ನೆಲದನಿ

ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ: ಕುವೆಂಪು

Published

on

ಕುವೆಂಪು ಅವರು 20ನೇ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ “ಯುಗದ ಕವಿ; ಜಗದ ಕವಿ” ಎಂದೆನಿಸಿಕೊಂಡವರು. ಕನ್ನಡದ ಎರಡನೇ ರಾಷ್ಟ್ರಕವಿಯಾಗಿ ನಾಡಿಗೆ ಕೀರ್ತಿ ತಂದವರು. ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಕನ್ನಡದ ಈ ಮೇರು ಕವಿ ನಮ್ಮ ಶಿವಮೊಗ್ಗದವರು ಎಂಬುದೇ ನಮ್ಮ ಹೆಮ್ಮೆ.

ಶಿವಮೊಗ್ಗ ಜಿಲ್ಲೆ ಸಾಹಿತ್ಯದ ತವರು. ಸಾಕಷ್ಟು ಕವಿಗಳು, ಲೇಖಕರ ಜೊತೆಗೆ ರಾಜಕಾರಣಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ ಹೆಗ್ಗಳಿಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯದು. ಅಂತಹ ಅತ್ಯುತ್ತಮ ಕೊಡುಗೆಗಳಲ್ಲಿ ಒಬ್ಬರು ರಾಷ್ಟ್ರಕವಿ ಕುವೆಂಪು.

ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಗ್ರಾಮವೊಂದರಲ್ಲಿ 1904ರಲ್ಲಿ ಸೀತಮ್ಮ ಮತ್ತು ವೆಂಕಟಪ್ಪ ಅವರ ಮಗನಾಗಿ ಜನಿಸಿದ ಕುವೆಂಪುರವರು ತಮ್ಮ ಬಾಲ್ಯವನ್ನೆಲ್ಲಾ ಶಿವಮೊಗ್ಗದ ಕುಪ್ಪಳ್ಳಿಯಲ್ಲಿ ಕಳೆದರು. ಕನ್ನಡದಲ್ಲಿ ಎಂ.ಎ. ಪದವೀರರಾಗಿದ್ದ ಇವರು ಮೈಸೂರಿನ ಮಹರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿ ನಂತರ ಉಪಕುಲಪತಿಗಳಾದರು.

ಹೇಮಾವತಿ ಅವರನ್ನು ವಿವಾಹವಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರಿಗೆ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಮತ್ತು ತಾರಿಣಿ ಎಂಬ ನಾಲ್ಕು ಮಕ್ಕಳು. 1994ರಲ್ಲಿ ನಿಧನರಾದ ಕುವೆಂಪುರವರನ್ನು ಕುಪ್ಪಳ್ಳಿಯಿಂದ ಅನತಿ ದೂರದಲ್ಲಿರುವ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಇಂದು ಆ ಸ್ಥಳ ಕವಿಶೈಲ ಎಂದು ಪ್ರಸಿದ್ಧಿ ಪಡೆದಿದೆ.

ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಗೆ 1966ರಲ್ಲಿ ಜ್ಞಾನಪೀಠ ಹಾಗೂ 1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಈ ಮೂಲಕ ಕನ್ನಡವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಕುವೆಂಪುರವರದು.

1964ರಲ್ಲಿ ರಾಷ್ಟ್ರಕವಿ ಎಂಬ ಪುರಸ್ಕಾರ ಪಡೆದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತೆ ಮಾಡಿದ ಕುವೆಂಪು ಅವರನ್ನು . ಪದ್ಮಭೂಷಣ, ಪಂಪ ಪ್ರಶಸ್ತಿ, ಪದ್ಮವಿಭೂಷಣ, ಕರ್ನಾಟಕ ರತ್ನ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದವು.

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಎಂಬ ಪಂಚಮಂತ್ರವನ್ನು ಜಗತ್ತಿಗೆ ಸಾರಿದ ಕುವೆಂಪುರವರ ಜನ್ಮದಿನವಾದ ಡಿಸೆಂಬರ್ 29ನ್ನು ಕರ್ನಾಟಕ ಸರ್ಕಾರವು 2015ರಿಂದ ‘ವಿಶ್ವ ಮಾನವ ದಿನ’ವನ್ನಾಗಿ ಆಚರಿಸುವಂತೆ ಆದೇಶವನ್ನು ಹೊರಡಿಸಿ ಮಹಾನ್ ಕವಿಗೆ ಗೌರವ ಸಮರ್ಪಿಸಿದೆ.

ಬಾಲ್ಯದಿಂದಲೇ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕುವೆಂಪು ಅವರು ಇಂಗ್ಲೀಷ್ ನವೋದಯ ಕಾಲದ ರಮ್ಯ ಕವಿಗಳ ಪ್ರಭಾವಕ್ಕೊಳಗಾಗಿ ‘ಬಿಗಿನರ್ಸ್ ಮ್ಯೂಸ್’ ಎಂಬ ಆರು ಇಂಗ್ಲೀಷ್ ಕವನಗಳ ಕವನಸಂಕಲನವನ್ನು 1922ರಲ್ಲಿ ರಚಿಸಿದ್ದರು. ನಂತರ ಗುರುಗಳಾದ ಜೇಮ್ಸ್ ಕಸಿನ್ ಅವರ ಸಲಹೆಯಂತೆ ಕನ್ನಡದಲ್ಲಿಯೇ ಬರೆಯಲಾರಂಭಿಸಿದರು.

ಶ್ರೀ ರಾಮಾಯಣ ದರ್ಶನಂ, ಮಲೆಗಳಲಿ ಮದುಮಗಳು, ಕಾನೂರು ಹೆಗ್ಗಡತಿ, ಸ್ಮಶಾನ ಕುರುಕ್ಷೇತ್ರ, ಜಲಗಾರ, ಶೂದ್ರತಪಸ್ವಿ, ವಿಚಾರಕ್ರಾಂತಿಗೆ ಆಹ್ವಾನ ಮುಂತಾದ ಬರಹಗಳು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಇವರ ಮಂತ್ರಮಾಂಗಲ್ಯದ ಪರಿಕಲ್ಪನೆ ಯುವಜನರನ್ನು ಆಕರ್ಷಿಸಿತು.
ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಷೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಕುಪ್ಪಳ್ಳಿ ಎನ್ನುವ ಸಣ್ಣ ಗ್ರಾಮದಿಂದ ರಾಷ್ಟ್ರಕವಿಯಾಗುವವರೆಗಿನ ಕುವೆಂಪುರವರ ಸಾಹಿತ್ಯ ಪಯಣ ನಿಜಕ್ಕೂ ಸ್ಪೂರ್ತಿದಾಯಕ. ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಮನ್ನಣೆ ತಂದು ಕೊಟ್ಟ ಕುವೆಂಪುರವರಿಗೆ ಜಿಲ್ಲೆಯ ಜನರು ಎಂದಿಗೂ ಋಣಿ.

ಕೃಪೆ : ಡಿ ಐ ಪಿ ಆರ್ ಶಿವಮೊಗ್ಗ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version