್ಲಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಮೂಲಕಸೌಕರ್ಯದ ಕೊರತೆಯಿಂದ ಅಪಾರ ಆಸ್ತಿಪಾಸ್ತಿ ಹಾಗೂ ಜೀವಹಾನಿಯುಂಟಾಗುತ್ತಿರುವ ಸಮಸ್ಯೆಯನ್ನು ಕೈಗೆತ್ತುಕೊಳ್ಳಲಾಗಿದೆ.

“ನಿರಂತರವಾಗಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸುವ ಕರ್ನಾಟಕದ ಯುವಜನರ ಧ್ವನಿಗೆ ಈ ಅಭಿಯಾನದ ಮೂಲಕ ವೇದಿಕೆ ಒದಗಿಸಬೇಕೆನ್ನುವುದು ನನ್ನ ಆಶಯ. ಕರ್ನಾಟಕದ ಒಬ್ಬ ಜವಾಬ್ದಾರಿಯುತ ಯುವನಾಗರೀಕನಾಗಿ ‘ನಾವು ಇಂದು ಮಾಡುವ ಆಯ್ಕೆ, ನಾಳಿನ ನಮ್ಮ ಭವಿಷ್ಯ’ ಎನ್ನುವ ಅರಿವು ನನಗಿದೆ. ನಮ್ಮ ಆಯ್ಕೆಯು ಸಶಕ್ತವಾಗಿರಲು ‘ಲೆಟ್ಸ್ ಟೇಕ್ ಚಾರ್ಜ್’ ಎನ್ನುವ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ” ಎಂದು ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೊಹ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದರು.

“ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸುವಂತೆ ಮಾಡಲು ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯುವಕರ ಪಾತ್ರ ಮಹತ್ವದ್ದು” ಎಂದು ಮೊಹ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.

ಅಭಿಯಾನದ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪರಿಹಾರೋಪಾಯವನ್ನು ಸೂಚಿಸಿ ವಿಜೇತರಾದವರು ಐಫೋನ್ ೧೨ ಸೇರಿದಂತೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ೫೧, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ೨೧ ಮತ್ತು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎ ಅನ್ನು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಪಡೆಯಲಿದ್ದಾರೆ.

“ಸ್ಪರ್ಧೆಯು ಗಂಭೀರತೆಯನ್ನು ಕಳೆದುಕೊಳ್ಳಬಾರದೆಂದು ಮೊದಲ ಉತ್ತಮ ನಾಲ್ಕು ವಿಚಾರಗಳಿಗೆ ಐಫೋನ್ 12, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ51, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ21 ಮತ್ತು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಗಳನ್ನು ಬಹುಮಾನವಾಗಿ ನೀಡಲಾಗುವುದು” ಎಂದು ತಿಳಿಸಿದ ಅವರು, ಜನರಿಂದ ಬಂದ ಸಲಹೆಗಳನ್ನು ತಜ್ಞರ ಸಮಿತಿಯ ಮುಂದಿರಿಸಿ ಅವುಗಳನ್ನು ಕಾರ್ಯಗತಗೊಳಿಸಲು ಇರುವ ಸಾಧ್ಯತೆಯನ್ನು ವಿಮರ್ಶಿಸಲಾಗುವುದು ಎಂದರು.

“28 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ, ರಾಜಕಾರಣದ ಕೇಂದ್ರಬಿಂದುವಾಗಿರುವ ಭಾರತದ ಐಟಿ ರಾಜಧಾನಿ ಮಳೆಗಾಲದ ದಿನಗಳಲ್ಲಿ ನೀರಲ್ಲಿ ಮುಳುಗುವುದು ಸಾಮಾನ್ಯವಾಗಿದ್ದು, ಇದೊಂದು ಪ್ರತಿವರ್ಷದ ಸಮಸ್ಯೆಯಾಗಿದೆ” ಎಂದು ಮೊಹ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದರು.

ಕರ್ನಾಟಕದಲ್ಲಿ ವಾಸಿಸುವ 18ರಿಂದ 35 ವರ್ಷದೊಳಗಿನವರು ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಸ್ಪರ್ಧೆಯ ಕುರಿತು ವಿವರಿಸಿದರು. ಅಭಿಯಾನಕ್ಕೆ ಸಂಬಂಧಿಸಿದಂತೆ 9999845988 ವಾಟ್ಸ್ಆಪ್ ನಂಬರ್ ಅನ್ನು ಬಿಡುಗಡೆ ಮಾಡಲಾಗಿದ್ದು, ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನದ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಸ್ಪರ್ಧಾಳುಗಳು ಗೂಗಲ್ ಫಾರ್ಮ್ ಮೂಲಕ ತಮ್ಮ ಸಲಹೆ-ಸೂಚನೆಗಳನ್ನು ಸಲ್ಲಿಸಬಹುದಾಗಿದ್ದು, ಗೂಗಲ್ ಫಾರ್ಮ್ ಲಿಂಕ್ ಅನ್ನು ಮೊಹ್ಮದ್ ಹ್ಯಾರೀಸ್ ನಲಪಾಡ್ ಅವರ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ. ಒಬ್ಬ ಸ್ಪರ್ಧಾಳುವಿಗೆ ಒಂದು ಎಂಟ್ರಿಗೆ ಮಾತ್ರ ಅವಕಾಶ. ಕನ್ನಡ, ಇಂಗ್ಲೀಶ್ ಹಾಗೂ ಹಿಂದಿ ಭಾಷೆಯಲ್ಲಿ ಗೂಗಲ್ ಫಾರ್ಮ್ ಭರ್ತಿ ಮಾಡಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version